ಪ್ರಾಣಿಗೂ ಮನುಷ್ಯನಿಗೂ ಏನು ವ್ಯತ್ಯಾಸ ? ಎಂಬ ಪ್ರಶ್ನೆ ಚಿಕ್ಕ ವಯಸ್ಸಿನಲ್ಲಿ ಮೂಡಿ ಬಂದಾಗ ಅಮ್ಮ ಹೇಳಿದ ಉತ್ತರ ಇನ್ನು ಕಿವಿ ಕಟ್ಟಿದಾಗಿದೆ ಇದೇಂತ ಪ್ರಶ್ನೆ, ಮನುಷ್ಯರು ಮಾತಾಡ್ತಾರೆ ತಮ್ಮ ಭಾವನೆಗಳನ್ನ ಹಂಚಿಕೊಳ್ಳುತ್ತಾರೆ ಅವರು ಕ್ರೂರಿಗಳಲ್ಲ ಮನುಷ್ಯತ್ವ ಇರುತ್ತೆ ಅದಕ್ಕೆ ಅವರನ್ನು ಮಾನವರು ಅಂತ ಕರೀತಾರೆ ಆದರೆ ಪ್ರಸ್ತುತ ಜಗತ್ತನ್ನ ನೋಡಿದರೆ ಅದೆಲ್ಲ ಸುಳ್ಳು, ಎನಿಸುವುದರಲ್ಲಿ ಯಾವುದೇ ತಪ್ಪಿಲ್ಲ.
ಎಲ್ಲಿ ನೋಡಿದರೂ ಕೊಲೆ – ಸುಲಿಗೆ ಮಾನವರಾದ ನಾವು ಮನುಷ್ಯತ್ವವನ್ನು ಬಿಟ್ಟು ವರ್ತಿಸುತ್ತಿದ್ದೇವೆ. ಚಿಕ್ಕ ಚಿಕ್ಕ ವಿಚಾರಗಳಿಗೆ ಕೊಲೆ ಆತ್ಮಹತ್ಯೆಗಳಂತ ಪ್ರಕರಣಗಳು ದಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಾವು ಚಿಕ್ಕವರಿದ್ದಾಗ ಸಿನೆಮಾಗಳಲ್ಲಿ ಒಂದು ಸಣ್ಣ ಕೊಲೆಯ ಸೀನ್‌ಗಳನ್ನು ನೋಡಿ ಅಮ್ಮಾ…ಎಂದು ಕಿರುಚಿ ಓಡುತ್ತಿದ್ದ ಕಾಲದಿಂದ, ಪ್ರತಿದಿನ ಅದೇ ಪ್ರಕರಣಗಳನ್ನು ಕೇಳಿ ನೋಡುವಂತಾಗಿದೆ.
ಎಲ್ಲೋ ದೂರದಲ್ಲಿ ನಡೆಯುತ್ತಿದ್ದ ಘಟನೆಗಳನ್ನು ನೆನೆಸಿ ಮೈ ಜುಮ್ ಎನಿಸುತ್ತಿದ್ದ ಅನುಭವದಿಂದ ಹೋಗ್ಲಿ ಬಿಡಿ ಇದೇನು ಹೊಸತಲ್ಲ ಎನ್ನುವ ಪರಿಸ್ಥಿತಿಗೆ ನಾವೆಲ್ಲ ಒಳಗಾಗಿದ್ದೇವೆ. ಗಂಡ-ಹೆಂಡತಿನ್ನ, ಹೆಂಡತಿ – ಗಂಡನ್ನ, ಅಮ್ಮ -ಮಗಳನ್ನ, ಮಗ -ತಂದೆನಾ, ಪ್ರೇಯಸಿನ- ಪ್ರಿಯಕರ, ಇಷ್ಟೇ ಅಲ್ಲ ಅಣ್ಣ ತಮ್ಮನ್ನ,ತಂಗಿ – ಅಕ್ಕನ್ನ, ಸಂಬಂಧಗಳಲ್ಲಿ ಕೊಲೆ ಪ್ರಕರಣಗಳು ಮಿತಿಮೀರಿ ನಡೆಯುತ್ತಿದೆ. ಮೊದಲೆಲ್ಲ ಶತ್ರುಗಳಿಂದ ಸಾಯುತ್ತಿದ್ದವರು ಇಂದು ನಮ್ಮವರೇ ಎನಿಸಿಕೊಂಡವರಿಂದ ಕೊಲೆಯಾಗುತ್ತಿದ್ದಾರೆ.
ಏನಿದು ವಿಚಿತ್ರ ಜಗತ್ತು ಎಲ್ಲಿ ನೋಡಿದರೂ ಕೊಲೆಗಳಾಗುತ್ತಿದೆ ನಮ್ಮವರನ್ನ ನಾವೇ ನಂಬಲು ಭಯವಾಗುತ್ತಿದೆ. ಮನಸ್ಸಲ್ಲಿ ಎಲ್ಲಿಲ್ಲದ ಪ್ರಶ್ನೆಗಳು ಮೂಡುತ್ತಿದೆ. ಪ್ರಾಣಿಗಳಾದರೂ ತಮ್ಮ ಹೊಟ್ಟೆ ತುಂಬಿದ ಮೇಲೆ ಮತ್ತೂಮ್ಮೆ ಆಹಾರಕ್ಕಾಗಿ ಹಂಬಲಿಸುವುದಿಲ್ಲ, ಹೊಟ್ಟೆ ತುಂಬಿದ ಅನಂತರವೂ ಕೂಡ ಪಕ್ಕದಲ್ಲಿ ಇನ್ನೊಂದು ಜೀವಿ ಇದ್ದರೂ ಕೂಡ ಅದಕ್ಕೆ ಹಾನಿ ಬಯಸುವುದಿಲ್ಲ. ಇದು ಮೂಕ ಪ್ರಾಣಿಗಳ ನಾಲ್ಕು ಕಾಲುಗಳಿರುವ ಪ್ರಾಣಿಗಳ ವರ್ತನೆ ಯಾದರೆ.
ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುವ ಅತ್ಯಂತ ಬುದ್ಧಿಜೀವಿನಿಸಿಕೊಳ್ಳುವ ಎರಡು ಕಾಲಿನ ಮಾನವ ಮಾತ್ರ ಸ್ವಾರ್ಥತನದಿಂದ, ಕ್ರೂರಿಯಾಗಿ ವರ್ತಿಸುತ್ತಿದ್ದಾನೆ . ಹಾಗಾದರೆ ಈ ಒಂದು ಸಮಸ್ಯೆಗೆ ಪರಿಹಾರ ಎಲ್ಲಿದೆ? ನಮ್ಮಲ್ಲೇ, ನಮ್ಮ ಮನಸ್ಸಿನೊಳಗೆ ಉತ್ತರ ಇದೆ. ಒಂದು ಉತ್ತಮ ನಿರ್ಧಾರ ಹಾಗೂ ಒಂದು ಶುದ್ಧ ಮನಸ್ಸೇ ಎಲ್ಲವನ್ನೂ ಸರಿಪಡಿಸುತ್ತದೆ. ಮನುಷ್ಯ ತಲೆಗೆ ಬುದ್ದಿ ಕೊಟ್ಟು ಯೋಚಿಸುವುದಕ್ಕಿಂತ ಸಂಬಂಧದಲ್ಲಿ ಮನಸ್ಸಿನ ಮಾತನ್ನು ಒಮ್ಮೆ ಕೇಳಿದರೆ ಸಂಬಂಧದ ಜತೆಗೆ ನಮ್ಮ ಬಾಳು ಹಸನಾಗುತ್ತದೆ.
-ವಿದ್ಯಾ
ಎಂ.ಜಿ.ಎಂ., ಉಡುಪಿ