ಮಳೆಗಾಲ ಬಂತೆಂದರೆ ನಿಸರ್ಗದ ಸೊಬಗು ದುಪ್ಪಟ್ಟಾಗುತ್ತದೆ. ಹಚ್ಚ ಹಸುರು ಕಾನನ.ಎತ್ತ ನೋಡಿದರೂ ಹಸುರೊದ್ದ ಭೂಮಿ ತಾಯಿ ಕಂಗೊಳಿಸುತ್ತಾಳೆ. ಈ ಭೂರಮೆಗೆ ಅವಳ ಮೆರುಗನ್ನು ಹೆಚ್ಚಿಸಲು ಒಂದಿಷ್ಟು ವನಸುಮಗಳು ತಾ ಮುಂದು ತಾ ಮುಂದು ಎಂದು ತಮ್ಮ ಸೌಂದರ್ಯದ ಮೂಲಕ ಪೈಪೋಟಿ ನೀಡಿ ಸ್ಪರ್ಧೆಗಿಳಿಯುತ್ತವೆ.ಇದೇ ಅಲ್ಲವೇ ನಿಸರ್ಗದ ಬೆರುಗು!. ಅದರಲ್ಲಿ ಓರ್ವ ಮೋಹಕ ತಾರೆ ಹೆಂಗಳೆಯರಿಗೆ ಬಹು ಮುದ ನೀಡುತ್ತಾಳೆ..ಹೌದು ಅವಳೇ ಆರ್ಕಿಡ್ ಜಾತಿಗೆ ಸೇರಿದ ಸೀತಾಳೆ. ಮರಬಳ್ಳಿ, ಮರಬಾಳೆ, ಸೀತಾ ದಂಡೆ ಎಂಬೆಲ್ಲ ನಾಮಾಂಕಿತಗೊಂಡ ಕಾನನದ ಬೆಡಗಿ.
ಬಾಲ್ಯದಲ್ಲಿ ನಮ್ಮ ಮನೆಯ ಹಿಂದಿನ ಹಲಸಿನ ಮರದಲ್ಲಿ ಇವಳನ್ನು ನೋಡಿದ್ದೆ,ಚೆಲುವನ್ನು ಆಸ್ವಾದಿಸಿದ್ದೆ. ಅಪ್ಪನ ಹತ್ತಿರ ಕಾಡೀ ಬೇಡಿ ಹೂ ಕೀಳಿಸಿಕೊಂಡು ಮೂರು ದಿನದ ವರೆಗೆ ಮುಡಿಯುತ್ತಿದ್ದೆ.ನಂತರ ಈ ಹೂವಿನ ಪಕಳಗಳನ್ನು ಕಿತ್ತಾಗ ಮೂತಿ ತರಹದ್ದು ಸಿಗುತ್ತದೆ.ಎರಡು ಹೂವಿನ ಮೂತಿಗಳನ್ನು ಒಂದಕ್ಕೊಂದು ಸೇರಿಸಿ ಎತ್ತಿನ ಆಕೃತಿ ಮಾಡಿ ಸಂಭ್ರಮಿಸುತ್ತಿದ್ದೇವು. ಮತ್ತೆ ಈ ಬೆಡಗಿನ ಈಗ ನೋಡಿದರೆ ಬಾಲ್ಯವೇ ಕಣ್ಣ ಮುಂದೆ ಬರುತ್ತದೆ.
ಸಾಮಾನ್ಯವಾಗಿ ಎಲ್ಲರೂ ತಮ್ಮ ಬಾಲ್ಯದಲ್ಲಿ ಇವಳನ್ನು ಮುಡಿದಿರುತ್ತೀರಿ. ಈ ಹೂವನ್ನು ನೋಡಿದಾಕ್ಷಣ ವಾವ್ ಎಂದು ಉದ್ಗರಿಸದವರು ಪ್ರಕೃತಿ ಪ್ರಿಯರಾಗಲು ಸಾಧ್ಯವೇ ಇಲ್ಲ. ಅಷ್ಟು ನಾಜೂಕಾದ ವಿನ್ಯಾಸದ ಹೂ ಈ ಸೀತಾಳೆ. ಪ್ರಕೃತಿ ಈ ಹೂವನ್ನು ಸೃಷ್ಟಿ ಮಾಡುವಾಗ ಸ್ವಲ್ಪ ಜಾಸ್ತಿಯೇ ಸಮಯ ತೆಗೆದುಕೊಂಡಿತೇನೋ ಅನಿಸುತ್ತದೆ. ಬಣ್ಣದಲ್ಲೂ ಸಹ ಹೆಂಗಳೆಯರ ಬಹು ಪ್ರೀತಿಯ ತಿಳಿ ಗುಲಾಬಿ ವರ್ಣ.
ಬಳುಕುವ ಬಳ್ಳಿ ಈ ಸೀತಾಳೆ ಮಳೆಯ ನೀರಿನ ಸಿಂಚನವಾಗುತ್ತಿದ್ದಂತೆ ತನ್ನ ಇರುವಿಕೆಯನ್ನು ತೋರಿಸುತ್ತಾಳೆ. ಸಾಲದೆನಿಸಿದರೆ ತನ್ನ ಸಖಿಯರನ್ನೆಲ್ಲಾ ಒಗ್ಗೂಡಿಸಿಕೊಂಡು ವೈಯ್ಯಾರ ಬೀರುತ್ತಾಳೆ. ಸಾಮಾನ್ಯವಾಗಿ ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಸಿಕೊಂಡರೂ ಈಕೆ ಮುಂಗಾರಿನ ಬೆಡಗಿ.
ಮುಂಗಾರಿನ ಆರಂಭದಲ್ಲಿಯೇ ಮರಗಳ ಮೇಲೆ ಕಣ್ಣು ಹಾಯಿಸಿದರೆ ನಗು ನಗುತ್ತಾ ಕುಳಿತಿರುವ ಈಕೆ ಅಲ್ಲಿಂದಲೇ ಹಾಯ್ ಎಂದು ಕಣ್ಣು ಮಿಟುಕಿಸುತ್ತಾಳೆ..ಈ ಸೀತಾಳೆ ಸಸ್ಯದ ಕಾಂಡ ಮತ್ತು ಎಲೆ ಮೇಲ್ನೋಟಕ್ಕೆ ಒಂದೇ ತರಹ ಎಲೆಯಂತೆಯೇ ಕಾಣಿಸುತ್ತದೆ.ಮರದ ಕಾಂಡಕ್ಕೆ ಬೇರುಗಳಿಂದ ಕಚ್ಚಿಕೊಂಡು ನಿಂತು ತೊಗಟೆಯನ್ನು ತನ್ನ ಬೆಳವಣಿಗೆಗೆ ಆಸರೆಯಾಗಿ ಬಳಸಿಕೊಂಡು ಬೆಳೆಯುವ ಪರಾವಲಂಬಿ ಈಕೆ..
ಈ ಸೀತಾಳೆಯ ದಂಡೆಗಳು ಗೊಂಚಲು ಗೊಂಚಲಾಗಿ ಗಿಡಕ್ಕೆ ಇಳಿಮುಖವಾಗಿ ಜೋತು ಬೀಳುತ್ತವೆ.ಒಂದೊಂದು ದಂಡೆಯಲ್ಲಿ ನೂರಾರು ಹೂವುಗಳು ಮುತ್ತು ಪೋಣಿಸಿದಂತೆ ನಿಂತು ಸೋಜಿಗವನ್ನೇ ಸೃಷ್ಟಿಸುತ್ತವೆ.ಇವುಗಳಲ್ಲಿ ಎರಡು ಜಾತಿಯದನ್ನು ನಾವು ಕಾಣುತ್ತೇವೆ. ಒಂದರಲ್ಲಿ ಹೂ ಒತ್ತೊತ್ತಾಗಿ ಪೋಣಿಸಲ್ಪಟ್ಟರೆ, ಇನ್ನೊಂದರಲ್ಲಿ ದೂರ ದೂರ ಣಿಸಲ್ಪಟ್ಟಂತೆ ಇರುತ್ತದೆ.ಇದರ ಮೂಲಕ ಗಂಡು ಹೂ ಮತ್ತು ಹೆಣ್ಣು ಹೂ ಎಂದೂ ವಿಂಗಡಿಸುತ್ತಾರೆ.
ಈ ಕಾನನದ ಬೆಡಗಿಗೆ ಸೀತಾಳೆ ಎಂಬ ಹೆಸರು ಬಂದಿರುವುದರ ಬಗ್ಗೆ ಕಥೆಯೂ ಇದೆ. ರಾಮಾಯಣದ ಕಾಲದಲ್ಲಿ ಸೀತೆ ಮತ್ತು ರಾಮ ವನದಲ್ಲಿ ಸಂಚಾರ ಮಾಡುತ್ತಿರುವಾಗ ಸೀತೆಗೆ ಈ ಹೂವು ಆಕರ್ಷಿಸಿತಂತೆ.ಮಡದಿಯ ಮನದ ಬಯಕೆ ಈಡೇರಿಸಲು ರಾಮ ಆ ಹೂವನ್ನು ತಂದು ಅವಳ ಮುಡಿಗೇರಿಸಿದ್ದ. ಹಾಗಾಗಿ ಸೀತೆಯ ಮಡಿಗೇರಿದ ವನಸುಮ ಸೀತಾಳೆಯಾಗಿಯೂ, ಸೀತಾದಂಡೆಯಾಗಿಯೂ ಕಥೆಯಾದಳು.ಈಗಲೂ ಈ ಹೂವನ್ನು ಮುಡಿಯಲು ಹೆಂಗಳೆಯರು ಬಳಸದೇ ಇರಲು ಕಾರಣವೂ ಸಹ ಸೀತೆಯಂತೆ.. ಸೀತೆ ಈ ಹೂವನ್ನು ಮುಡಿದ ಕಾರಣ ಸಾಕಷ್ಟು ಕಷ್ಟಗಳಿಗೆ ಒಳಗಾದಳು ಎಂಬುದು ಜನರ ಅಂಬೋಣ.
ಅದೇನೇ ಇರಲಿ.ಸಸ್ಯ ವಿಜ್ಞಾನದ ಪ್ರಕಾರ ವನಸುಮವಾಗಿರುವ ಈಕೆಯನ್ನು ಇಂದು ಮನೆಯಂಗಳದ ಹೂವಾಗಿಸುವ ಪ್ರಯತ್ನಗಳು ನಡೆಯುತ್ತಿವೆ.ಕಾರಣ ಅವಳ ಚೆಲುವು. ಪರಾವಲಂಬಿ ಆದರೂ ಅಲ್ಪಾಯುಷಿಯಾದರೂ ಇರುವಷ್ಟು ದಿನ ನೋಡುಗರಿಗೆ ಸಂತೋಷವನ್ನು ನೀಡುವ ಈಕೆ ಮನೆಯಂಗಳಕ್ಕೆ ಬರುವ ಅನಿವಾರ್ಯತೆ ಕೂಡ ಇದೆ.ಇಂದಿನ ಮಕ್ಕಳಿಗೆ ಆರ್ಕಿಡ್ ಜಾತಿಯ ಸಸ್ಯಗಳ ವಿಶೇಷತೆ, ಅವುಗಳು ಬೆಳೆಯುವ ಪರಿ ತಿಳಿಸುವುದು ಅತೀ ಅಗತ್ಯ. ಹಾಗಾಗಿ ಸುಲಭವಾಗಿ ಈ ಗಿಡವನ್ನು ಬೇರು ಸಮೇತ ಕಿತ್ತು ತಂದು ತೆಂಗಿನ ಕಾಯಿಯ ಸಿಪ್ಪೆಯ ನಡುವೆ ಇಟ್ಟು ನೇತುಹಾಕಿ ಶಾಲೆ ಅಥವಾ
ಮನೆಯಂಗಳದಲ್ಲಿ ಬೆಳೆಸಬಹುದು.ಇಲ್ಲವೇ ಸಮೀಪದ ಮರದಲ್ಲಿಟ್ಟು ಸಹ ಬೆಳೆಸಬಹುದಾಗಿದೆ. ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಈ ಸೀತಾಳೆ ಕಾನನದ ಬೆಡಗಿ ಮುಂಗಾರಿನಲ್ಲಿ ತನ್ನದೇ ಹಂಗಾಮ ಎಂದು ಗಮನಸೆಳೆಯುತ್ತಿದ್ದಾಳೆ.
*ರೇಖಾ ಪ್ರಭಾಕರ್, ಶಂಕರನಾರಾಯಣ