ಬಾಂಬೆ ಟು ಗೋವಾ ಎಂಬ ಅತ್ಯಂತ ಜನಪ್ರಿಯತೆ ಗಲಿಸಿದ ಹಿಂದಿ ಸಿನೆಮಾದಂತೆ ಕೊಲ್ಕತ್ತಾದಿಂದ ಲಂಡನ್‌ಗೆ ಬಸ್ ಮಾರ್ಗವಿತ್ತೆಂದರೆ ನಾವು ನಂಬಲೇಬೇಕು. ಸುಮಾರು 50 ದಿನಗಳ ಬಸ್ ಪ್ರಯಾಣ ಅದು. ಲಂಡನ್‌ನಿಂದ ಪ್ರಾರಂಭವಾಗಿ ಜರ್ಮನಿ, ಆಸ್ಟ್ರಿಯಾ, ಬಲ್ಗೇರಿಯಾ, ಯುಗೊಸ್ಲಾವಿಯ, ಟರ್ಕಿ, ಇರಾನ್, ಅಪಘಾನಿಸ್ಥಾನ, ಪಾಕಿಸ್ಥಾನದ ಮೂಲಕ ಕೋಲ್ಕತಾ ನಗರವನ್ನು ತಲುಪುತ್ತಿತ್ತು.
ಈ ಬಸ್ ಪ್ರಯಾಣ ಪ್ರಾರಂಭವಾಗಿದ್ದು 1957ರಲ್ಲಿ. ಇದು ವಿಶ್ವದ ಅತ್ಯಂತ ಸುದೀರ್ಘವಾದ ಬಸ್ ಪ್ರಯಾಣ ಮಾರ್ಗವೆಂದೇ ಖ್ಯಾತಿ ಪಡೆದಿದೆ. ಇದನ್ನು ‘ಹಿಪ್ಪಿ ರೂಟ್’ ಎಂದೂ ಕರೆಯಲಾಗುತ್ತದೆ. ಈ ಪ್ರಯಾಣದ ವೆಚ್ಚ ಅಂದಿನ ಕಾಲಕ್ಕೆ 80 ಪೌಂಡ್‌ಗಳಾಗಿತ್ತು. ಅಂದರೆ ಇಂದಿನ 2,000 ಪೌಂಡ್‌ಗಳಿಗೆ ಸಮವಾಗಿದ್ದು, ಭಾರತದ ರೂಪಾಯಿಯಲ್ಲಿ ಎರಡು ಲಕ್ಷದ ಎಪ್ಪತ್ತು ಸಾವಿರ ಎನ್ನಬಹುದು.
ಈ ಇಂಗ್ಲಡ್ ಟು ಕೋಲ್ಕತಾ ಪ್ರಯಾಣವು 10,000 ಮೈಲಿಗಳು (16,000 ಕಿ.ಮೀ.) ರೌಂಡ್ ಟ್ರಿಪ್ ಅಂದರೆ 20,300 ಮೈಲುಗಳು (32,700 ಕಿಮೀ) ಆಗಿತ್ತು. ಆಲ್ಬರ್ಟ್ ಟ್ರಾವೆಲ್ ನಿರ್ವಹಿಸುತ್ತಿದ್ದ ಈ ಬಸ್ ಸೇವೆಯು 1976ರ ವರೆಗೆ ಚಾಲ್ತಿಯಲ್ಲಿತ್ತು. ಈ ಸೇವೆಯ ಮೊದಲ ಪ್ರಯಾಣವು ಲಂಡನ್‌ನಿಂದ ಎಪ್ರಿಲ್ 15, 1957ರಂದು ಪ್ರಾರಂಭವಾಗಿ 50 ದಿನಗಳ ಅನಂತರ ಜೂನ್ 5ರಂದು ಕೋಲ್ಕತಾವನ್ನು ತಲುಪಿತ್ತು. ಈ ಪ್ರಯಾಣದ ಸಂದರ್ಭ ಬಸ್ ಇಂಗ್ಲೆಂಡ್‌ನಿಂದ ಬೆಲ್ಜಿಯಂಗೆ ಅಲ್ಲಿಂದ ಪಶ್ಚಿಮ ಜರ್ಮನಿ, ಆಸ್ಟ್ರಿಯಾ, ಯುಗೊಸ್ಲಾವಿಯಾ, ಬಲ್ಗೇರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ವಾಯುವ್ಯ ಭಾರತದ ಮೂಲಕ ಭಾರತಕ್ಕೆ ಬರುತ್ತಿತ್ತು. ಭಾರತವನ್ನು ಪ್ರವೇಶಿಸಿದ ಅನಂತರ ಅದು ಅಂತಿಮವಾಗಿ ಹೊಸದಿಲ್ಲಿ, ಆಗ್ರಾ, ಅಲಹಾಬಾದ್ ಮತ್ತು ಬನಾರಸ್ ಮೂಲಕ ಕೊಲ್ಕತ್ತಾವನ್ನು ತಲುಪುತಿತ್ತು.
ಈ ಬಸ್‌ನಲ್ಲಿ ಓದುವ ಸೌಲಭ್ಯ, ಪ್ರಯಾಣಿಕರಿಗೆ ಪ್ರತ್ಯೇಕ ಮಲಗುವ ಬಂಕ್‌ಗಳು, ಫ್ಯಾನ್, ಹೀಟರ್‌ಗಳು ಮತ್ತು ಅಡುಗೆಮನೆಯನ್ನು ಸಹ ಹೊಂದಿತ್ತು. ಬಸ್ಸಿನ ಮೇಲಿನ ಡೆಕ್‌ನಲ್ಲಿ ಮುಂಭಾಗದ ವೀಕ್ಷಣ ಕೋಣೆಯಿದ್ದು, ರೇಡಿಯೋ ಮತ್ತು ಪಾರ್ಟಿಗಳಿಗೆ ಸಂಗೀತ ವ್ಯವಸ್ಥೆಯನ್ನೂ ಹೊಂದಿತ್ತು. ಈ ಪ್ರಯಾಣದ ಅವಧಿಯಲ್ಲಿ ಬನಾರಸ್ ಮತ್ತು ಯಮುನಾ ತೀರದಲ್ಲಿರುವ ತಾಜ್ ಮಹಲ್ ಸೇರಿದಂತೆ ಭಾರತದ ಪ್ರವಾಸಿ ತಾಣಗಳಲ್ಲಿ ಸಮಯ ಕಳೆಯಲು ಪ್ರಯಾಣದ ಸಂದರ್ಭ ಅನುವು ಮಾಡಿಕೊಡಲಾಗಿದ್ದು, ಟೆಹ್ರಾನ್, ಸಾಲ್ಜ್ಬರ್ಗ್, ಕಾಬೂಲ್, ಇಸ್ತಾನ್‌ಬುಲ್ ಮತ್ತು ವಿಯೆನ್ನಾದಲ್ಲಿ ಶಾಪಿಂಗ್ ಮಾಡಲು ಸಹ ಅವಕಾಶವಿತ್ತು.
ಬದಲಾದ ಸನ್ನಿವೇಶದಲ್ಲಿ ಕೆಲವು ವರ್ಷಗಳ ಅನಂತರ ಬಸ್ ಅಪಘಾತಕ್ಕೀಡಾಗಿ ಮತ್ತೆ ಬಳಸದಂತಾಯಿತು. ಅನಂತರ ಬಸ್ ಅನ್ನು ಬ್ರಿಟಿಷ್ ಪ್ರಯಾಣಿಕ ಆಂಡಿ ಸ್ಟೀವರ್ಟ್ ಖರೀದಿಸಿದರು. ಅವರು ಅದನ್ನು ಎರಡು ಹಂತಗಳೊಂದಿಗೆ ಮೊಬೈಲ್ ಮನೆಯಾಗಿ ಮರುನಿರ್ಮಾಣ ಮಾಡಿದರು. ಬಳಿಕ ಈ ಡಬಲ್ ಡೆಕ್ಕರ್‌ಅನ್ನು ‘ಆಲ್ಬರ್ಟ್’ ಎಂದು ಮರುನಾಮಕರಣ ಮಾಡಲಾಯಿತು. ಅಕ್ಟೋಬರ್ 8, 1968ರಂದು ಸಿಡ್ನಿಯಿಂದ ಲಂಡನ್‌ಗೆ ಭಾರತದ ಮೂಲಕ ಪ್ರಯಾಣಿಸಲಾಯಿತು. ಬಸ್ ಲಂಡನ್ ತಲುಪಲು ಸುಮಾರು 132 ದಿನಗಳನ್ನು ತೆಗೆದುಕೊಂಡಿತು. ಆಲ್ಬರ್ಟ್ ಟೂರ್ಷ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮೂಲದ ಕಂಪೆನಿಯಾಗಿದ್ದು ಅದು ಲಂಡನ್-ಕೊಲ್ಕತ್ತಾ-ಲಂಡನ್ ಮತ್ತು ಲಂಡನ್-ಕೋಲ್ಕತಾ-ಸಿಡ್ನಿ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು.
ಅನಂತರ ಈ ಬಸ್ ಇರಾನ್ ಮೂಲಕ ಭಾರತವನ್ನು ತಲುಪಿತು ಮತ್ತು ಬರ್ಮಾ, ಥೈಲ್ಯಾಂಡ್ ಹಾಗೂ ಮಲೇಷ್ಯಾ ಮೂಲಕ ಸಿಂಗಾಪುರಕ್ಕೆ ಪ್ರಯಾಣಿಸಿತು. ಸಿಂಗಾಪುರದಿಂದ ಬಸ್ ಅನ್ನು ಹಡಗಿನ ಮೂಲಕ ಆಸ್ಟ್ರೇಲಿಯಾದ ಪರ್ತ್‌ಗೆ ಸಾಗಿಸಲಾಯಿತು ಮತ್ತು ಅಲ್ಲಿಂದ ಸಿಡ್ನಿಗೆ ರಸ್ತೆಯ ಮೂಲಕ ಕೊಂಡೊಯ್ಯಲಾಯಿತು.
ಇರಾನಿನ ಕ್ರಾಂತಿ, ಪಾಕಿಸ್ಥಾನ ಮತ್ತು ಭಾರತದ ನಡುವಿನ ಉದ್ವಿಗ್ನತೆಯ ಉಲ್ಬಣಕ್ಕೆ ಕಾರಣವಾದ ರಾಜಕೀಯ ಪರಿಸ್ಥಿತಿಗಳಿಂದಾಗಿ 1976ರಲ್ಲಿ ಬಸ್ ಸೇವೆ ಸ್ಥಗಿತಗೊಳಿಸಲಾಯಿತು. ಆಲ್ಬರ್ಟ್ ಟೂರ್ಷ್ ಸೇವೆಯು ಶಾಶ್ವತವಾಗಿ ಕೊನೆಗೊಳ್ಳುವ ಮೊದಲು ಕೋಲ್ಕತಾದಿಂದ ಲಂಡನ್ ಮತ್ತು ಮತ್ತೆ ಲಂಡನ್‌ನಿಂದ ಸಿಡ್ನಿಗೆ ಸುಮಾರು 15 ಟ್ರಿಪ್‌ಗಳನ್ನು ಪೂರ್ಣಗೊಳಿಸಿತ್ತು.
-ರಾಸುಮ ಭಟ್, ಕುವೆಂಪು ವಿವಿ