Advertisement

UV Fusion: ಮುಖವಾಡದ ಬದುಕು ಅವಶ್ಯವೇ?

03:49 PM May 31, 2024 | Team Udayavani |

ಪ್ರತೀ ವ್ಯಕ್ತಿಗೂ ಎರಡು ಮುಖಗಳಿವೆ, ಒಂದು ಆತನ ನಿಜವಾದ ಆಂತರ್ಯ, ಇನ್ನೊಂದು ಆತ ಜಗತ್ತಿನಲ್ಲಿ ತನ್ನನ್ನು ತಾನು ಹೇಗೆ ಕಾಣಿಸಿಕೊಳ್ಳಲು ಇಚ್ಛಿಸುವನೋ ಆ ಮುಖ.ನಿಜವಾದ ಮುಖವನ್ನು ಜಗತ್ತು ನೋಡುತ್ತಿರುವ ಮುಖವಾಡ ಮರೆಮಾಚುತ್ತಿರುತ್ತದೆ. ಬಹಳ ಸಂದರ್ಭಗಳಲ್ಲಿ ಜಗತ್ತು ನೋಡುತ್ತಿರುವ ಮುಖಕ್ಕೆ ತದ್ವಿರುದ್ಧವಾದ ನೈಜ ಮುಖ ಹೊಂದಿರುವವರೇ ಹೆಚ್ಚು.

Advertisement

ಬಹುಶಃ ನಾವೆಲ್ಲ ಈ ಮುಖವಾಡ ತೊಟ್ಟುಕೊಳ್ಳುವುದು ನಮ್ಮ ಬಾಲ್ಯದ ಅಂತಿಮ ಹಂತದಲ್ಲಿ. ಅದಕ್ಕೇ ನೋಡಿ ಬಾಲ್ಯವೆಂಬುದು ಪರಿಶುದ್ಧ, ಸವಿನೆನಪುಗಳ ಬುತ್ತಿಯಾಗಿ ಉಳಿಯುವುದು.ಅಲ್ಲಿ ನಾವೆಲ್ಲರೂ ನಾವಾಗಿ ಬದುಕಿರುತ್ತೇವೆ.ತದನಂತರ ಬದುಕಿನ ಎರಡನೇ ಆಯಾಮ ಆರಂಭ.

ನಮ್ಮನ್ನು ಈ ಜಗ ಹೇಗೆ ನೋಡಬೇಕೆಂದು ಬಯಸುತ್ತೇವೆಯೋ ಅದಕ್ಕನುಗುಣವಾಗಿ ಮುಖವಾಡ ಧರಿಸಿ ಬದುಕಲಾರಂಭಿಸುತ್ತೇವೆ. ಪ್ರತಿ ಸನ್ನಿವೇಶ ಹಾಗೂ ವ್ಯಕ್ತಿಗಳಿಗೆ ಅನುಗುಣವಾಗಿ ಶೈಲಿಯನ್ನು ಬದಲಾಯಿಸುತ್ತವೆ,

ನಮ್ಮೆಲ್ಲರ ಹೈಸ್ಕೂಲ್‌ ಹಂತದ ದಿನಗಳನ್ನೊಮ್ಮೆ ಮೆಲುಕು ಹಾಕೋಣ ..ಗೆಳೆಯ ಗೆಳತಿಯರು ನಮ್ಮನ್ನು ಮೆಚ್ಚಿಕೊಳ್ಳಲಿ ಎಂಬ ಆಕಾಂಕ್ಷೆಯಿಂದ ಅದೆಷ್ಟೋ ಬಾರಿ ನಮ್ಮತನವನ್ನು ಅದುಮಿಟ್ಟು ಹೊಂದಾಣಿಕೆಯನ್ನು ತೋರ್ಪಡಿಸಿದ್ದುಂಟು.

ಕಾಲೇಜು ಹಂತಕ್ಕೆ ಕಾಲಿಡುವ ವಯಸ್ಸಿನಲ್ಲಿ ಮೂಡುವ ಭಾವನೆಗಳನ್ನು ಕೇಳಬೇಕೆ? ಸುತ್ತಲೂ ಬರಿಯ ಆಕರ್ಷಣೆಗಳತ್ತ ಓಲಾಡುವ ಚಿತ್ತಚಾಂಚಲ್ಯ.ನಮ್ಮ ಉಡುಗೆ- ತೊಡುಗೆ, ಹಾವಭಾವ, ಮಾತು ಆಚಾರ ವಿಚಾರ ಎಲ್ಲವೂ ಯಾರದೋ ನಿರೀಕ್ಷೆಗಳ ಮೇಲೆ ಅವಲಂಬಿತವಾಗಿರುತ್ತವೆ.

Advertisement

ಅಥವ ಇನ್ನೊಬ್ಬರ ಅನುಕರಣೆ ಆಗಿರುತ್ತದೆ. ಮನದೊಳಗೆ ಇನ್ನೂ ಪುಟ್ಟ ಮಗುವಾಗಿದ್ದಾಗ ಇದ್ದ ನಗು,ಆಸೆ, ಆಕಾಂಕ್ಷೆಗಳು ಹಾಗೆಯೇ ಇರುತ್ತವೆ ಆದರೆ ನೋಡಿದವರು ಏನಂದುಕೊಂಡಾರು? ಎಂಬ ಆಲೋಚನೆಯೊಂದು ಮನದೊಳಗೆ ಸದಾ ಎಚ್ಚರಿಕೆಯ ಘಂಟೆ ಬಾರಿಸುತ್ತಾ ಮುಖವಾಡದ ಬದುಕಿಗೆ ದಾರಿ ಮಾಡಿಕೊಡುತ್ತಿರುತ್ತವೆ.

ಒಂದು ಕ್ಷಣ ಯೋಚಿಸಿ ನೋಡಿ ನಿಮಗೆ ಇಂದೂ ಕೂಡ ಬಾಲ್ಯದಲ್ಲಾಡಿದ ಆಟಗಳನ್ನು ಆಡಬೇಕು ಅನಿಸುವುದಿಲ್ಲವೇ? ಆ ಮುಕ್ತ ನಗು,ತಡೆಯಿಲ್ಲದ ಅಳು,ನಿಷ್ಕಲ್ಮಶ ಪ್ರೀತಿ ಆಪ್ಯಾಯಮಾನ ಅನಿಸುವುದಿಲ್ಲವೇ…ಆದರೆ ಆ ಆಕಾಂಕ್ಷೆಗಳೆಲ್ಲವೂ ಮುಖವಾಡದಿಂದ ಮರೆಮಾಚಲ್ಪಟ್ಟಿವೆ.

ಇನ್ನೂ ಸೋಜಿಗದ ಸಂಗತಿಯೆಂದರೆ ಉಡುಗೆಗೆ ಹೊಂದುವಂತೆ ಮ್ಯಾಚಿಂಗ್‌ ತೊಡುಗೆಗಳನ್ನು ಹಾಕಿಕೊಳ್ಳುವ ರೀತಿಯಲ್ಲಿ ನಾವು ಸಮಯ ಸಂದರ್ಭಗಳಿಗೆ ತಕ್ಕುದಾಗಿ ವಿವಿಧ ಮುಖವಾಡಗಳನ್ನು ಧರಿಸುತ್ತಾ ಬದುಕುತ್ತೇವೆ..ಕೆಲವೊಮ್ಮೆ ಸೌಮ್ಯತೆ,ಇನ್ನೊಮ್ಮೆ ಗಾಂಭೀರ್ಯ ಮತ್ತೂಮ್ಮೆ ಉಗ್ರತೆ ಹೀಗೆ ಪಾತ್ರ, ಪರಿಸ್ಥಿತಿ, ಪರಿಣಾಮದ ತೀವ್ರತೆಗೆ ಅನುಗುಣವಾಗಿ ಮುಖವಾಡಗಳನ್ನು ಹೊಂದಿಸುತ್ತಾ ಹಾಕಿಕೊಳ್ಳುತ್ತೇವೆ. ನನ್ನ ಕಣ್ಣಿಗೆ ಯಾರೋ ವಂಚಕನಾಗಿ ಕಂಡರೆ ನಿಮ್ಮ ಕಣ್ಣಿಗೆ ದಾನಿಯಾಗಿ ಕಾಣಬಹುದು ಎಲ್ಲವೂ ಆತ ಧರಿಸಿದ ಮುಖವಾಡವನ್ನಾಧರಿಸಿರುತ್ತದೆ. ಪ್ರತಿಯೊಬ್ಬರಿಗೂ ಒಂದೆತರ ಕಾಣಿಸಬೇಕೆಂದೇನಿಲ್ಲಾ. ಯಾಕೆಂದರೆ ಇಲ್ಲಿ ಎಲ್ಲರ ದೃಷ್ಟಿಕೋನ ಒಂದೇ ಅಲ್ಲಾ!

ಹಾಗಾದರೆ ಒಬ್ಬ ವ್ಯಕ್ತಿಯ ನೈಜ ಮುಖ ಕಾಣುವುದು ಅಸಾಧ್ಯವೇ? ಎಂಬುದು ನಿಮ್ಮ ಪ್ರಶ್ನೆಯಾದರೆ…ಇಲ್ಲ.. ಅಸಾಧ್ಯವಲ್ಲ… ಯಾವಾಗ ನಾವು ಒಬ್ಬ ವ್ಯಕ್ತಿಗೆ ಹತ್ತಿರವಾಗುತ್ತಾ ಸಾಗುತ್ತೇವೆಯೋ ಆಗ ಆತನ ಆಂತರ್ಯದ ಮುಖ ನಮಗೆ ಗೋಚರವಾಗುತ್ತಾ ಹೋಗುತ್ತದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯೊಂದಿದೆ.ಅದೇ ಬೆಟ್ಟಕ್ಕೆ ಹತ್ತಿರವಾಗುತ್ತಾ ಹೋದಂತೆ ಬೆಟ್ಟದ ಉಬ್ಬು- ತಗ್ಗುಗಳು, ಕಮರಿಗಳು ಗೋಚರವಾಗುವಂತೆ ಮುಖವಾಡಗಳನ್ನು ನೋಡಿ ಆಕರ್ಸಿತರಾಗಿ ಅರ್ಥ -ಅನರ್ಥ ಮಾಡಿಕೊಂಡು ಆಪ್ತರಾಗುತ್ತಾ ಹೋದಂತೆ ವ್ಯಕ್ತಿಯ ನೈಜ ಮುಖ ಅನಾವರಣಗೊಳ್ಳುತ್ತದೆ.

ಒಬ್ಬ ವ್ಯಕ್ತಿ ಯಾವಾಗಲೂ ಮುಖವಾಡ ಧರಿಸಿ ತನ್ನದಲ್ಲದ ಬದುಕನ್ನು ಬದುಕುವುದು ಅಸಾಧ್ಯ , ಜೀವನದಲ್ಲಿ ಯಾರನ್ನು ಪೈಪೋಟಿಗೆ ತೆಗೆದುಕೊಳ್ಳದಿರಿ, ಅವನಿಗಿಂತ ನಾನು ಹೆಚ್ಚಾಗಬೇಕು ಎಂದು ಪೈಪೋಟಿಗೆ ಇಳಿಯದಿರಿ, ಯಾಕೆಂದರೆ ಎಲ್ಲರ ಜೀವನ ಒಂದೇ ರೀತಿ ಇಲ್ಲ, ವಿಭಿನ್ನತೆ ಹಾಗು ವಿಶಿಷ್ಟತೆಯಿಂದ ಕೂಡಿದೆ.  ಆತ ಅಂದುಕೊಳ್ಳಬಹುದು ತನ್ನ ಮುಖವಾಡದ ಬದುಕು ಯಾರಿಗೂ ಗೋಚರವಾಗದು ಎಂದು ಆದರೆ ಅದು ಆತನ ವರ್ತನೆಯಿಂದಲೇ ಇನ್ನೊಬ್ಬರಿಗೆ ಗೋಚರವಾಗುತ್ತದೆ. ಈ ಮುಖವಾಡದ ಬದುಕು ಎಂದಿಗೂ ಶಾಶ್ವತವಲ್ಲ!.

ಕೊನೆಯ ಮಾತು ಯಾರೂ ನೀವಂದುಕೊಂಡಂತಿಲ್ಲ ಎಲ್ಲರಲ್ಲೂ ಮುಖವಾಡಗಳ ಸಂಗ್ರಹವಿದೆ ಎಚ್ಚರ…

ಅರಿತು ನಡೆಯಿರಿ …ಬೆರೆತು ತಿಳಿಯಿರಿ…

-ನಿಶ್ಮಿತಾ ಗುರುಪ್ರಸಾದ್‌ ಎ.

ಹಾರ ಮನೆ ಕೊಕ್ಕಡ

Advertisement

Udayavani is now on Telegram. Click here to join our channel and stay updated with the latest news.

Next