ಸುಮಾರು 10-12 ವರ್ಷಗಳ ಹಿಂದಿನ ನೆನಪು ಇದು. ನಾನು ಆಗಲೇ ಎಸೆಸೆಲ್ಸಿ ಮುಗಿಸಿ ಹಾವೇರಿಯ ಹೊಸಮಠ ಕಾಲೇಜಿನ ಕಲಾ ವಿಭಾಗದಲ್ಲಿ ಪಿಯುಸಿಗೆ ಸೇರಿಕೊಂಡಿದ್ದೆ. ಬೆಳಗಿನ ಕಾಲೇಜಾದ್ದರಿಂದ 22 ಕಿ.ಮೀ. ದೂರದ ಹಳ್ಳಿಯಿಂದ ಎದ್ದುಬಿದ್ದು ಬರಬೇಕಾಗಿತ್ತು.
ಎಂದೂ ಸರಿಯಾದ ಸಮಯಕ್ಕೆ ತಲುಪದ ಬಸ್ ಅಂದೂ ಕೂಡ ತಡವಾಗಿಯೇ ನಮ್ಮೂರಿನಿಂದ ಹೊರಟಿತ್ತು. ಅಂತೂ ಇಂತೂ ಹಾವೇರಿಯನ್ನು ಬಹು ತಡವಾಗಿಯೇ ತಲುಪಿದ್ದ ಬಸ್ಸನ್ನು ಶಪಿಸುತ್ತ ದೂರದ ಬಸ್ ಸ್ಟಾಂಡಿಗೆ ಹೋಗದೇ ರೈಲ್ವೇ ಸ್ಟೇಶನ್‌ನ ಹತ್ತಿರವೇ ಇಳಿದುಕೊಂಡೆ. ಅಂದರೆ ಇಲ್ಲಿಂದ ಕಾಲೇಜಿಗೆ ಬೇಗ ಸೇರಬಹುದೆಂಬ ಯೋಚನೆ ನನ್ನದು. ಅಂದು ಪರೀಕ್ಷೆ ಇದೆ ಎಂಬ ಕಾರಣಕ್ಕೆ ದಾರಿ ಇಲ್ಲದ ದಾರಿಯಿಂದ ಏನೊಂದು ಯೋಚಿಸದೆ ಕಿವುಡನಂತೆ ರೈಲು ಹಳಿಯನ್ನು ದಾಟುವ ಧಾವಂತದಲ್ಲಿದ್ದೆ. ಇನ್ನೇನು ಕೆಲವೇ ಸೆಕೆಂಡುಗಳಲ್ಲಿ ನನ್ನ ಭುಜದೆತ್ತರದಷ್ಟಿದ್ದ ಪ್ಲಾಟ್ ಫಾರ್ಮ್ ಮೇಲೆ ಕೈಯಿಟ್ಟು ಹತ್ತಬೇಕೆನ್ನುವಷ್ಟರಲ್ಲಿ ಮೃದುವಾದ ಕೈಯೊಂದು ನನ್ನ ಬಲಗೈಯನ್ನು ಹಿಡಿದು ಭರದಿಂದ ಮೇಲೆಳೆದುಕೊಂಡಿತು. ಅಷ್ಟೇ… ನನ್ನ ಹಿಂದೇನೇ “ಧಡಕ್… ಧಡಕ್… ಎಂದು ದೊಡ್ಡದಾಗಿ ಸದ್ದು ಮಾಡುತ್ತ ಕ್ಷಣದಲ್ಲೇ ಹರಿದು ಹೋಗಿದ್ದು ಆ ಉದ್ದನೆಯ ರೈಲು. ಆ ಸಪ್ಪಳದಲ್ಲೇ ನನ್ನ ಧ್ವನಿಯೂ ಕೂಡ ಅವತ್ತೇ ಮಾಯವಾಗುತ್ತಿತ್ತೋ ಏನೋ…!
ಪರೀಕ್ಷೆಯ ಹೋಗುವ ಅವಸರದಲ್ಲಿ ಗೂಡ್ಸ್ ರೈಲು ಬರುವ ಸಿಗ್ನಲ್ ಲೈಟನ್ನೂ ಗಮನಿಸದೇ ಕಣ್ಣಿದ್ದೂ ಕುರುಡನಾಗಿ, ಕಿವಿಯಿದ್ದೂ ಕಿವುಡನಾಗಿ ರೈಲಿನ ಕೇಕೆಯನ್ನು ಲೆಕ್ಕಿಸದೆ ಸಾಗಿದ್ದ ನನ್ನನ್ನು ಆ ವಯಸ್ಸಾದ ವ್ಯಕ್ತಿ (ಅಜ್ಜನಿರಬೇಕು) ಆತಂಕದಿಂದಲೆ ನನ್ನನ್ನು ಮೇಲಕ್ಕೆಳೆದುಕೊಂಡು “ಲೇ ತಮ್ಮಾ… ಸಲುಪದ್ರಾಗ ಪಾರಾದಿ ನೋಡಲೇ. ಕಣ್ಣು-ಕಿವಿ ಹೋಗೇವನು?’ ಅಂದ್ರು. “ಇಲ್ರಿ ಎಕ್ಸಾಮಿಗ್ಹೋಗೋ ಅವಸರದಾಗ…’ ಅನ್ಕೋತ ಅಲ್ಲಿಂದ ದಡಬಡಿಸಿ ಕಾಲ್ಕಿತ್ತೆ.
ಟೆಸ್ಟ್ ಮುಗಿದು ಹೊಟ್ಟೆ ತಾಳ ಹಾಕಿದಾಗಲೇ ಬೆಳಗಿನ ಘಟನೆ ನೆನಪಾಗಿದ್ದು. ಒಂದರೆಗಳಿಗೆ ಕೂತಲ್ಲಿಂದ ಏಳದೇ ಇದ್ದಾಗ ಸ್ನೇಹಿತ ಬಂದು ಊಟಕ್ಕೆ ಕರೆದುಕೊಂಡು ಹೋದ. ಅವನಿಗೆಲ್ಲವನ್ನು ಹೇಳಿ ನಿರಾಳವಾಗಬೇಕೆಂದೆ ಆಗಲೇ ಇಲ್ಲ. ಅಂದು ನನ್ನ ಕೈಹಿಡಿದು ಮೇಲೆತ್ತಿಕೊಂಡ ಆ ಮಹಾನುಭಾವ ಯಾರು? ಆತ ಹೇಗಿದ್ದ? ಅನ್ನೋ ಚಿತ್ರಣ ಕೂಡ ನನ್ನಲ್ಲಿ ಇಲ್ಲ. ದೇವರೆಂದರೆ ಅವನೇ ಇರಬೇಕು. ಅವನ ಆ ಮೃದುವಾದ ಸ್ಪರ್ಷ, ಕಾಳಜಿಯ ಮಾತು ಇವತ್ತಿಗೂ ನನ್ನ ಮನಃಪಟದಲ್ಲಿ ಅಚ್ಚಾಗಿದೆ. ಆ ವ್ಯಕ್ತಿ ನನ್ನ ಕೈಹಿಡಿದು ಮೇಲೆತ್ತಿಕೊಳ್ಳದಿದ್ದರೆ ನಾನಂದೇ ರೈಲಿನಡಿಯಲ್ಲಿ ಸಿಕ್ಕು ಮರೆತುಹೋಗಿರುತ್ತಿದ್ದೆ. ಆ ಗಳಿಗೆಯನ್ನು ನೆನಪಿಸಿಕೊಂಡರೆ ಈಗಲೂ ಮೈ ಬೆವರುತ್ತದೆ. ನನ್ನನ್ನು ಸಾವಿನ ಸುಳಿ(ಹಳಿ)ಯಿಂದ ಪಾರುಮಾಡಿ ಜೀವ ಬದುಕಿಸಿದ ಹಿರಿಜೀವಕ್ಕೆ ಅನಂತಕೋಟಿ ನಮಸ್ಕಾರಗಳು.
-ಡಾ| ರಾಜಶೇಖರ ಚಂ. ಡೊಂಬರಮತ್ತೂರ
ಸಹಾಯಕ ಪ್ರಾಧ್ಯಾಪಕರು,
ಕರ್ನಾಟಕ ಜಾನಪದ ವಿ.ವಿ., ಹಾವೇರಿ