Advertisement

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

04:03 PM Apr 24, 2024 | Team Udayavani |

ಬಹುತೇಕ ಎಲ್ಲ ತಂದೆ-ತಾಯಿ ನನ್ನ ಮಗ ದೊಡ್ಡವನಾದ ಮೇಲೆ ನಾನು ಸಾಧಿಸಲಾಗದ್ದನ್ನು ಸಾಧಿಸಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ. ತಮ್ಮ ಮಕ್ಕಳು ಡಾಕ್ಟರ್‌, ಎಂಜಿನಿಯರ್‌, ಸರಕಾರಿ ನೌಕರಿಯನ್ನು ಪಡೆದುಕೊಳ್ಳಬೇಕೆನ್ನುವ ಒತ್ತಾಸೆಯನ್ನು ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸೂಕ್ತ ಎಂಬುದನ್ನು ನಾವು ಯೋಚಿಸಬೇಕು.

Advertisement

ಪೋಷಕರಾದವರು ಮಕ್ಕಳಿಗೆ ಬಾಲ್ಯದಿಂದಲೇ ನೀನು ಡಾಕ್ಟರ್‌ ಆಗಬೇಕು, ಎಂಜಿನಿಯರ್‌ ಆಗಿ ಉತ್ತಮ ಕಟ್ಟಡ ಕಟ್ಟಬೇಕು, ಒಳ್ಳೆಯ ಲಾಯರ್‌ ಆಗಬೇಕು ಹೀಗೆ ಮಕ್ಕಳ ಮೇಲೆ ಒತ್ತಡ ಹೇರುತ್ತಾ ಅವರ ಕನಸು, ಬಯಕೆಯ ಕುರಿತು ಕೇಳುವುದನ್ನೇ ಮರೆಯುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ.

ಶಿಕ್ಷಣ ಎನ್ನುವುದು ಕೇವಲ ಜೀವನದ ಒಂದು ಭಾಗವೇ ಹೊರತು ಅದುವೇ ಜೀವನವಲ್ಲ. ಶಿಕ್ಷಣ ಮಕ್ಕಳಲ್ಲಿ ಸ್ವ ಸಾಮರ್ಥಯವನ್ನು ಬೆಳೆಸುವ ಒಂದು ಕಲೆಯಾಗಬೇಕೇ ಹೊರತು ಮಕ್ಕಳ ಪ್ರತಿಭೆಯನ್ನು ಹತ್ತಿಕ್ಕುವ ಅಸ್ತ್ರವಾಗಬಾರದು.

ಇಲ್ಲಿ ನಾವೊಂದು ಗಾದೆಮಾತನ್ನು ಗಮನಿಸಬಹುದು “ಬೆಳೆಯುವ ಸಿರಿ ಮೊಳಕೆಯಲ್ಲಿ’ ಮತ್ತು “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ’ ಎಂಬಂತಹುಗಳು. ಇವುಗಳನ್ನು ಗಮನಿಸಿದಾಗ ಚಿಕ್ಕಂದಿನಿಂದ ಮಕ್ಕಳಿಗೆ ಶಿಕ್ಷಣವೇ ಜೀವನದ ಅಭಿವೃದ್ಧಿಗೆ ಪ್ರಮುಖ ಅಂಗ. ಶಿಕ್ಷಣ ಬಿಟ್ಟು ಮತ್ತೂಂದು ಜೀವನವೇ ಇಲ್ಲ ಎಂಬುದನ್ನು ಹೇಳಿದಾಗ ಅವರು ಅಲ್ಲಿಯೇ ಉಳಿದು ಬಿಡುತ್ತಾರೆ. ಆದರೆ ಅದೇ ಶಿಕ್ಷಣದ ಜತೆಗೆ ವಿವಿಧ ಪ್ರಕಾರದ ಕಲೆಗಳೂ ಇವೆ ಎಂದು ಪರಿಚಯಿಸಿದಾಗ ಮಕ್ಕಳು ಮತ್ತಷ್ಟು ತೆರೆದುಕೊಳ್ಳಲು ಸಾಧ್ಯವಾಗುತ್ತದೆ.

ಶಿಕ್ಷಣದ ಜತೆಗೆ ಕಲೆ, ಸಾಹಿತ್ಯ, ಸಂಗೀತ ಹೀಗೆ ವಿವಿಧ ಕಲಾ ಪ್ರಕಾರಗಳ ಕುರಿತು ಅವರಿಗೆ ತಿಳಿಸಿಕೊಟ್ಟಾಗ ಮಕ್ಕಳು ಕ್ರೀಯಾಶೀಲರಾಗುವುದರಲ್ಲಿ ಎರಡು ಮಾತಿಲ್ಲ. ಕಲಿಕೆಯ ಜತೆಗೆ ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಧನೆಯ ಉತ್ತುಂಗ ಶಿಖರವನ್ನೇರಿದ ಪ್ರತಿಭೆಗಳಿಗೇನೂ ನಮ್ಮಲ್ಲಿ ಕಡಿಮೆಯಿಲ್ಲ.

Advertisement

ಉದಾಹರಣೆಗೆ ಸಿನೆಮಾ ಕ್ಷೇತ್ರದಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗಮನಿಸಿದಾಗ ಪ್ರಾಥಮಿಕ, ಹೈಸ್ಕೂಲ್‌ ಹಂತದಲ್ಲಿ ಶಿಕ್ಷಣ ಮುಗಿಸಿ ಇಂದು ದೊಡ್ಡ ಸ್ಟಾರ್‌ಗಳಾಗಿ ಜನಮನಳಿಸಿದ್ದಾರೆ. ಕಾರಣ ಅವರಲ್ಲಿ ಇದ್ದಂತಹ ದೃಢವಾದ ನಂಬಿಕೆ, ಆತ್ಮವಿಶ್ವಾಸ.

ಆದ್ದರಿಂದ ತಂದೆ-ತಾಯಿಗಳು ಮಕ್ಕಳ ಮನಸ್ಸನ್ನು ಅರಿಯಬೇಕು. ಮಕ್ಕಳನ್ನು ಪಕ್ಕದಮನೆ ಮಕ್ಕಳೊಂದಿಗೆ ಹೋಲಿಸಿ ಅವನು ಅಥವಾ ಅವಳು ಶೇ. 99 ಅಂಕಗಳನ್ನು ಪಡೆದುಕೊಂಡಿದ್ದಾರೆ ನೀನೂ ಪಡೆಯಲೇಬೇಕು, ಅವರು ಎಂಜಿನಿಯರ್‌, ಡಾಕ್ಟರ್‌ ಆಗಿದ್ದಾನೆ ನೀನು ಸಹ ಆಗಲೇಬೇಕು, ಸರಕಾರಿ ನೌಕರಿಯನ್ನು ಪಡೆಯಬೇಕು ಎಂದು ಒತ್ತಡ ಹೇರುವುದನ್ನು ನಿಲ್ಲಿಸಬೇಕು.

ಪೋಷಕರಾದವರು ಮಕ್ಕಳು ತಪ್ಪು ಮಾಡಿದಾಗ ಬೈದು ಬುದ್ದಿ ಹೇಳಿ, ಮತ್ತೆ ಇನ್ನುಳಿದ ಸಂದರ್ಭಗಳಲ್ಲಿ ಸ್ನೇಹಿತರಂತೆ ಪ್ರೀತಿಯಿಂದ ಕಾಣಬೇಕು. ಅವರ ಪಠ್ಯೇತರ ಚಟುವಟಿಕೆಗಳ ಕುರಿತು ಅವರನ್ನು ಹೊಗಳುತ್ತ, ಅವರಲ್ಲಿ ಮತ್ತಷ್ಟು ಆತ್ಮವಿಶ್ವಾಸವನ್ನು ತುಂಬುವ ಕಾರ್ಯ ಮಾಡಬೇಕು.

ಪ್ರತಿಯೊಬ್ಬರಲ್ಲಿಯೂ ಒಂದೊಂದು ಕಲೆ ಇದ್ದೆ ಇರುತ್ತದೆ. ಅದನ್ನು ಗುರುತಿಸುವ ಕಾರ್ಯ ಮಾತ್ರ ನಮ್ಮಿಂದಾಗಬೇಕು. ಜತೆಗೆ ಕಲೆಯನ್ನು ಹೊರಹಾಕಲು ಒಂದು ಉತ್ತಮ ವೇದಿಕೆಯನ್ನು ಕೂಡ ನಾವು ಸೃಷ್ಟಿಸಿ ಕೊಡಬೇಕಾಗಿದೆ.

ಇಂದಿನ ದಿನಗಳಲ್ಲಿ ಮಕ್ಕಳಿಗೆ ಆಸಕ್ತಿ ಇರುವ ವಿಷಯಗಳಲ್ಲಿ ಮುಂದುವರೆಯಲು ಬಿಟ್ಟಾಗ ಖಂಡಿತವಾಗಿ ಮಕ್ಕಳು ಹೆಚ್ಚು ಏಕಾಗ್ರ ಚಿತ್ತರಾಗಿ ಗೆಲುವನ್ನು ಸಾಧಿಸಲು ಸಹಕಾರಿಯಾಗುತ್ತದೆ. ಅವರ ಭೌದ್ಧಿಕ ಮಟ್ಟಕ್ಕೆ ತಕ್ಕಂತೆ ಸೂಕ್ತ ಕೋರ್ಸುಗಳಿಗೆ ಅವರನ್ನು ಸೇರಿಸಿದಾಗ ಫಲಿತಾಂಶವು ಒಳ್ಳೆಯ ರೀತಿಯಲ್ಲಿ ಬರಲು ಸಾಧ್ಯವಾಗುತ್ತದೆ.

- ಅಕ್ಷಯಕುಮಾರ ಜೋಶಿ

ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next