Advertisement
ಮಕ್ಕಳು ಬೇಕೆಂದು ನೂರೊಂದು ದೇವರಿಗೆ ಹರಕೆ ಹೊತ್ತು, ಹೆತ್ತು ತನ್ನೆಲ್ಲ ಆಶೋತ್ತರಗಳನ್ನು ನಮಗಾಗಿಯೇ ತ್ಯಾಗ ಮಾಡಿ ಕುಟುಂಬದ ಸದಸ್ಯರ ಒಳಿತಿಗಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ತ್ಯಾಗಜೀವಿ ನನ್ನವ್ವ. ತಾನು ಅಶಿಕ್ಷಿತಳಾಗಿದ್ದರೂ ನಮ್ಮ ಬದುಕಿಗೊಂದು ಶಿಕ್ಷಣ ಆಸರೆಯಾಗಿ ಸ್ವಾವಲಂಭಿಗಳಾಗಬೇಕೆಂಬ ಹೆಬ್ಬಯಕೆ ಆಕೆಯದು.
Related Articles
Advertisement
ನಾನು ದ್ವೀತಿಯ ಪಿ.ಯು.ಸಿ. ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಪಾಸಾದಾಗ ಆಕೆಗಾದ ಸಂತಸಕ್ಕೆ ಪಾರವೇ ಇರಲಿಲ್ಲ. ರಾತ್ರಿ ಅಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಬಿಸಿ ಚಹಾ ಮಾಡಿ ಕುಡಿಸಿದ ನೆನಪುಗಳು ಈಗಲೂ ನನ್ನ ಕಣ್ಮುಂದೆ ಬಂದು ಹೋಗುತ್ತವೆ. ನನ್ನ ಮಗ ಉಪನ್ಯಾಸಕನಾಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಳು ನನ್ನ ತಾಯಿ. ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿದರೆ ಮುಂದೊಂದು ದಿನ ಒಳ್ಳೆಯ ದಿನ ಬಂದೇ ಬರುತ್ತದೆ.
ಕೆಳಗೆ ಬಿದ್ದೊರಿಗೆ ಮಾತ್ರ ಮೇಲೆಳುವುದು ಗೊತ್ತಾಗುತ್ತದೆ ಎಂದು ಆತ್ಮಸ್ಥೆçರ್ಯ ತುಂಬುತ್ತಿದ್ದಳು ಆಕೆ. 1998ರಲ್ಲಿ ನನ್ನೂರಿನ ಮತ್ತು ನಾ ಕಲಿತ ಕಾಲೇಜಿನಲ್ಲಿಯೇ ಉಪನ್ಯಾಸಕ ವೃತ್ತಿ ಪ್ರಾರಂಭಿಸಿದೆ. ಮುಂದೆ 2009ರಲ್ಲಿ ಸರಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡಾಗ ಇಡೀ ಊರ ತುಂಬೆಲ್ಲ ಸಿಹಿ ಹಂಚಿ ಸಂಭ್ರಮಿಸಿದ್ದಳು.
ವೃತ್ತಿಯನ್ನು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಮತ್ತು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳು ನಿನ್ನ ಮಕ್ಕಳಂತೆ ಕಾಣಬೇಕು. ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿ ಸದಾ ವೃತ್ತಿ ಗೌರವ ಮತ್ತು ಸಾಮಾಜಿಕ ಬದ್ಧತೆಯ ಗುಣಗಳನ್ನು ಕಲಿಸಿದಾಕೆ ನನ್ನವ್ವ.
ನನ್ನ ಮಗ ಕೇವಲ ಶಿಕ್ಷಕನಾಗದೇ ವಿದ್ಯಾರ್ಥಿಗಳ ಭವಿಷ್ಯ ರೂಪಕನಾಗಬೇಕೆಂಬ ಕನಸು ಕಂಡವಳು. ಆಕೆ ಇಂದು ನಮ್ಮ ಜತೆ ಭೌತಿಕವಾಗಿ ಇಲ್ಲವೆಂದರೂ ಆಕೆಯ ಭವಿಷ್ಯತ್ತಿನ ಸ್ಪೂರ್ತಿದಾಯಕ ಕಿವಿಮಾತು, ಸಲಹೆ ಮತ್ತು ತೋರಿದ ಬದುಕಿನ ದಾರಿ ನಮಗೆಲ್ಲ ದಾರಿದೀಪವಾಗಿದೆ. ಇಂದು ಆಕೆಯ ನೆನಪು ಬಂದಾಗ ನನ್ನ ಕಣ್ಣಂಚಿನಲ್ಲಿ ಭಾಷ್ಪಗಳು ನನಗೆ ಗೊತ್ತಿರದ ಹಾಗೆ ಉದುರುತ್ತವೆ.
ಅದಕ್ಕಂತಲೇ ಹಿರಿಯರು ಹೇಳುತ್ತಾರೆ ಜನರ ಕಷ್ಟ-ಕಾರ್ಪಣ್ಯಗಳನ್ನು ನಿವಾರಿಸಲು ಹಾಗೂ ಎಲ್ಲ ಸಂಕಷ್ಟಗಳಿಂದ ಜನರನ್ನು ಕಾಯಲು ದೇವರಿಗೆ ಆಗದೆಂದು ತಾಯಿ ಎಂಬ ಸ್ವರೂಪದ ದೇವತೆಯನ್ನು ಸೃಷ್ಟಿಸಿದ್ದಾನೆ. ಆದ್ದರಿಂದ ಅಮ್ಮ ಎಂಬ ಪರಮದೈವ ನಮ್ಮ ಜತೆಗಿದ್ದರೆ ಸಮಸ್ಯೆಗಳು ಹತ್ತಿರವೇ ಸುಳಿಯುವುದಿಲ್ಲ.
ಒಂದು ವೇಳೆ ಬಂದರೂ ಅವೆಲ್ಲವುಗಳಿಗೆ ತಾಯಿಯೆಂಬ ಅಗಣಿತ ಶಕ್ತಿದೇವತೆ ಹೊಡೆದೋಡಿಸುವಳು. ತಾಯಿಯಾದವಳು ಪ್ರತಿಯೊಂದು ಮನೆಯಲ್ಲಿ ಸಂಸ್ಕೃತಿ-ಸಂಸ್ಕಾರ, ಮನೆಯ ಪದ್ಧತಿ, ಸಂಪ್ರದಾಯ, ಆಚರಣೆ ಮತ್ತು ಸಾಮಾಜಿಕ-ಧಾರ್ಮಿಕ ವಿಧಿವಿಧಾನಗಳನ್ನು ಪರಿಚಯಿಸಲು ಹಾಗೂ ಉಳಿಸಿ-ಬೆಳೆಸಲು ಸರ್ವರಿಗೂ ಆದರ್ಶಪ್ರಾಯಳು.
ನನ್ನ ಮೊದಲ ಆದರ್ಶ ಮೂರ್ತಿ, ಸ್ಪೂರ್ತಿ ಮತ್ತು ಬದುಕು ರೂಪಿಸಿದ ಸಾಕಾರಮೂರ್ತಿ ಎಂದರೆ ನನ್ನವ್ವ. ಅದಕ್ಕಾಗಿ ಪ್ರತಿಯೊಬ್ಬರೂ ದೈವ ಸ್ವರೂಪರಾದ ತಂದೆ-ತಾಯಿಯರನ್ನು ಪ್ರೀತಿ, ಆದರ, ಗೌರವದೊಂದಿಗೆ ಕಾಣುತ್ತಾ ಸಂಸ್ಕಾರದ ಪ್ರತಿಬಿಂಬವಾಗಿರುವ ಅವರನ್ನು ಭಾವ-ಭಕ್ತಿಯಿಂದ ಪೂಜಿಸಬೇಕು ಎನ್ನುವುದೇ ನನ್ನ ಆಶಯ.
-ಮಲ್ಲಪ್ಪ ಸಿ. ಖೊದ್ನಾಪೂರ
ತಿಕೋಟಾ