Advertisement
ಗ್ರಾಮೀಣ ಭಾಗದಲ್ಲಿ ಕನ್ನಡವನ್ನು ಉಸಿರಾಗಿಸಿಕೊಂಡು ಬೆಳೆದ ವಿದ್ಯಾರ್ಥಿಗಳು ಕೂಡ ಮಹಾನಗರಗಳ ಕಾಲೇಜುಗಳಲ್ಲಿ ವೃತ್ತಿ ಶಿಕ್ಷಣದಂತದ ಕೋರ್ಸ್‌ಗಳಿಗೆ ದಾಖಲಾತಿ ಪಡೆದಾಗ ಆಂಗ್ಲ ಭಾಷೆ ಮತ್ತು ಇನ್ನಿತರ ಪರಭಾಷಿಕರ ನಡುವೆ ಕನ್ನಡದ ಬಳಕೆಯಲ್ಲಿ ಉಸಿರುಗಟ್ಟುವ ಪರಿಸ್ಥಿತಿ ಎದುರಿಸುತ್ತಾರೆ. ಕನ್ನಡದ ಅಸ್ಮಿತೆ ಉಳಿಸಲು, ಪರಭಾಷಿಕರೂ ಕನ್ನಡ ನೆಲದಲ್ಲಿ ಕನ್ನಡವನ್ನು ಗೌರವಿಸಲು ಕಾಲೇಜುಗಳಲ್ಲಿ ಬೇರೆ ಬೇರೆ ಕ್ಲಬ್‌ಗಳ ರೀತಿಯಲ್ಲಿ ಕನ್ನಡ ಕ್ಲಬ್ ಕೂಡ ಅತ್ಯವಶ್ಯಕವಾಗಿದೆ. ಕನ್ನಡ ಕೂಟವೆಂದರೆ ಅದು ಕೇವಲ ಸಾಂಸ್ಕೃತಿಕ ಕ್ಲಬ್ ಮಾತ್ರವಲ್ಲದೆ ಸಾಹಿತ್ಯ, ತಂತ್ರಜ್ಞಾನ ಹಾಗೂ ಕನ್ನಡ ಕಲೆಗಳ ಅನಾವರಣಕ್ಕಿರುವ ಸವಿ ಹೂರಣ.
Related Articles
Advertisement
ಕನ್ನಡ ಹ್ಯಾಕಥಾನ್
ಸಾಫ್ಟ್ ವೇರ್ ಪ್ರೋಗ್ರಾಮಿಂಗ್ ಭಾಷೆಗಳನ್ನು ಬಳಸಿ ಗೇಮ್ಸ್,ಆ್ಯಪ್ಸ್, ರೋಬೋಗಳನ್ನು ರಚಿಸಬಹುದು. ಅದೇ ಹ್ಯಾಕಥಾನ್‌ಗಳಿಗೆ ಕನ್ನಡ ಸಂಬಂಧಿತ ಸಮಸ್ಯಾ ಹೇಳಿಕೆಗಳನ್ನು ನೀಡುವ ಮೂಲಕ ತಂತ್ರಜ್ಞಾನ ಮತ್ತು ಕನ್ನಡವನ್ನು ಬೆಸೆಯಬಹುದಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಕಾಲೇಜು ರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಕನ್ನಡ ಹ್ಯಾಕಥಾನ್ ಅನ್ನು ಪಿ.ಇ.ಎಸ್. ವಿಶ್ವವಿದ್ಯಾಲಯದ ಕನ್ನಡ ಕೂಟದ ವತಿಯಿಂದ ಆಯೋಜಿಸಲಾಗಿತ್ತು.
ಈ ಕನ್ನಡ ಹ್ಯಾಕಥಾನ್‌ನ ಮೂಲಕ ಕನ್ನಡ ಸ್ಪೀಚ್ ಗುರುತಿಸುವಿಕೆ(ಅಲೆಕ್ಸಾ, ಸಿರಿಗಳು ಆಂಗ್ಲ ಭಾಷೆಯ ಸ್ಪೀಚ್ ಗುರುತಿಸುವಂತೆ), ಕನ್ನಡ ಲಿಪ್ಯಂತರಣ (ಟ್ರಾನ್ಸ್ ಲಿಟರೇಷನ್), ವಾಕ್ಯಗಳಿಗೆ ಛಂದಸ್ಸು, ಮಾತ್ರೆಗಳನ್ನು ಹಾಕುವಂತಹ ವೆಬ್‌ಸೈಟ್‌ಗಳನ್ನು ಬಳಸಿ ಮಾಡುವುದನ್ನು ಕನ್ನಡ ಹ್ಯಾಕಥಾನ್ ನ ಮೂಲಕ ಸಾಧ್ಯವಾಯಿತು ಎನ್ನುತ್ತಾರೆ ಹ್ಯಾಕಥಾನ್‌ನ ಆಯೋಜಕರು.
ಉನ್ನತ ಶಿಕ್ಷಣ ಪಡೆಯುವ ಹಂತದಲ್ಲಿ ಮಕ್ಕಳು ಕನ್ನಡ ಮಾತನಾಡಲು ಹಿಂಜರಿಕೆ ತೋರ್ಪಡಿಸುತ್ತಾರೆ. ಯುವ ಜನತೆ ಪರಭಾಷೆಯತ್ತ ಒಲವು ಬೆಳೆಸಿಕೊಳ್ಳುತ್ತಿ¨ªಾರೆ ಎಂಬ ಕಲ್ಪನೆ ವ್ಯಾಪಕವಾಗಿದೆ. ಇಂತಹ ಮನಸ್ಥಿತಿಯ ಸಾಮಾಜಿಕ ಪರಿಸರದಲ್ಲಿ ದೇಶ ವಿದೇಶಗಳ ವಿದ್ಯಾರ್ಥಿಗಳು ಒಂದೇ ಸೂರಿನಡಿ ವ್ಯಾಸಂಗ ಮಾಡುತ್ತಿರುವ ಪದವಿ ಮತ್ತು ಸ್ನಾತಕೋತ್ತರ ಹಂತದ ಕಾಲೇಜುಗಳಲ್ಲಿ ಕನ್ನಡದ ಅಸ್ತಿತ್ವಕ್ಕೆ ನವೋಲ್ಲಾಸ ಕೊಡುತ್ತಿರುವ ಕನ್ನಡ ಕ್ಲಬ್ ಗಳ ಚಟುವಟಿಕೆಗಳು ಶ್ಲಾಘನೀಯ. “ಭಾರತದಂತಹ ವೈವಿಧ್ಯಮಯವಾದ ವಿಶಾಲ ರಾಷ್ಟ್ರದ ದೊಡ್ಡ ದೊಡ್ಡ ಔದ್ಯೋಗಿಕ ನಗರಗಳಲ್ಲಿ ವೇಷ ಭೂಷಣ ಭಾಷೆ ಸಂಸ್ಕೃತಿ ಮೊದಲಾದವುಗಳಲ್ಲಿ ಸಂಕ್ಷಿಪ್ತ ಭಾರತಗಳೇ ಆಗಿರಬೇಕಾದುದು ಅನಿವಾರ್ಯ. ಕನ್ನಡ ನಾಡಿನ ರಾಜಧಾನಿಯಾದ ಬೆಂಗಳೂರು ನಗರವು ಅಂತ ಒಂದು ಸಂಕ್ಷಿಪ್ತ ಭಾರತವೇ ಆಗಿದೆ. ಇಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಅಲ್ಪಸಂಖ್ಯಾಕರಿರುವುದು ಸಹಜ. ಆ ಎಲ್ಲ ಭಾಷೆಗಳಿಗೂ ಸಲ್ಲಬೇಕಾದುದನ್ನು ಸಲ್ಲಿಸಬೇಕಾದ ನಮ್ಮ ಕರ್ತವ್ಯವಾದರೂ ಇಲ್ಲಿ ಕನ್ನಡವೇ ಸಾರ್ವಜನಿಕ ಕ್ಷೇತ್ರದ ಸಾರ್ವಭೌಮ ಭಾಷೆಯಾಗಿರಬೇಕಾಗುತ್ತದೆ. ಕನ್ನಡಕ್ಕೆ ಮೊದಲ ಮನ್ನಣೆ ಸಲ್ಲಬೇಕಾದದ್ದು ಅಗತ್ಯವಾಗುತ್ತದೆ’ ಎಂದು ರಾಷ್ಟ್ರ ಕವಿ ಕುವೆಂಪುರವರು ಮನುಜ ಮತ ವಿಶ್ವ ಪಥದಲ್ಲಿ ನುಡಿದಿರುವಂತೆ, ಈ ಕನ್ನಡದ ನೆಲ ಜಲ ಬಳಸುವ ಎಲ್ಲರೂ ಕನ್ನಡ ಕಟ್ಟುವ ಕೈಂಕರ್ಯದಲ್ಲಿ ಭಾಗಿಗಳಾಗುವಲ್ಲಿ ಇಂತಹ ಕನ್ನಡ ಕೂಟಗಳು ಸಾಗಲಿ ಎಂದು ಆಶಿಸೋಣ.
–ಅನೀಶ್ ಬಿ. ಕೊಪ್ಪ
ಪಿ.ಇ.ಎಸ್ ವಿವಿ, ಬೆಂಗಳೂರು