ಪ್ರತಿಯೊಬ್ಬರ ಬದುಕಿನಲ್ಲಿ ಹೊಸತನ ಅನ್ನುವುದು ಅವರ್ತನ ಪದ್ಧತಿಯಲ್ಲಿ ನಡೆಯುತ್ತಲೇ ಇರುತ್ತದೆ. ಪ್ರತಿಯೊಂದು ಹೊಸತನದ ಆರಂಭಕ್ಕೆ ಅದರದ್ದೇ ಆದ ಹಿನ್ನಲೆ ಇರುತ್ತದೆ. ಅದೇ ರೀತಿ ಪ್ರತಿಯೊಬ್ಬರ ಜೀವನದಲ್ಲಿ ಹೊಸ ವರ್ಷವೆನ್ನುವುದು ಅನೇಕ ಹೊಸತನಗಳ ಹೊಸ ಆಲೋಚನೆಗಳ ಹೊಸ ಆಯಾಮಗಳ ರೂಪುರೇಷೆಯೊಂದಿಗೆ ಹೆಣೆದುಕೊಂಡಿರುತ್ತದೆ.
ಹೊಸ ವರುಷವು ಹೇಗೆ ಹೊಸತನದಿಂದ ಕೂಡಿರುತ್ತದೆಯೋ ಹಾಗೇಯೇ ಮುಕ್ತಾಯಗೊಳ್ಳುತ್ತಿರುವ ವರ್ಷವು ಅನೇಕ ಜೀವನ ಪಾಠಗಳನ್ನು, ಭಾವನಾತ್ಮಕ ಸಂಬಂಧಗಳನ್ನು ಹಾಗೂ ಮರೆಯಲಾಗದ ಮಾಸಲಾಗದ ಹಲವಾರು ನೆನಪುಗಳನ್ನು ನೀಡಿರುತ್ತದೆ ಮತ್ತು ಶುಭ ವಿದಾಯ ಹೇಳಲು ತುದಿಗಾಲಲ್ಲಿ ನಿಂತಿರುತ್ತದೆ. ಹೇಗೆ ವರ್ಷದ ಪ್ರಾರಂಭವೆನ್ನುವುದು ಹಲವು ಭರವಸೆಗಳಿಂದ ಕನಸುಗಳಿಂದ ಚಿಗುರೊಡೆಯುವುದೋ ಹಾಗೆಯೇ ವರ್ಷದ ಮುಕ್ತಾಯವೆನ್ನುವುದು ಹೆಚ್ಚಿನವರ ಬದುಕಿನಲ್ಲಿ ಭಾವನಾತ್ಮಕ ಪಾಠದೊಂದಿಗೆ ಅಂತ್ಯವಾಗಿರುತ್ತದೆ. ವರ್ಷದ ಅಂತ್ಯದಲ್ಲಿ ಪ್ರತಿ ವ್ಯಕ್ತಿಯೂ ಕೂಡ ಹಲವಾರು ನೆನಪುಗಳ ಮೂಟೆಯನ್ನು ಕೂಡಿಟ್ಟುಕೊಂಡು ಮುಂದಿನ ಹೊಸ ದಾರಿಯತ್ತ ಪಯಣ ಸಾಗಿಸುತ್ತಾನೆ.
ಪ್ರತಿವರ್ಷವು ಕೂಡ ಪ್ರತಿ ವ್ಯಕ್ತಿಯೂ ಈ ವರ್ಷದಲ್ಲಿ ಏನೆಲ್ಲಾ ಮಾಡಬೇಕು ಏನೆಲ್ಲಾ ಸಾಧಿಸಿಬೇಕು ಎನ್ನುವ ಮೈಲಿ ಕಲ್ಲುಗಳನ್ನ ನೆಟ್ಟು ಅದೇ ದಾರಿಯಲ್ಲಿ ಸಾಗಿ ಹಾಕಿಕೊಂಡಿರುವ ಯೋಜನೆಯನ್ನು ಪೂರೈಸಿದರೇ ಇನ್ನು ಕೆಲವರ ಬಾಳಲ್ಲಿ ಹಾಕಿರುವ ಮೈಲಿಗಲ್ಲುಗಳು ಮೈಲಿಗಲ್ಲಾಗಿ ಉಳಿದು ಕೊನೆಗೆ ಬರಿಯ ಕನಸಾಗೆ ಉಳಿದುಬಿಡುತ್ತದೆ. ಪ್ರತಿ ವರ್ಷ ಕಳೆದು ಹೋದಾಗಲೂ ನಾವೇನ್ನಾದರು ಸಾಧಿಸಬೇಕಿತ್ತು ಎಂದು ತಮ್ಮನೇ ತಾವು ಮೂದಲಿಸಿ ವ್ಯಥೆ ಪಡುವ ಜನರೇ ಹೆಚ್ಚು. ಮರಳಿ ಯತ್ನವ ಮಾಡು ಕನಸುಗಳು ನನಸಾಗುವ ತನಕ ಮರಳಿ ಯತ್ನವ ಮಾಡುತ್ತಿರು ಅನ್ನುವ ಮಾತಿನಂತೆ ಯುಗ ಯುಗ ಕಳೆದರು ಹೊಸ ವರ್ಷ ಎನ್ನುವುದು ಪ್ರತಿವರ್ಷ ಬರುತ್ತಲೇ ಇರುತ್ತದೆ. ಈ ಹೊಸವರ್ಷದಲ್ಲಿ ಹಾಕಿಕೊಂಡಿರುವ ಹೊಸ ಯೋಜನೆಗಳನ್ನು ನಮ್ಮ ಸ್ಮತಿ ಪಟಲದಲ್ಲಿ ಹರಿಬಿಡುವ ಮೊದಲು ಆ ಯೋಜನೆಯ ಸ್ಥೂಲ ನೀಲನಕ್ಷೆಯನ್ನ ರೂಪಿಸಿ ಕಾರ್ಯಗತ ಮಾಡುವಂತಹ ಇಚ್ಛಾಶಕ್ತಿ ಪ್ರತಿಯೊಬ್ಬರಿಗೂ ಬರುವಂತಾಗಲಿ ಹಾಗೆಯೇ ಪ್ರತಿವರ್ಷದಂತೆ ಈ ಹೊಸ ವರ್ಷದಲ್ಲೂ ಕೂಡ ಪ್ರತಿಯೊಬ್ಬರ ಕನಸುಗಳು ನನಸಾಗಲಿ.
ಸರ್ವೇ ಜನಃ ಸುಖೀನೋ ಭವಂತು
ಸರ್ವಾನು ಸನ್ಮಂಗಳಾನಿ ಭವಂತು
-ಪ್ರಸಾದ್ ಆಚಾರ್ಯ ಕುಂದಾಪುರ