ಕಷ್ಟಗಳು ಮನುಷ್ಯನಿಗೆ ಬಾರದೆ ಕಲ್ಲಿಗೆ ಬಂದಿತೇ? ಜೀವನ ಎಷ್ಟು ವಿಚಿತ್ರ ಎಂದರೆ ಅದನ್ನು ಹೇಗೆ ಮುಂದುವರಿಸುವುದು ಎಂದು ಯೋಚನೆ ಮಾಡುವಾಗ ಅದಕ್ಕೆ ದಾರಿ ಕೂಡ ಭಗವಂತನೆ ಸೃಷ್ಟಿಸುತ್ತಾನೆ. ಕಷ್ಟ ಮನುಷ್ಯನಾದವನಿಗೆ ಯಾರಿಗಿಲ್ಲ ಹೇಳಿ, ಉತ್ತಮ ಬದುಕು ರೂಪಿಸಿಕೊಳ್ಳುವಾಗ ಸುಖ-ದುಃಖ ಎರಡನ್ನು ಸಮವಾಗಿ ಎದುರಿಸಲೇಬೇಕು. ಈ ಎಲ್ಲ ಭಾವನೆಗಳನ್ನು ಎದುರಿಸಿ ಮುನ್ನೆಡೆದಾಗಲೇ ಬದುಕಿಗೊಂದು ಸ್ಪಷ್ಟ ಉತ್ತರ ಸಿಗುವುದು.
ಕಷ್ಟ ಎಂದು ನಾಲ್ಕು ಗೋಡೆಯೊಳಗೆ ಬಂಧಿಯಾಗಿ ಗೋಡೆ ನೋಡುತ್ತಾ ಕಣ್ಣೀರು ಸುರಿಸುವುದು, ನಮ್ಮವರೆನ್ನುವವರ ಜತೆ ದುಃಖವನ್ನು ತೋರಿಕೊಳ್ಳುವುದಷ್ಟೇ ಅಲ್ಲ ಬದುಕು, ಅದರಾಚೆಗೂ ಇದೆ. ಬದುಕು ಎನ್ನುವುದು ಬಹಳ ಪುಟಗಳಿರುವ ಪುಸ್ತಕ, ಒಂದು ಅಧ್ಯಾಯ ಮುಗಿಯುವಷ್ಟರಲ್ಲಿ ಇನ್ನೊಂದು ಅಧ್ಯಾಯ ಆರಂಭವಾಗಿರುತ್ತದೆ. ಮನುಷ್ಯನಾದವನು ಅದನ್ನು ಎದುರಿಸಿ ಹೋಗಬೇಕೆ ಹೊರತು ಕೈಲಾಗದು ಎಂದು ಸುಮ್ಮನೆ ಕುಳಿತರೆ ಏನು ಫಲ.
ಕಷ್ಟ ಎಂಬ ಎರಡಕ್ಷರಕ್ಕೆ ಎಷ್ಟು ಅರ್ಥವಿದೆ ಎಂದರೆ ಅದು ತನ್ನಷ್ಟಕ್ಕೆ ಬದುಕಿಗೆ ಬಂದರೆ ಬೇಗ ವಾಸಿಯಾಗಬಹುದು ಆದರೆ ತನ್ನ ಅತಿಯಾದ ಆಸೆಯಿಂದ ಸೃಷ್ಟಿಸಿದರೆ ಬೆಂಕಿ ಕಿಡಿಯನ್ನು ಸೆರಗಲ್ಲಿ ಕಟ್ಟಿದಂತೆ. ಅದು ಹೇಗೆ ಎಂದು ಯೋಚಿಸುತ್ತಿರಾ ಮನುಷ್ಯನ ಅತಿ ಆಸೆಯಿಂದ ಎಷ್ಟೋ ಕುಟುಂಬಗಳು ವಿನಾಶಕ್ಕೆ ದಾರಿ ಮಾಡಿಕೊಡುತ್ತವೆ. ದುರಾಸೆಗೆಂದು ಮಾಡಿದ ಸಾಲ ಜೀವ ಕಳೆದುಕೊಳ್ಳುವಷ್ಟು ಮುಂದುವರಿಯಬಹುದು. ಇಷ್ಟ ಪಟ್ಟ ಜೀವನ ಕಷ್ಟವಾಗಬಹುದು, ಪ್ರೀತಿಸುವ ಜೀವಗಳು ಹಿಂಸೆ ಅನಿಸಬಹುದು.ತಿಳಿದವರು ಹೇಳಿದ ಮಾತೊಂದಿದೆ ಹಾಸಿಗೆ ಇದ್ದಷ್ಟು ಕಾಲು ಚಾಚು ಅತಿಯಾಸೆ, ಅತಿಯಾದ ಮೋಹ ಒಳಿತಿಗಲ್ಲ. ಸಾಧಿಸುವ ಛಲ ನಿಮ್ಮಲ್ಲಿದ್ದರೆ ಮಾತ್ರ ಪ್ರತಿಫಲ ಉತ್ತಮವಾಗಿರುತ್ತದೆ. ಅತಿಯಾದ ನಂಬಿಕೆಯೂ ಮುಳ್ಳಾಗಬಹುದು. ನೆಮ್ಮದಿ ಇದ್ದರೆ ಮಾತ್ರ ಬದುಕಲು ಸಾಧ್ಯ . ಅತಿಯಾದರೆ ಅಮೃತವು ವಿಷ ಎನ್ನುವ ಮಾತು ಮಾನವನಿಗೆ ಸರಿಯಾಗಿ ಹೊಂದುತ್ತದೆ ಜೀವನದಲ್ಲಿ ಸಂಪಾದನೆ, ಮನೆ, ಆರೋಗ್ಯ, ಪ್ರೀತಿ, ಹೀಗೆ ಎಲ್ಲವೂ ಮುಖ್ಯ ಆದರೇ ನೆಮ್ಮದಿ ಅನ್ನುವ ಮೂರು ಅಕ್ಷರ ಕಳೆದು ಕೊಂಡರೆ ಎಷ್ಟು ಆಸ್ತಿ ಇದ್ದರು ಜೀವಂತ ಶವದಂತೆ. ಎಲ್ಲ ದೇವರ ಆಟ ಕಷ್ಟ ಕೊಟ್ಟರೆ ತಾಳ್ಮೆಯಿಂದ ಎದುರಿಸಿ, ಇನ್ನೊಬ್ಬರಿಗೆ ಒಳಿತು ಬಯಸಿ ಕಳೆದುಕೊಂಡ ಎಲ್ಲ ಸಂತೋಷ ನಿಮ್ಮ ಪಾಲಾಗುವುದು.
ಕಾವ್ಯ ಪ್ರಜೇಶ್ ಗಟ್ಟಿ
ಪೆರುವಾಡು ಕುಂಬಳೆ