Advertisement
ಕೆಲವರಿಗೆ ವಯಸ್ಸಿಗೆ ಮೀರಿದ ಅನುಭವವಿದ್ದು ಅವರ ಹೊರ ಅರಿವಿನ ಗುಣಮಟ್ಟಕ್ಕೆ ತಕ್ಕನಾದ ಜ್ಞಾನದ ಶ್ರೇಷ್ಟೆತೆಯು ಸಿದ್ಧಿಸಿರುತ್ತದೆ. ಮತ್ತೂ ಕೆಲವರಿಗೆ ಅದೆಷ್ಟೇ ವಯಸ್ಸು ಕಳೆದರೂ ಬುದ್ಧಿ ಇಲ್ಲದಂತೆ ವರ್ತಿಸುತ್ತಾರೆ ಅವರ ಜ್ಞಾನದ ಗುಣಮಟ್ಟ ಅನುಭವದ ಸಾರವಾಗಿ ಶೂನ್ಯವಾಗಿರುತ್ತದೆ. ‘ಓದು ಒಕ್ಕಾಲು-ಬುದ್ಧಿ ಮುಕ್ಕಾಲು’ ಗಾದೆಯಂತಿರುತ್ತದೆ.
Related Articles
Advertisement
ಬಾಲ್ಯದಿಂದ ಹದಿಹರೆಯ ಇದೊಂದು ಬಗೆಯ ಹಸಿಮಣ್ಣಿನಂತಹ ಮೆದುಳು, ಇದು ಎಷ್ಟೊತ್ತು ಬೇಯಬೇಕು ಮತ್ತು ಯಾವ ಆಕಾರಕ್ಕೆ ತಿದ್ದಿ-ತೀಡಿ ಒಣಗಿಸಬೇಕು ಎಂದು ಹಸಿಮಣ್ಣಿಗೆ ರೂಪು ನೀಡುವ ಕಾಲವದು. ಆದರೆ ಹದಿಹರೆಯವದು ಚಂಚಲ ಮನಸ್ಸು ಮಂಗನಂತೆ ಜಿಗಿಯುತ್ತದೆ. ಹಸಿ-ಬಿಸಿ ಕಾಮನೆಗಳ ಚಾಂಚಲ್ಯ ಬುದ್ಧಿಗೆ ಯಾರದೇ ತಿಳುವಳಿಕೆಯ ಮಾತು ಸಲ್ಲದು. ಸುತ್ತಮುತ್ತಲಿನ ವಾತಾವರಣದ ಅರಿವಿಗಿಂತಲೂ ತನ್ನೊಳಗಿನ ಹವಾಗುಣದ ಬಗೆಯಲ್ಲಿ ಮಗ್ನರಾಗಿ ತನ್ನನ್ನೇ ತಾ ಮರೆಯುವಂತಹ ಸ್ಥಿತಿಯೂ ಉಂಟು. ಇದೊಂದು ಘಟ್ಟ ಪಾರಾಗಿ ಮುನ್ನಡೆದರೆ ಹರೆಯ ಜಯಸಿದಂತೆಯೇ ಮುಂದಿನ ಭವಿಷ್ಯಕ್ಕೊಂದು ಹೊಸಭಾಷ್ಯ ಬರೆದಂತೆ.
ಯೌವನ ಇದೊಂದು ಬಗೆಯ ಸೌಂದರ್ಯಘಟ್ಟ, ಪಡ್ಡೆ ಹುಡುಗರ ಕಣ್ಣಿಗೆ ಮುಂಗುರಳ ತೀಡುತ್ತಾ ಮೋಡಿ ಮೋಡುವ ಯುವತಿಯರು, ಕುರುಚಲು ಗಡ್ಡದಿಂದಲೇ ಕಿರುನಗೆಯ ಬೀರಿ ಹುಡುಗಿಯರಿಗೆ ಬಲೆ ಬೀಸುವ ಯುವಕರು ಇದೊಂದು ವರ್ಗವಾದರೆ, ಸಂಸಾರದ ನೊಗ ಹೊರಲು ವ್ಯಾಸಂಗದ ಸರ್ಟಿಫಿಕೇಟ್ ಹಿಡಿದುಕೊಂಡು ಬೀದಿಬೀದಿ ಅಲೆಯುವ ಯುವಕರದ್ದು ಮತ್ತೂಂದು ವರ್ಗ. ‘ಬದುಕಿನ ಮಹಾತಿರುವು ಸಾಂಸಾರಿಕ ಜೀವನಾರಂಭೋತ್ಸವ’ ಇಲ್ಲಿ ಬೆಸೆದ ಬಂಧಗಳಿಗೆಲ್ಲ ತನ್ನ ಬದುಕಿನ ಅನುಭವವನ್ನು ಕಥೆಯಂತೆ ಬಣ್ಣಿಸುವ ಬಗೆಯಲ್ಲಿ ತಾನೇ ನಾಯಕ/ನಾಯಕಿ. ಇದೊಂದು ತಿರುವು ದಾಟಿದರೆ ಎಂಬಂತೆಯೇ ಶುರುವಾಯಿತು ಜೀವನ.
ಮದ್ಯವಯಸ್ಕ ಮಕ್ಕಳು ಮರಿ, ಹೆತ್ತವರ ಅನಾರೋಗ್ಯ ಬಾಡಿಗೆ, ಶುಲ್ಕ, ದಿನಸಿ ಚೀಟಿ ಹೀಗೆ ತಿಂಗಳು ಪೂರ್ತಿ ದುಡಿದದ್ದು ಒಂದೇ ದಿನಕ್ಕ/ವಾರಕ್ಕ? ಪ್ರಶ್ನಾತೀತವಾಗಿದೆ!
ಆಗಲೇ ನೆನಪಾಗುವುದು ಬಾಲ್ಯದಿಂದಿನ ಬದುಕಿನಾರಂಭದ ಅನುಭವದ ಕಥನ. ಹೆತ್ತವರ ಒದ್ದಾಟ, ತಮಗೆ ನೀಡುತ್ತಿದ್ದ ಮಾರ್ಗದರ್ಶನ, ಅವರ ಬದುಕಿನೊದ್ದಾಟ, ಹೀಗೆಲ್ಲ ಕಣ್ಮುಂದೆ ಹಾದು ಹೋಗುತ್ತಿದೆ ಅವರವರ ಅನುಭವದ ಪ್ರವಚನ. ಅದೆಷ್ಟು ಅಸಡ್ಡೆ ಮಾಡಿದ್ದೆವೋ? ಇದೀಗ ತಮ್ಮ ಮಕ್ಕಳ ಸರದಿಯಾಗಿದೆ. ಪೀಳಿಗೆಯಿಂದ-ಪೀಳಿಗೆಗೆ ಸರಪಳಿಯಂತೆ ಹೀಗೆ ಸಾಗುತ್ತಲೇ ಹೋಗುತ್ತದೆ ಎನಿಸುವುದುಂಟು ಈ ಅನುಭವ ಕಥನ. ಆದರೆ ಒಳರಿವಿನ ತಮ್ಮ ಬುದ್ದಿಗೆ ಒಂದಿಷ್ಟು ತಿಳುವಳಿಗೆ ಹೇಳಿದರೆ ಬದಲಾವಣೆಯೂ ಸಾಧ್ಯವಾಗುವುದು.
ವೃದ್ಧಾಪ್ಯ ಹಿರಿಯರ ಬದುಕಿನ ಹಾದಿ ಕಿರಿಯರ ಬದುಕಿಗೆ ಹಚ್ಚಿಟ್ಟ ಹಣತೆಯಂತೆ ಎಂಬುದು ಕೇವಲ ನುಡಿಗಟ್ಟಾಗಿದೆ. ಈಗ ತಮ್ಮದೇ ಹಾದಿಯಲ್ಲಿ
ತಾವು ಸಾಗುವಾಗ ಯಾರ ಹಣತೆ, ಮತ್ಯಾರ ಮಾರ್ಗದರ್ಶನ ಬೇಕು? ತಾನೇ ಸರಿ ಎಂಬುವ ಭ್ರಾಂತಿಯೊಂದು ಬೇರೂರಿರುವಾಗ. ಈ ಮೊದಲೇ ಹೇಳಿರುವೆಲ್ಲ!
ಇದೊಂದು ಬದುಕಿನ ಕೊನೆಕಾಲಘಟ್ಟ’ಬಿದ್ದು ಹೋಗುವ ಮರಕ್ಕೆ ಮಳೆಯ ಚಿಂತೆ ಏಕೆ’ ಎಂಬಂತೆ ಬದುಕಿನ ಎಲ್ಲ ತಿರುಳನ್ನು ಸ್ವಾಧಿಸಿ ಕೊನೆಗೆ ಒಣಕಲಾಗಿ ಮುದುರಿ ಮೂಲೆ ಹಿಡಿದಿರುವ ಕಾಲವು ಥೇಟ್ ಹಸುಳೆಯಂತೆಯೇ ಹೌದು. ಕೆಲವರಿಗೆ ಮರೆವು, ಮತಿಭ್ರಮಣೆಯಾದರೆ, ಕೆಲವರು ಹೆಚ್ಚು ಉತ್ಸಾಹಕರಾಗಿರುತ್ತಾರೆ… ಎಲ್ಲವೂ ಅವರ ಪರಿಸರದ ಹವಾಗುಣಕ್ಕೆ ತಕ್ಕುದಾಗಿ ರೂಪಿತಗೊಳ್ಳುವ ಅನುಭವದ ಬದುಕಿದು. ಇದನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದು ಅವರವರ ಭಾವಕ್ಕೆ ಬಿಟ್ಟದ್ದು. ಆದರೆ ಎಲ್ಲ ಕಾಲಘಟ್ಟವೂ ಸಹ್ಯವಾಗಬೇಕೆಂದರೆ ನಾವು ನಮ್ಮ ತಿಳುವಳಿಕೆಯ ಗುಣಮಟ್ಟವನ್ನು ಅಭಿವೃದ್ಧಿಗೊಳಿಸಿಕೊಳ್ಳಬೇಕು. ಎಲ್ಲ ವಯೋಮಾನದವರನ್ನು ಪ್ರೀತಿಸಬೇಕು, ಆತ್ಮೀಯತೆಯ ಭಾವೈಕ್ಯತೆಯಿಂದ ಆಲಂಗಿಸಬೇಕು. ಹಸುಳೆಯಿಂದ ವೃದ್ಧಾಪ್ಯದ ಕಾಲಘಟ್ಟವಿದೂ ಬಲು ಅದ್ಭುತ ಹಾಗೂ ನಿಸರ್ಗದ ಒಂದು ಭಾಗವಾದ ಮಾನವನಿಗಿದು ವರವಾಗಿದೆ.
-ದೀಪಿಕಾ ಬಾಬು ಮಾರಘಟ್ಟ, ಚಿತ್ರದುರ್ಗ