ಕಷ್ಟ ತಿಳಿಸದೆ ನಾಲ್ಕು ಮಕ್ಕಳ ವಿದ್ಯಾಭ್ಯಾಸ ಮಾಡಿಸಿದೆ, ಇಂದು ಅವರು ವಿದೇಶದಲ್ಲಿ ಉನ್ನತ ಕಂಪೆನಿಯಲ್ಲಿ ಕೆಲಸ ಪಡೆದುಕೊಂಡಿದ್ದಾರೆ. ಒಳ್ಳೆಯ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಇಂದು ನನ್ನಿಂದ ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಕೊನೆ ಉಸಿರು ನಿಲ್ಲುವಾಗ ನನ್ನವರೊಂದಿಗೆ ನಾ ಇರಬೇಕು ಎಂಬುದು ನನ್ನಾಸೆ . ಮಕ್ಕಳ ಆಸೆಗಳನ್ನು ನನ್ನಲ್ಲಿ ಏನು ಇಲ್ಲದಿದ್ದರೂ ಕಷ್ಟಪಟ್ಟು ನೆರವೇರಿಸಿದೆ, ಆದರೆ ಈಗ ಅವರಲ್ಲಿ ಎಲ್ಲವು ಇದ್ದರೂ ನನ್ನ ಚಿಕ್ಕ ಆಸೆಯನ್ನು ನೆರವೇರಿಸಿಲ್ಲ ಎಂದು ವೃದ್ಧಾಶ್ರಮದಲ್ಲಿ ಇರುವ ಒಬ್ಬರು ನೋವಿನಿಂದ ಕಣ್ಣ ಹನಿಯೊಂದಿಗೆ ಹೇಳುವಾಗ ಒಮ್ಮೆ ಕಲ್ಲಾಗಿ ಕುಳಿತೆ ನಾನು.
ವೃದ್ಧಾಶ್ರಮ ವಯಸ್ಸಿನ ನೆನಪನ್ನು ಮಾಡಿಸುವ ಒಂದು ವಿಶೇಷ ತಾಣ’ ನಾನೊಮ್ಮೆ ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಈ ಮಾತುಗಳನ್ನು ಕೇಳಿ ಸಾವಿರಾರು ಯೋಚನೆಗಳು ನನ್ನ ಸುತ್ತ ಸುಳಿಯಿತು. ಅದೆಷ್ಟೋ ಹೆತ್ತವರ ಕೂಗು ಇನ್ನೂ ನನ್ನ ಕಿವಿಯಲ್ಲಿ ಗುನುಗುತ್ತಿದೆ. ತಿಳಿಯದ ಯಾರೊ ಬಂದು ಮಾತನಾಡಿಸುವಾಗ ನಮ್ಮವರ ನೆನಪಾಗುವುದು ಎಂದು ಕಣ್ಣ ಹನಿಯೊಂದಿಗೆ ಅವರ ಅಳಲನ್ನು ಹೇಳ ತೊಡಗುವರು.
ಎಷ್ಟೊಂದು ಮೌನ ತುಂಬಿದ ಮಾತಲ್ಲವೆ ಅವರದ್ದು . ಇಂದಿನ ದಿನಗಳಲ್ಲಿ ಹೆತ್ತವರು ನಮ್ಮ ಏಕಾಂತಕ್ಕೆ ಅಡ್ಡಿ ತರುತ್ತಾರೆಂದು ಅವರನ್ನೇ ಮನೆಯಿಂದ ಹೊರಹಾಕಿ ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಪ್ರವೃತಿ ಹೆಚ್ಚಾಗುತ್ತಿದ್ದು. ಇನ್ನು ಆವರ ಆಸೆ ಆಕಾಂಕ್ಷೆಗಳನ್ನು ಈಡೇರಿಸುವುದು ದೂರದ ಮಾತಾಗಿದೆ.
ಹಿರಿಯ ಜೀವಗಳಿಗೆ ಕೊನೆಗಾಲದಲ್ಲಿ ಹೆಚ್ಚೆಂದರೆ ಮೊಮ್ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತ ಮಕ್ಕಳ ಏಳಿಗೆ ಬಯಸುತ್ತಾ ಜೀವನ ಸಾಗಿಸಬೇಕು ಎಂಬ ಆಸೆ ಇರುತ್ತದೆ . ಆದರೆ ಈಗ ಹಣ ನೀಡಿ ವೃದ್ಧಾಶ್ರಮಕ್ಕೆ ಬಿಡುವಷ್ಟು ಹೀನ ಮನಸ್ಸಿನ ಮನುಷ್ಯರಿದ್ದು, ಮನುಷ್ಯತ್ವಕ್ಕೆ ಬೆಲೆ ಎಲ್ಲಿದೆ ಎಂಬ ಪ್ರಶ್ನೆ ಕಾಡುತ್ತದೆ .
ಒಂಬತ್ತು ತಿಂಗಳು ಹೊತ್ತು ಹೊಸ ಜೀವಕ್ಕೆ ಜನ್ಮವಿತ್ತು ತಾನು ಮರುಜನ್ಮ ಪಡೆಯುವವಳು -ತಾಯಿ, ನೋವನ್ನೆಲ್ಲಾ ನುಂಗುತ್ತಾ ನಗುವನ್ನು ಮಾತ್ರ ಮಕ್ಕಳಿಗಾಗಿ ಮೀಸಲಿಡುವುದು-ತಂದೆ
ಅದನ್ನು ಮರೆತರೆ ನಮ್ಮ ಸಮಯ ಬಂದಾಗ ಅರಿವಾಗುವುದು, ಅಂದು ಯೋಚಿಸಿ ಪ್ರಯೋಜನವೂ ಸಿಗದು, ಹೇಗೆ ನಾವು ಹಿರಿಯರೊಂದಿಗೆ ವರ್ಥಿಸುವೆವೋ ಹಾಗೆಯೆ ನಮ್ಮನ್ನು ನೋಡಿ ನಮ್ಮ ಮಕ್ಕಳು ಕೂಡ ಕಳಿತುಕೊಳ್ಳುತ್ತಾರೆ ಇದನ್ನು ಅರಿತು ಇಂದು ನಾವು ಹೆಜ್ಜೆ ಇಡಬೇಕು.
ಎಂದೂ ನೋವು ಬಯಸದ ಜೀವಕ್ಕೆ ಕೊನೆಗಾಲದಲ್ಲಿ ನೋವು ಉಣಿಸುವುದು ಎಷ್ಟೊಂದು ಸರಿ , ಜೀವನದುದ್ದಕ್ಕೂ ಪ್ರೀತಿ, ಪ್ರೇಮ, ಮಮತೆ ನೀಡಿದ ಜೀವಗಳು ಕೊನೆಗಾಲದಲ್ಲಿ ಅದರ ಕೊರತೆಯಲ್ಲಿ ಕೊರಗಿ ನೋವಿನಲಿ ಜೀವನದ ಅಂತ್ಯ ಕಾಣುವಂತೆ ಮಾಡಿದರೆ ನಮ್ಮ ಜೀವನಕ್ಕೆ ಯಾವುದೇ ಅರ್ಥವಿರಲು ಸಾಧ್ಯವಿಲ್ಲ. ನಾವೆಲ್ಲ ವಿದ್ಯಾವಂತರಾದರೆ ಸಾಕಾಗದು, ಮಾನವರಾಗಬೇಕು.
-ರಕ್ಷಿತಾ
ಚಪ್ಪರಿಕೆ