ಮನರಂಜನೆಗಾಗಿ ಸಿನೆಮಾ ನೋಡುವವರಿಗೆ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ತಂಡ ರಸದೌತಣವನ್ನು ಉಣಬಡಿಸಿದೆ. ನಿರ್ದೇಶಕ ಸುಜನ್ ಶಾಸ್ತ್ರಿ ಈ ಸಿನೆಮಾವನ್ನು ಕೇವಲ ಮನರಂಜನೆಗಾಗಿ ಧಾರೆ ಎರೆದಿದ್ದಾರೆ.
ಮದುವೆ ವಿಚಾರದ ಕಥೆಯನ್ನು ಇಟ್ಟುಕೊಂಡು ನಿರ್ದೇಶಕರು ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಮದುವೆ ವಯಸ್ಸಿಗೆ ಬಂದ ಹುಡುಗನೊಬ್ಬನಿಗೆ ಇನ್ನೂ ಕಂಕಣ ಭಾಗ್ಯ ಕೂಡಿಬಾರದೇ ಇದ್ದಾಗ ಆತ ಅನುಭವಿಸುವ ಯಾತನೆ, ಅವಮಾನಗಳು ಅಷ್ಟಿಷ್ಟಲ್ಲ. ಅವೆಲ್ಲದಕ್ಕೂ ಹಾಸ್ಯದ ಲೇಪನಗೈದು ಈ ಸಿನೆಮಾ ಮಾಡಿದ್ದಾರೆ.
ವೆಂಕಟ ಕೃಷ್ಣ ಗುಬ್ಬಿ (ರಾಜ್ ಬಿ. ಶೆಟ್ಟಿ) ಒಳ್ಳೆಯ ಉದ್ಯೋಗದಲ್ಲಿರುವ ವ್ಯಕ್ತಿ. ಕೈ ತುಂಬಾ ಸಂಬಳವೂ ಇದೆ. ಜತೆಗೆ ಒಳ್ಳೆಯ ಫ್ಯಾಮಿಲಿ ಹಿನ್ನೆಲೆಯೂ ಇದೆ. ಆದರೆ ಇಷ್ಟೆಲ್ಲಾ ಇದ್ದರೂ ಮಗನಿಗೆ ಮದುವೆಯಾಗಿಲ್ಲ ಎಂಬುದು ನಟನ ತಂದೆ ತಾಯಿಯ ಕೊರಗು. ವೆಂಕಟ ಕೃಷ್ಣ ಗುಬ್ಬಿಯನ್ನು ಮದುವೆಯಾಗಲು ನೋಡಿದ ಬಹುತೇಕ ಹುಡುಗಿಯರು ಒಂದಲ್ಲ, ಒಂದು ಕಾರಣದಿಂದ ರಿಜೆಕ್ಟ್ ಮಾಡುತ್ತಾರೆ. ಇದರಲ್ಲಿ ನಟನ ತಾಯಿ ನೋಡಿದ ಕೆಲವು ಸಂಬಂಧಗಳು ಸೇರಿತ್ತು.
ಇಲ್ಲಿ ಕೆಲವು ಹುಡುಗಿಯರನ್ನು ಸ್ವತಃ ನಟನೇ ‘ಬೇಡ’ ಎಂದಿರುತ್ತಾನೆ. ತಾನು ಮದುವೆಯಾದರೆ ಲವ್ ಮ್ಯಾರೇಜ್ ಆಗಬೇಕೆಂಬ ಆಸೆಯೂ ಈ ಮಧ್ಯೆ ಚಿಗುರಿರುತ್ತದೆ. ಇಂತಹ ಸಮಯದಲ್ಲಿ ಮ್ಯಾಟ್ರಿಮೋನಿ ತಾಣದಲ್ಲಿ ಆತನಿಗೆ ಹುಡುಗಿಯೊಬ್ಬಳ ಪರಿಚಯವಾಗುತ್ತಾಳೆ. ಈ ಪರಿಚಯ ಪ್ರೀತಿಯಾಗಿ ಬದಲಾಗುತ್ತದೆ. ಇನ್ನೇನು ನಿಶ್ಚಿತಾರ್ಥ ಮಾಡಿಕೊಳ್ಳಬೇಕು ಎಂಬ ಆ ಸಮಯದಲ್ಲಿ ಒಂದಲ್ಲ ಒಂದು ಅಡ್ಡಿ ಆತಂಕಗಳು ಎದುರಾಗುತ್ತದೆ. ಇವುಗಳನ್ನು ನಾಯಕ ಹೇಗೆ ಎದುರಿಸುತ್ತಾನೆ ಎಂಬುದೇ ಈ ಚಿತ್ರದ ಕಥಾ ಹಂದರ.
ಈ ಚಿತ್ರದ ನಾಯಕ ರಾಜ್ ಬಿ. ಶೆಟ್ಟಿ. ರಾಜ್ ಶೆಟ್ಟಿಯವರ ‘ಒಂದು ಮೊಟ್ಟೆಯ ಕಥೆ’ ಚಿತ್ರ ಮತ್ತು ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ನೋಡಿದಾಗ ನಿಮಗೆ ಅದರ ಮತ್ತೊಂದು ಆವೃತ್ತಿಯಂತೆ ಕಾಣುತ್ತದೆ. ಚಿತ್ರವನ್ನು ನೀವು ನೋಡಿದ್ದರೆ ಅಲ್ಲಿನ ಕಥೆಯ ಮೂಲ ಅಂಶವೂ ಇದೇ ಆಗಿತ್ತು. ಎಲ್ಲಾ ಹುಡುಗಿಯರಿಂದ ರಿಜೆಕ್ಟ್ ಆದ ಹುಡುಗನೊಬ್ಬನ ನೋವಿಗೆ ಕಾಮಿಡಿ ಬೆರೆಸಿ ಈ ಸಿನಿಮಾವನ್ನು ಮಾಡಲಾಗಿತ್ತು. ಇಲ್ಲೂ ಅದೇ ಮುಂದುವರಿದಿದೆ. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರ ಔಟ್ ಆ್ಯಂಡ್ ಔಟ್ ಕಾಮಿಡಿ ಚಿತ್ರ ಎಂದು ಕರೆಯಬಹುದಾಗಿದೆ.
ನಿರ್ದೇಶಕರು ಈ ಚಿತ್ರದ ಉದ್ದಕ್ಕೂ ಎಲ್ಲೂ ತನ್ನ ಟ್ವಿಸ್ಟಿಂಗ್ ಅನ್ನು ಬಳಸಿಲ್ಲ. ಬದಲಾಗಿ, ಪ್ರೇಕ್ಷರನ್ನು ನಗಿಸಿ ಕಲಿಸಿಕೊಡುತ್ತಾರೆ. ಇಲ್ಲಿ ಕಥೆಗಿಂತ ಚಿತ್ರದ ಕೆಲವು ಸನ್ನಿವೇಶಗಳು ಹೆಚ್ಚು ಆಪ್ತವಾಗುತ್ತದೆ. ಇಡೀ ಚಿತ್ರ ನಾಯಕ ನಟ ರಾಜ್ ಶೆಟ್ಟಿ ಸುತ್ತವೇ ಸಾಗುತ್ತದೆ. ಅವರ ಮದುವೆ ಕನಸು, ಆ ಹಂತದಲ್ಲಿ ಅನುಭವಿಸುವ ಯಾತನೆ ಅವಮಾನ, ತಾನು ಇಷ್ಟಪಟ್ಟ ಹುಡುಗಿಗಾಗಿ ತೆಗೆದುಕೊಳ್ಳುವ ರಿಸ್ಕ್ ಸುತ್ತ ಅವರ ಪಾತ್ರ ಮುಂದುವರಿಯುತ್ತದೆ. ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಅವರು ಪ್ರಯತ್ನಿಸಿದ್ದಾರೆ.
ಹುಡುಗಿ ಸಿಗದ ನೋವು ಅನುಭವಿಸುವ ಹುಡುಗನ ಪಾತ್ರವನ್ನು ರಾಜ್ ಬಿ. ಶೆಟ್ಟಿ ಅತ್ಯುತ್ತಮವಾಗಿ ಮಾಡಿದ್ದಾರೆ. ನಿರ್ದೇಶಕ ಸುಜಯ್ ಶಾಸ್ತ್ರಿ ಅವರೂ ಪಾತ್ರವೊಂದರ ಮೂಲಕ ನಗುವನ್ನು ತಂದಿರಿಸುತ್ತಾರೆ. ಬಿಗ್‌ಬಾಸ್‌ನ ಕವಿತಾ ಗೌಡ, ಗಿರಿ, ಶೋಭರಾಜ್, ಪ್ರಮೋದ್ ಶೆಟ್ಟಿ ಮೊದಲಾದ ತಾರಾಗಣ ಚೆನ್ನಾಗಿ ಕೆಲಸ ಮಾಡಿದೆ. ಸಿನಿಮಾಟೋಗ್ರಾಫರ್ ಸುನೀತ್ ಹಲಗೇರಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿ ಕೊಂಡಿದ್ದಾರೆ. ಜತೆಗೆ ಮಣಿಕಾಂತ್ ಕದ್ರಿ ಸಂಯೋಜಿಸಿರುವ ಹಾಡುಗಳೂ ಚಿತ್ರದ ಮನರಂಜನೆಯನ್ನು ಹೆಚ್ಚಿಸಲು ಸಹಕಾರಿಯಾಗಿವೆ.
– ಅಭಿಮನ್ಯು, ವಿಟ್ಲ