Advertisement
ಉದಾಹರಣೆಗೆ ಚಿಕ್ಕ ಮಗುವಿನೊಂದಿಗೆ ಆಟ ಆಡುವ ಪ್ರತಿಯೊಬ್ಬರು ಆ ಮಗುವಿನ ಮುಖದಲ್ಲಿ ನಗುವನ್ನು ಕಾಣಲು ಮಗುವಿಗಾಗಿ ಆಟ ಬಿಟ್ಟು ಕೊಡುವ ಮೂಲಕ ನಾನು ಸೋತೆ ನೀನು ಗೆದ್ದೇ ಎಂದು ಹೇಳುತ್ತಾ ಮಗುವಿನಲ್ಲಿ ನಗುವನ್ನು ಮೂಡಿಸಿ ಆ ನಗುವನ್ನು ಕಂಡು ಸಂತೃಪ್ತಿ ಪಡುತ್ತಾರೆ. ಮಗುವಿನ ಮುಂದೆ ಗೆದ್ದು ಸಾಧಿಸುವುದಾದರೂ ಏನು ಎನ್ನುವ ಭಾವನೆ ಅವರಲ್ಲಿ ಇರುತ್ತದೆ.
Related Articles
Advertisement
ಸಾಮಾನ್ಯವಾಗಿ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿದಾಗ ಹೊಸ ಅನುಭವ ದೊರೆಯುತ್ತದೆ. ಆ ಅನುಭವದಿಂದ ಪಾಠ ಕಲಿಯುತ್ತೇವೆ. ಉದಾಹರಣೆಗೆ ಮನೆಯಲ್ಲಿ ನಿತ್ಯ ಬಿಸಿ ನೀರಿನ ಸ್ನಾನ, ಬಿಸಿ ಬಿಸಿ ಆಹಾರ ಸೇವನೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡವರಿಗೆ ಹೊಸ ಸ್ಥಳಗಳಿಗೆ ಪ್ರವಾಸಕ್ಕೆಂದು ಹೋದಾಗ ಸ್ನಾನಕ್ಕೆ ಬಿಸಿ ನೀರು ಸಿಗದಿರುವ ಸಾಧ್ಯತೆ ಇರುತ್ತದೆ.
ಆ ತಣ್ಣೀರಿನ ಸ್ನಾನ ಹೊಸ ಅನುಭವವನ್ನು ನೀಡಬಹುದು. ಅಂತಯೇ ಸೋಲು ಎನ್ನುವುದು ಹೊಸ ಪಾಠವನ್ನು ಹೊಸ ಅನುಭವವನ್ನು ಕಲಿಸುತ್ತದೆ. ಉದಾಹರಣೆಗೆ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಮಾಧ್ಯಮಗಳು ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶವನ್ನು ನೀಡಿದೆ. ಅಲ್ಲಿ ಪಾಲ್ಗೊಳ್ಳಲು ಹೋದ ಪ್ರತಿಯೊಬ್ಬರಿಗೂ ಅವಕಾಶ ದೊರೆಯುವುದಿಲ್ಲ. ಅವಕಾಶ ದೊರೆಯದ ಮಾತ್ರಕ್ಕೆ ಅವರ ಪ್ರತಿಭೆ ಸೋತಿದೆ ಎಂದರ್ಥವಲ್ಲ. ಅದಕ್ಕಿಂತ ಉತ್ತಮವಾದದು ಬದುಕಿನಲ್ಲಿದೆ ಎಂಬುದನ್ನು ಅರಿಯಬೇಕು.
ಸ್ಪರ್ಧೆ ಯಾವುದೇ ಇರಲಿ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಕಾಲಿಡುವುದರ ಜತೆಗೆ ಒಂದು ವೇಳೆ ಸೋತರೆ ಮುಂದಿನ ತಯಾರಿ ಹೇಗಿರಬೇಕು ಎಂಬುದನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ನಮ್ಮ ಮುಂದೆ ಗೆದ್ದಿರುವ ವ್ಯಕ್ತಿ ಯಾವ ಕಾರಣಕ್ಕಾಗಿ ಗೆದ್ದಿದ್ದಾನೆ ಎಂಬುದನ್ನು ಮೊದಲು ಯೋಚಿಸುವುದು ಮುಖ್ಯವಾಗಿರುತ್ತದೆ. ಅದೇ ರೀತಿ ಸೋಲನ್ನು ಸ್ವೀಕರಿಸಿ ಗೆಲುವಿಗಾಗಿ ಮರು ಪ್ರಯತ್ನಿಸಿ ಕಾಯುವ ತಾಳ್ಮೆ ಬಹಳ ಮುಖ್ಯವಾಗಿರುತ್ತದೆ.
ಆಹಾರ ಸೇವಿಸುವಾಗ ನಾಲಗೆಗೆ ಕಹಿ ಅನಿಸಿದರೆ ಅಥವಾ ಅತಿಯಾಗಿ ಕಾರ ಎನಿಸಿದರೆ ಸ್ವಲ್ಪ ಸಿಹಿಯನ್ನು ತಿಂದು ಸುಧಾರಿಸಿಕೊಳ್ಳುತ್ತೇವೆ. ಕೆಲವೊಮ್ಮೆ ತತ್‌ಕ್ಷಣ ಸಿಹಿ ಸಿಗಲಾರದು. ಆಗ ಹತ್ತಿರದಲ್ಲಿದ್ದ ನೀರನ್ನು ಕುಡಿದು ನಾಲಿಗೆಗೆ ಕಹಿ ಎನಿಸಿದ ಅಂಶವನ್ನು ಹೋಗಲಾಡಿಸುತ್ತೇವೆ. ನಾಲಿಗೆಗೆ ಕಹಿಯಾಯಿತೆಂದು ಕುಗ್ಗಲಾರೆವು ಅಥವಾ ಕಹಿ ತಿಂದವೆಂದು ಅಳುತ್ತಾ ಕೂರುವುದಿಲ್ಲ.ಅಂತೆಯೇ ಸೋಲು ಕಹಿ ಅನುಭವವನ್ನು ನೀಡುತ್ತದೆ. ಆದರೆ ಸೋಲೆಂಬ ಕಹಿಯನ್ನು ನಾಲಿಗೆಯಷ್ಟು ಸರಾಗವಾಗಿ ಮನಸ್ಸು ಸ್ವೀಕರಿಸುವುದಿಲ್ಲ.
ಸೋತೆವಲ್ಲ ಎಂದು ಮಾನಸಿಕವಾಗಿ ಕುಗ್ಗುವುದರ ಜತೆಗೆ ಗೆಲುವಿನ ಆಸಕ್ತಿಯನ್ನು, ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತೇವೆ. ನಾಲಿಗೆಗೆ ತಾಗಿದ ಕಹಿಯನ್ನು ಹೋಗಲಾಡಿಸಲು ಸಿಹಿ ತಿಂದು ನೀರು ಕುಡಿದಂತೆ ಸೋಲನ್ನು ಸ್ವೀಕರಿಸಿ ಮನಕೆ ಖುಷಿ ಕೊಡುವಂತಹ ವಿಚಾರಗಳಲ್ಲಿ ತೊಡಗಿಸಿಕೊಂಡು ಮನಸ್ಸನ್ನು ಸೋಲಿನ ಭೀತಿಯಿಂದ ಹೊರಗೆ ಉಳಿಯುವಂತೆ ನೋಡಿಕೊಂಡಾಗ ಮುಂದಿನ ಗೆಲುವಿಗೆ ಸುಲಭವಾಗುತ್ತದೆ.
ಅಂಬೆಗಾಲಿಡುವ ಮಗು ಪ್ರಾರಂಭದ ಹೆಜ್ಜೆಗಳನ್ನು ಇಡುವಾಗ ಬೀಳುವುದು ಸಾಮಾನ್ಯ. ಬಿದ್ದ ಮಗು ತನ್ನ ಸುತ್ತಲೂ ಯಾರಿದ್ದಾರೆ ಎಂದು ಗಮನಿಸುತ್ತದೆ. ತನ್ನನ್ನು ಗಮನಿಸುವವರು ಸುತ್ತಲೂ ಇದ್ದಾರೆ ಎಂದು ತಿಳಿದರೆ ಅಳಲಾರಂಭಿಸುತ್ತದೆ. ಯಾರೂ ತನ್ನನ್ನು ನೋಡಲಿಲ್ಲವೆಂದರೆ ಮಗು ತನ್ನಷ್ಟಕ್ಕೆ ಎದ್ದು ಧೈರ್ಯವಾಗಿ ಇನ್ನೊಮ್ಮೆ ಪ್ರಯತ್ನಿಸುತ್ತದೆ.
ಈ ಹಂತದಲ್ಲಿ ನಾನು ಸೋತೆ ಎಂಬ ಭಾವನೆ ಮಗುವಿಗೆ ಬರುವುದಿಲ್ಲ. ಬೆಳೆಯುತ್ತಿದ್ದಂತೆ ಸುತ್ತಲಿನವರ ಮೇಲೆ ಗಮನ ಹೆಚ್ಚಾಗಿ ನಗುವವವರ ಮುಂದೆ ಅಂಜುತ್ತಾ ನಡೆಯಲಾರಂಭಿಸುತ್ತದೆ. ಸೋಲಿನ ಭೀತಿ ಮನದ ಸುತ್ತ ಇಣುಕಲಾರಂಭಿಸುತ್ತದೆ. ಮೊದಲು ಸೋಲು ನಮ್ಮನ್ನು ಬಲಪಡಿಸಲು ತುಂಬಾ ಅವಶ್ಯಕ ಎಂಬುದನ್ನು ಅರಿಯಬೇಕು. ಸೋತಾಗ ಕುಗ್ಗಿ ಕೂರದೆ ಎಡವಿ ಬಿದ್ದ ಮಗು ಕಾಲು ಸರಿಪಡಿಸಿಕೊಂಡು ಮತ್ತೆ ನಡೆಯಲು ಆರಂಭಿಸುವಂತೆ ಯಾವ ವಿಚಾರದಲ್ಲಿ ಸೋತಿರುತ್ತೇವೆಯೋ ಅದನ್ನು ಸರಿಪಡಿಸಿಕೊಂಡು ಮತ್ತೂಮ್ಮೆ ಪ್ರಯತ್ನಿಸಿ ಗೆಲುವಿನ ಕಡೆ ಗಮನಹರಿಸಬೇಕು.
ಸಾಧನೆಯ ಕಡೆಗೆ ಬಿಡದೆ ಯೋಚಿಸುವಂತೆ, ಅದಕ್ಕೆ ಬೇಕಾದ ತಯಾರಿ ಗಳನ್ನು ಮಾಡಿಕೊಳ್ಳುವಂತೆ, ನಿರಂ ತರ ಅಭ್ಯಾಸವನ್ನು ಮುಂದುವರಿ ಯುವಂತೆ ಮಾಡುವುದೇ ಈ ಸೋಲು. ಸೋಲಿಲ್ಲವೆಂದಾ ದರೆ ನಮ್ಮ ಪ್ರಯತ್ನ ಅಲ್ಲಿಗೆ ನಿಂತುಬಿಡುತ್ತದೆ. ಸೋಲಿನ ರುಚಿ ಎನ್ನುವುದು ಗೆಲುವಿನ ಕಡೆಗೆ ಇನ್ನಷ್ಟು ಪ್ರಯತ್ನವನ್ನು ಮಾಡಿಸುತ್ತದೆ. ಸೋಲು ಅಂತಿಮವಲ್ಲ. ಹೊಸ ಕಲಿಕೆಯ ಆರಂಭ ಎನ್ನುವುದನ್ನು ಎಂದಿಗೂ ಮರೆಯಬಾರದು. ಸೋಲು ಮತ್ತೆ ಮತ್ತೆ ಪ್ರಯತ್ನಿಸುವ ಉತ್ಸಾಹವನ್ನು ನೀಡಬೇಕೇ ಹೊರತು ಕುಗ್ಗಿಸಬಾರದು.
ಈ ಸೋಲು ಗೆಲುವು ನಾಣ್ಯದ ಎರಡು ಮುಖವಿದ್ದಂತೆ. ಸೋತೆ ಎಂದು ಅಳುವ ಮೊದಲು ಗೆಲುವು ಎಂದರೇನು ಎಂಬುದನ್ನು ಅರಿಯಬೇಕು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದೇ ತಮ್ಮ ಗೆಲುವು ಎಂದು ಸಂತಸ ಪಡುವವರು ಒಂದೆಡೆಯಾ ದರೆ ಸ್ಪರ್ಧೆಗೆ ಆಯ್ಕೆಯಾಗಿ ಬಹುಮಾನ ಪಡೆಯುವುದು ಗೆಲುವು ಎಂದು ಭಾವಿಸುವ ವರು ಇನ್ನೊಂದೆಡೆ ಇದ್ದಾರೆ.
ಗೆಲುವಿಗೆ ನಿರ್ದಿಷ್ಟವಾದ ವ್ಯಾಖ್ಯಾನವನ್ನು ನೀಡುವುದು ಕಷ್ಟ. ಹಣ ಸಂಪಾದನೆಯಲ್ಲಿ ಗೆದ್ದವನು ಗುಣ ಸಂಪಾದನೆಯಲ್ಲಿ ಸೋಲಬಹುದು. ಗುಣ ಸಂಪಾದನೆ ಯಲ್ಲಿ ಗೆದ್ದವನು ಹಣ ಸಂಪಾದನೆಯಲ್ಲಿ ಸೋತಿರಬಹುದು. ಹಣ ಹಾಗೂ ಗುಣ ಎರಡನ್ನು ಸಂಪಾದಿಸಿ ದವನಿಗೆ ಪ್ರೀತಿಯಲ್ಲಿ ಗೆಲುವು ಸಿಗದೇ ಇರಬಹುದು.
ಪ್ರೀತಿಯಲಿ ಗೆದ್ದವನಿಗೆ ಸ್ಥಾನಮಾನದ ವಿಚಾರದಲ್ಲಿ ಅಥವಾ ಹಣದಲ್ಲಿ ಸೋಲಾಗಬಹುದು. ಆದರೆ ಈ ಸೋಲನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಜೀವನ ಸೋಲು ಗೆಲುವಿನ ಸಮಾಗಮ ಎಂದರೇ ತಪ್ಪಿಲ್ಲ. ಸೋಲೇ ಗೆಲುವಿನ ಸೋಪಾನ ಎಂಬಂತೆ ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಬದುಕನ್ನು ಮುನ್ನಡೆಸಿದಾಗ ಬದುಕಿನ ಸಾರ್ಥಕತೆಯ ಗೆಲುವು ಸಿಕ್ಕಂತೆ.
ಸರಿ ದಾರಿಯಲ್ಲಿ ನಡೆಯಲು ಸಹಾಯ ಮಾಡಿದವರಿಗೆ ಕೃತ ಜ್ಞತೆ ಸಲ್ಲಿಸುತ್ತೇವೆ. ”ಥಾಂಕ್ಯು” ಎಂಬ ಎರಡಕ್ಷರದ ಪದವನ್ನು ಸಹಾಯ ಮಾಡಿದವರಿಗೆ ಹೇಳುತ್ತೇವೆ. ಆದರೆ ಗೆಲುವಿನ ದಾರಿಯನ್ನು ತಲುಪಲು ಹೊಸ ಕಲಿಕೆಗೆ ದಾರಿ ಮಾಡಿಕೊಡುವ ಸೋಲಿಗೆ ಹಿಡಿ ಶಾಪ ಹಾಕುತ್ತಾ ಸಮಯ ವ್ಯರ್ಥ ಮಾಡುತ್ತೇವೆ.
ಆ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ಶಪಿಸುವ ಬದಲು ಕೃತಜ್ಞತೆ ಸಲ್ಲಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಸೋಲಿನ ಭಯವನ್ನು ಓಡಿಸೋಣ. ಸೋತಾಗ ಅಳದೇ, ಕುಗ್ಗದೆ “” ಓ ಸೋಲೆ ಥ್ಯಾಂಕ್ಯೂ.. ಹೊಸ ಕಲಿಕೆಗೆ ದಾರಿ ಮಾಡಿಕೊಟ್ಟಿರುವೆ” ಎಂದು ಹೇಳಿಕೊಳ್ಳುವ ಮೂಲಕ ಮತ್ತೂಮ್ಮೆ ಪ್ರಯತ್ನಿಸಲು ತಯಾರಿ ನಡೆಸೋಣ.. ತಾಳ್ಮಯಿಂದ ಗೆಲುವನ್ನು ಸಾಧಿಸೋಣ.
–ಆಶ್ರಿತಾ ಕಿರಣ್
ಬೆಂಗಳೂರು