Advertisement

UV Fusion: ಮಣಭಾರ ಒಯ್ಯಬೇಕು, ಬೆಟ್ಟವನ್ನೂ ಏರಬೇಕು ಎಂದರೆ ಆಗದು!

04:31 PM Jan 12, 2025 | Team Udayavani |

ಟೈಮ್‌ ಹೋಗೋದೇ ಗೊತ್ತಾಗಲ್ಲ, ಅನ್ನುತ್ತಲೇ ವರ್ಷದ ಕೊನೆಗೆ ಬಂದು ನಿಂತಿದ್ದೇವೆ.! ಕಷ್ಟವೋ ಸುಖವೋ, ನಗುವೋ ಅಳುವೋ, ಹುಟ್ಟೋ ಸಾವೋ ಏನೇ ಆದರೂ ಈ ಕಾಲವನ್ನು ತಡೆಯೋರು ಯಾರೂ ಇಲ್ಲ ನೋಡಿ.

Advertisement

ಇದೊಂಥರಾ ಸಿನೆಮಾದಂತೆ. ಕಥೆ ನಾವು ಬರೆದಿಲ್ಲ. ನಿರ್ದೇಶನವೂ ನಮ್ಮದಲ್ಲ. ಅದರ ಮೇಲೆ ಯಾವ ನಿಯಂತ್ರಣವೂ ಇಲ್ಲ. ಆದ್ರೂ ಸಿನೆಮಾ ಚೆನ್ನಾಗಿರ್ಬೋದು ಅನ್ನೋ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಥಿಯೇಟರ್‌ಗೆ ಹೋಗ್ತೀವೆ. ಕೊನೆಗೆ ಸಕತ್ತಾಗಿದೇ ಅಂತಾನೋ, ಡಬ್ಟಾ ಮೂವಿ ಅಂತಾನೋ, ಕೆಲವೊಂದ್ಸಲ ಪರ್ವಾಗಿಲ್ಲ ಅಂತಾನೋ ಅಂದ್ಕೋತೀವಿ. ಅಂತೂ ಸಿನೆಮಾ ಮುಗೀಲೇ ಬೇಕು, ನಾವು ಮನೆಗೆ ವಾಪಸ್‌ ಬರ್ಲೇಬೇಕು.

ನಿರೀಕ್ಷೆ ಅನ್ನೋದು ಎಲ್ಲರನ್ನೂ ಆಟಾಡ್ಸುತ್ತೆ. ಸಿಹಿಯ, ಗೆಲುವಿನ, ಖುಷಿಯ, ಸುಖದ ನಿರೀಕ್ಷೆ. ಎಂತಾ ಸೋಲಿನಲ್ಲೂ, ಎಂತಾ ಗೆಲುವಿನಲ್ಲೂ ಭವಿಷ್ಯದ ನಿರೀಕ್ಷೆ ಇದ್ದೇ ಇರುತ್ತೆ. ಇಲೇìಬೇಕು. ಇಲ್ಲದಿದ್ದರೆ ಅದೇ ಅಂತ್ಯ. ನಮ್ಮ ಹುಟ್ಟಿದ ಹಬ್ಬವೋ, ಹೊಸ ವರ್ಷವೋ ವಿಶೇಷವಾಗೋದು ಇದಕ್ಕೇ. ಈ ವರ್ಷ ಹೇಗಿತ್ತು ಎಂಬ ಯೋಚನೆಯೊಂದಿಗೆ, ಹೊಸ ವರ್ಷ ಹೇಗಿರಬೇಕು ಎಂಬ ಮತ್ತದೇ ನಿರೀಕ್ಷೆ. ಇದನ್ನು ಕುತೂಹಲ, ಆಶಾಭಾವ ಏನಾದರೂ ಅನ್ನಿ.

ಹೊಸ ವರ್ಷಕ್ಕೆ ಯೋಜನೆ ಬೇಕಾ?
ಯೋಜನೆಯಿಲ್ಲದಿದ್ದರೆ ನಮ್ಮ ಜೀವನ ಅದೃಷ್ಟವನ್ನೇ ಅವಲಂಬಿಸಿರುತ್ತದೆ. ಹಗ್ಗದ ಮೇಲಿನ ನಡಿಗೆಗಿಂತ ಮುಳ್ಳಿನ ದಾರಿಯೇ ಆದೀತಲ್ಲವೇ? ಹೊಸ ವರ್ಷದಲ್ಲಿ ನಾನೇನು ಮಾಡಬಹುದು, ಏನನ್ನು ಮಾಡಲೇಬೇಕು ಎಂಬ ಯೋಚನೆ- ಯೋಜನೆ ಖಂಡಿತಾ ಇರಲಿ. ನಿರೀಕ್ಷೆ ಇರಲಿ. ಆದರೆ ಮಣಗಟ್ಟಲೆ ಭಾರವನ್ನೂ ಒಯ್ಯಬೇಕು, ಬೆಟ್ಟವನ್ನೂ ಏರಬೇಕು ಎಂದರೆ ಆಗದು. ನಿರೀಕ್ಷೆ ತೀರಾ ಜಾಸ್ತಿಯಾಗದಿರಲಿ. ಅದೇ ಹೊರೆಯಾದರೆ ಬೇರೆ ಯಾವ ಶತ್ರುವೂ ಬೇಡ, ಅದೇ ನಮ್ಮನ್ನು ಸೋಲಿಸುತ್ತದೆ.

ಜೀವನವನ್ನು ಸುಂದರವಾಗಿಸೋದು ಹೇಗೆ?
ಎಲ್ಲ ಇದ್ದವರಿಗಷ್ಟೇ ಜೀವನ ಅನ್ನೋದು ಸುಂದರ, ಅವರಿಗೆ ಕಷ್ಟ ಗೊತ್ತಿಲ್ಲ, ಎಂದೆನಿಸಬಹುದು. ಅದು ಹಾಗಲ್ಲ. ಮನುಷ್ಯ ಜನ್ಮ ಶ್ರೇಷ್ಠ ಜನ್ಮ ಎನ್ನುತ್ತೇವೆ. ಅದು ಆಧ್ಯಾತ್ಮ, ಬೇಡ ಅನಿಸಿದರೆ ಮತ್ತೆ ಆ ನಿರೀಕ್ಷೆಯನ್ನು ನೆನಪಿಸಿಕೊಳ್ಳಿ. ಏಕೆಂದರೆ ನಿಮ್ಮ ಯೋಚನೆಗೆ ಅದೇ ಮದ್ದು. ಜೀವನದಲ್ಲಿ ಕಷ್ಟ- ಸುಖ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕಷ್ಟ ಇಲ್ಲದಿದ್ದರೆ ಸುಖದ ಬೆಲೆಯಾದರೂ ಹೇಗೆ ತಿಳಿಯುತ್ತದೆ. ನಿರೀಕ್ಷೆಯಿರಲಿ. ಸುಂದರ ನಾಳೆಯ ನಿರೀಕ್ಷೆಯಿರಲಿ. ಆಗಲಷ್ಟೇ ಈ ಜಗತ್ತಿನ ಸೌಂದರ್ಯ ಕಾಣುತ್ತದೆ. ಆಗ ನಿರೀಕ್ಷೆ ಇದ್ದರಷ್ಟೇ ಬಡತನದಲ್ಲೂ ಸುಖವನ್ನು ಕಾಣಬಹುದು, ಕಷ್ಟದಲ್ಲೂ ಸುಖವನ್ನು, ನೋವಲ್ಲೂ ನಲಿವನ್ನು ಕಾಣಬಹುದು. ಇದರರ್ಥ ನಿರೀಕ್ಷೆ ಇದ್ದರಷ್ಟೇ ಜೀವನ. ಕಷ್ಟಗಳನ್ನು, ಋಣಾತ್ಮಕ ಯೋಚನೆಗಳನ್ನೂ ಈಸಿ ಬರಲು ಅದೇ ನಮಗೆ ಸ್ಫೂರ್ತಿ.

Advertisement

ಹಾಗಾದರೆ ಹೇಗೆ ಬದುಕಲಿ?
ಯುದ್ಧರಂಗದಲ್ಲಿ ಅರ್ಜುನನಿಗೆ ಕಾಡಿದ ನೂರಾರು ಪ್ರಶ್ನೆಗಳಿಗೆ ಪರಮಾತ್ಮ ಶ್ರೀಕೃಷ್ಣ ಉತ್ತರ ನೀಡಿದ್ದಾನೆ. ಆ ಭಗವದ್ಗೀತೆ ನಮ್ಮ ಜೀವನದಲ್ಲಿ ಬರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತದೆ. ಯಾವುದು ತಪ್ಪು ಯಾವುದು ಸರಿ? ಹೇಗಿರಬೇಕು, ಹೇಗಿರಬಾರದು? ತಪ್ಪು ಮಾಡದಿದ್ದರೂ ನನಗೇಕೆ ಶಿಕ್ಷೆ? ತಪ್ಪು ಮಾಡಿದವನಿಗೂ ಸುಖವೇಕೆ? ನಾನೇಕೆ ಭಿಕ್ಷುಕನಂತಿದ್ದೇನೆ, ಅವನೇಕೆ ಸುಖದ ಸುಪ್ಪತ್ತಿಗೆಯಲ್ಲಿದ್ದಾನೆ? ಹೀಗೆ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ. ಅದನ್ನು ಕಂಡುಕೊಂಡರೆ ನಾವು ನಿರೀಕ್ಷೆಯ ಭಾರದಲ್ಲಿ ನಲುಗುವುದಿಲ್ಲ. ಅದನ್ನೂ ನಂಬದವರಿಗೆ, ಅರ್ಥಮಾಡಿಕೊಳ್ಳಲಾಗದವರಿಗೆ, ಗೊಂದಲಕ್ಕೊಳಗಾದವರಿಗೆ ಅಣ್ಣ ಬಸವಣ್ಣನವರ ವಚನ ಪರಿಹಾರವಾಗಬಹುದೇನೋ.

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.

ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ
ನೀವು ಜೀವನದ ಬಗ್ಗೆ ಯೋಚಿಸಿ ಯೋಚನೆಗಳು ಸುಕ್ಕಾಗುವುದು ಬೇಡ. ನೀವು ಆತ್ಮಾಭಿಮಾನದಿಂದ ಬದುಕಲು, ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳಲು, ಪರಮಾತ್ಮನಿಗೆ ಪರಮಾಪ್ತನಾಗಲು ಕೆಲವು ಸರಳ ಮಾರ್ಗಗಳನ್ನು ಅನುಸರಿಸಿದರೆ ಸಾಕು. ಕಳಬೇಡ, ಅನ್ಯರ ಸಂಪತ್ತಿಗೆ ಆಸೆ ಪಡಬೇಡ. ಅದನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುವುದು. ಅದರಲ್ಲಿ ಯಶ ಕಂಡರೂ, ನಿನ್ನಲ್ಲಿ ತಪ್ಪಿತಸ್ಥ ಭಾವನೆ ಸದಾ ಉಳಿದುಬಿಡುತ್ತದೆ. ಕೊಲಬೇಡ…ನಮಗೆ ಜೀವ ಕೊಡುವ ಶಕ್ತಿ ಇಲ್ಲದಿದ್ದಾಗ ಬೇರೊಬ್ಬರ ಜೀವ ತೆಗೆಯುವ ಹಕ್ಕೂ ಇಲ್ಲ. ಅದು ಮಹಾ ಪಾಪ. ಸುಳ್ಳಾಡಬೇಡ. ದಂಡನೆಗೊಳಗಾದರೂ ತೊಂದರೆಯಿಲ್ಲ, ಸತ್ಯವನ್ನೇ ಆಡು. ಮುನಿಯಬೇಡ, ಸಿಟ್ಟು ನಿನಗೂ ಪರರಿಗೂ ಅಪಾಯ. ಸಿಟ್ಟು ಬಂದರೆ ವಿವೇಚನೆ ಕಳೆದುಕೊಳ್ಳುತ್ತೇವೆ. ನಮ್ಮಿಂದ ಪಾಪಕೃತ್ಯ ನಡೆದುಬಿಡಬಹುದು.

ಯಾರಿಗೂ ಅಸಹ್ಯಪಡಬೇಡ, ನಿಮ್ಮಂತೆ ಪರರೂ ಭಗವಂತನ ಸೃಷ್ಟಿ, ಅವರಿಗೂ ಯಾವುದೋ ಒಂದು ಪಾತ್ರವಿಕೆ, ಬದುಕುವ ಹಕ್ಕಿದೆ. ನಿನ್ನನ್ನು ನೀವು ಬಣ್ಣಿಸಿಕೊಳ್ಳಬೇಡ. ಸಾಧನೆಯನ್ನು ಇತರರು ಗುರುತಿಸಿ ಬಣ್ಣಿಸಿದರೆ ಅದರ ಮೌಲ್ಯ ಹೆಚ್ಚುತ್ತದೆ, ಇಲ್ಲವಾದರೆ ಅದು ಬೆಲೆ ಕಳೆದುಕೊಳ್ಳುತ್ತದೆ. ಯಾರ ಮನಸ್ಸಿಗೂ ನೋವುಂಟುಮಾಡಬೇಡ. ಅದು ದೈಹಿಕ ಹಲ್ಲೆಯಷ್ಟೇ ಪಾಪಕೃತ್ಯ. ಇಷ್ಟನ್ನು ಪಾಲಿಸಿದರೆ ಯಾರೂ ನಮ್ಮತ್ತ ಬೊಟ್ಟು ಮಾಡಲಾರರು, ಯಾವ ಪಾಪಪ್ರಜ್ಞೆಯೂ ನಮ್ಮನ್ನು ಕಾಡಲು ಸಾಧ್ಯವಿಲ್ಲ. ಇದೇ ಭಗವಂತನನ್ನು ಒಲಿಸಿಕೊಳ್ಳುವ ಪರಿ ಎಂದು ಸರಳವಾಗಿ ವಿವರಿಸಿದ್ದಾರೆ ಅಲ್ಲವೇ? ಇದನ್ನೇ ನಾವು ಸಂಸ್ಕಾರ ಅನ್ನುತ್ತೇವೆ. ಎಂತಹಾ ಅಲ್ಪನಿಗೂ ಇದನ್ನು ಸಂಪಾದಿಸಲು ಸಾಧ್ಯವಿದೆ.

ನೀವು ಶ್ರೀಮಂತರಾಗಿರಬೇಕಿಲ್ಲ, ದಾನ- ಧರ್ಮ ಮಾಡಬೇಕಿಲ್ಲ. ಆದರೆ ಸಮಾಜಕ್ಕೆ ಸಮಸ್ಯೆಯಾಗದಿದ್ದರೆ ಅದೇ ಸಾಕು. ಕಸ ಹೆಕ್ಕದಿದ್ದರೂ ಕಸ ಎಸೆಯಬೇಡ ಎಂಬಂತೆ ನನಗೇನೂ ಮಾಡಲಾಗುತ್ತಿಲ್ಲ ಎಂಬ ಭಾವನೆ ಬೇಡ. ತಪ್ಪುಮಾಡದಿರುವುದೇ ಪುಣ್ಯದ ಕೆಲಸ. ನಿಮ್ಮನ್ನು ನೋಡಿ ಒಂದಷ್ಟು ಜನ ಅದನ್ನೇ ಅನುಸರಿಸಿದರೆ, ಸಮಾಜ ಎಷ್ಟು ಸುಂದರವಾದೀತಲ್ಲವೇ?

ಹೊಸ ವರ್ಷಕ್ಕೆ ಇದೇ ಸಂಕಲ್ಪ: ಬಸವಣ್ಣನ ಕಳಬೇಡ, ಕೊಲಬೇಡ ಎಂಬ ವಚನವನ್ನು ಓದಿ ಅರ್ಥಮಾಡಿಕೊಂಡು ಅಳವಡಿಸಿಕೊಂಡರೆ ಹೊಸ ವರ್ಷಕ್ಕೆ ಅದಕ್ಕಿಂತ ಒಳ್ಳೆಯ ಸಂಕಲ್ಪ ಇನ್ನೇನು ಬೇಕು? ಹುಟ್ಟು ಸಾವು ಸೂರ್ಯ ಚಂದ್ರರಷ್ಟೇ ಸತ್ಯ- ಸಹಜ. ಕೊನೆಯಲ್ಲಿ ನಮ್ಮನ್ನು ನಾಲ್ಕು ಜನ ಒಳ್ಳೆಯ ಕೆಲಸಕ್ಕಾಗಿ ನೆನೆಯುವಂತೆ ಬದುಕುವ ಪ್ರಯತ್ನ ಮಾಡೋಣ. ಅದು ನಮ್ಮ ಜೀವನವನ್ನು ಸಾರ್ಥಕವಾಗಿಸುವುದರ ಜತೆಗೆ ಇನ್ಯಾರದೋ ಜೀವನಕ್ಕೆ ಉತ್ತಮ ಆರಂಭ ಒದಗಿಸುತ್ತದೆ.

ಜೀವನವನ್ನು ಪ್ರೀತಿಸಿ ಎಷ್ಟೇ ಕಷ್ಟ ಬಂದರೂ ಜೀವನವನ್ನು ಶಪಿಸಬೇಡಿ, ಜಿಗುಪ್ಸೆ ಪಡಬೇಡಿ. ಈ ಜೀವನವೇ ನಮ್ಮ ಹಿರಿಯರು, ದೇವರು ನಮಗೆ ಕೊಟ್ಟಿರುವ ಆಸ್ತಿ. ಈ ಹೊಸ ವರ್ಷ ಹೊಸ ನಿರೀಕ್ಷೆ ಮೂಡಿಸಿದೆ, ಹೊಸ ಅವಕಾಶ ನೀಡಿದೆ. ಒಬ್ಬ ವ್ಯಕ್ತಿಯಾಗಿ, ಕುಟುಂಬದ, ಸಮಾಜದ ಭಾಗವಾಗಿ ನಿಮ್ಮ ಕರ್ತವ್ಯವನ್ನು ನೆರವವೇರಿಸಿ, ನಮ್ಮನ್ನು ನಿಜಾರ್ಥದಲ್ಲಿ ಶುಚಿಯಾಗಿಟ್ಟುಕೊಳ್ಳೋಣ. ಹೊಸ ವರ್ಷದಲ್ಲಿ ಹೊಸ ಪ್ರಯತ್ನಗಳೊಂದಿಗೆ, ಹೊಸ ನಿರೀಕ್ಷೆಗಳೊಂದಿಗೆ ಮುನ್ನುಗ್ಗೋಣ. ಅನುಭವವೆಂಬ ಆಸ್ತಿ ಸಂಪಾದಿಸೋಣ. ಅದು ಯಾವತ್ತಿಗೂ ವ್ಯರ್ಥವಾಗುವುದಿಲ್ಲ.

ಗುರುಪ್ರಸಾದ್‌ ಟಿ.ಎನ್‌., ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.