ಹಾಯಾರೀ ಇಂಡಿ ಪಂಪ್ ಮಟ, ಅಂತ ನಿರ್ವಾಹಕರು ಹುಬ್ಬಳ್ಳಿ ಹಳೆ ಬಸ್ ನಿಲ್ದಾಣದಲ್ಲಿ ಕೂಗುತ್ತಿರುತ್ತಾರೆ. ಅದರಲ್ಲೇನು ವಿಶೇಷ ಅಂತೀರಾ. ಹೀಗೆ ಭಾಷೆ ಸಂವಹನ ಸರಿಯಾಗದಿದ್ದರೆ ಫಜೀತಿ ಅಂತಾರಲ್ಲ ಹಾಗೇ ಆಗಿತ್ತು ನಮಗೂ.
ಹುಬ್ಬಳ್ಳಿಯ ಹೆಗ್ಗೇರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸೀಟು ಸಿಕ್ಕಿತ್ತು. ಕಾಲೇಜು ಪ್ರಾರಂಭವಾಗಿತ್ತು. ನಂಗೆ ಹಳೆ ಹುಬ್ಬಳ್ಳಿಯ ಅಷ್ಟು ಪರಿಚಯ ಇರಲಿಲ್ಲ. ಹಾಗಾಗಿ ಮನೆಯಲ್ಲಿ ಕಾಲೇಜಿಗೆ ಹೇಗೆ ಹೋಗುವುದು ಎಂದು ಕೇಳಿದಾಗ ಇಂಡಿ ಪಂಪ್ ಸ್ಟಾಪ್‌ನಲ್ಲಿ ಇಳಿಬೇಕು ಎಂದು ತಿಳಿಸಿದ್ದರು. ಅದೇ ರೀತಿ ಬಸ್ ಇಂಡಿ ಪಂಪ್ ದಾಟಿ ಮುಂದೆ ಆನಂದ ನಗರ, ಸಿದ್ಧಾರೂಢ ಮಠದ ಕಡೆ ಹೋಗುತ್ತದೆ ಅಂತಾನೂ ಹೇಳಿದ್ದರು.
ಮುಂಜಾನೆ ಸ್ನೇಹಿತೆಯರ ಜತೆಗೂಡಿ ಕಾಲೇಜ್‌ಗೆ ತಯಾರಾಗಿ ಬಸ್ ಸಿಲ್ದಾಣದಲ್ಲಿ ಬಂದು ನಿಂತೆ. ಸಿದ್ಧಾರೂಢ ಮಠದ ಬಸ್ ಬಂತು ಕಂಡಕ್ಟರ್ ಇಂಡಿ ಪಂಪ್ ಮಟಾ ಅಂತ ಜೋರಾಗಿ ಕೂಗಿದರು. ನಾನೂ ಈ ಬಸ್ ಇಂಡಿ ಪಂಪ್ ತನಕ ಹೊಕ್ಕೆತಿ ಅನ್ಕೊಂಡು ಹ್ಯಾಂಗಿದ್ರೂ, ನಾನು ಇಂಡಿ ಪಂಪ್ ಸ್ಟಾಪ್‌ಗೆ ಇಳಿದ್ರೆ ಸಾಕು ಅಂತ ಬಸ್ ಹತ್ತಿದೆ.
ಆದ್ರೂ ಬಸ್‌ಗೆ ಸಿದ್ಧಾರೂಢ ಮಠ ಅಂತ ಬೋರ್ಡ್ ಹಾಕ್ಯಾರ್ ಯಾವಾಗ ಹೊಕ್ಕೈತಿ ಇದು ಅಂತ ಯೋಚನೆ ಮಾಡಿದೆ. ಮರುದಿನವೂ ಮತ್ತೆ ಬಸ್ ನಿಲ್ದಾಣಕ್ಕೆ ಬಂದಾಗ ಯಾರೀ ಇಂಡಿ ಪಂಪ್ ಮಟ ಅಂದರು. ನಾನು ಮತ್ತು ನಮ್ಮೆಲ್ಲಾ ಸ್ನೇಹಿತೆಯರು ಇವ್ರ ಇಂಡಿ ಪಂಪ್ ತನ ಅಷ್ಟ ಹೋದರ, ಮುಂದ ಆನಂದ ನಗರ, ಸಿದ್ಧಾರೂಢರ ಮಠಕ ಹೋಗೊರು ಹ್ಯಾಂಗ ಹೋಗತಾರ, ಅಂತ ಇರಲಾರದ ಇರುವೆ ಬಿಡ್ಕೊಂಡ್ರು ಅನ್ನುವಂಗ ಚಿಂತಿ ಮಾಡಕ್ಹತ್ತಿದ್ವಿ.
ಮನಿಗೆ ಬಂದು ಕೇಳಿದಾಗ ಅಸಲಿ ವಿಷಯ ಗೊತ್ತಾಗಿದ್ದು. ಇಂಡಿ ಪಂಪ ಮಟ ಅಂದರ, ಅಲ್ಲಿಯವರೆಗೂ ಅಷ್ಟ ಅಲ್ಲ, ನಾವೆಲ್ಲಾ ಇಲ್ಲೇ ಚೆನ್ನಮ್ಮ ಸರ್ಕಲ್ ಮಟ ಬಾಲೇ , ಲೇ ಜಾಬಿನ್ ಕಾಲೇಜು ಮಟ ಅಷ್ಟ ಅಂತ ಅನ್ನೋ ಮಟ ಇದಲ್ಲಾ, ಇದು ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರ ಮಠ ನಿರ್ವಾಹಕರ ಬಾಯಲ್ಲಿ ಹಾ ಯಾರೀ ಇಂಡಿ ಪಂಪ ಮಟ ಅನ್ನೋವಂಗ ಕೇಳಿಸಿತ್ತು.
ಮಟ ಅಂದ್ರೆ ಅಲ್ಲಿಮಟ ಬಿಡಲೇ ವಿದ್ಯಾನಗರ ಮಟ ಡ್ರಾಪ್ ಅನ್ನೋ ಮಟ ಅಲ್ಲ ಮಠ ಅಂತ ಗೊತ್ತಾಗಿ ಒಳಗೊಳಗೆ ನಕ್ಕಿದ್ದೆವು. ಮನೆ ಮಂದಿಯಲ್ಲಾ ನಕ್ಕಿದ್ದು ನಾಚಿಕೆ ತರಸಿತ್ತು. ಈಗಲೂ ಹಾ ಯಾರೀ ಇಂಡಿಪಂಪಮಟ ಅಂದರ ಸಾಕು ಕಾಲೇಜಿನ ಪ್ರಾರಂಭದ ದಿನಗಳ ಸವಿನೆನಪುಗಳು ಬಿಚ್ಚುತ್ತವೆ.
-ಡಾ| ದೀಕ್ಷಾ ಹುಣಸೀಮರದ
ಹುಬ್ಬಳ್ಳಿ