ಆಸೆ ಯಾರಿಗೆ ಇರುವುದಿಲ್ಲ ಹೇಳಿ? ಅಂಬೆಗಾಲು ಇಡುವ ಮಗುವಿ ನಿಂದ ಹಿಡಿದು ಇಹಲೋಕ ತ್ಯಜಿಸುವ ವೃದ್ಧನ ವರೆಗೂ ಅದೆಷ್ಟೋ ಆಸೆಗಳು ಇರುತ್ತವೆ. ಪುಟ್ಟ ಕಂದಮ್ಮನಿಗೆ ಜಾತ್ರೆಯಲ್ಲಿ ಕಂಡ ಬಣ್ಣ ಬಣ್ಣದ ಆಟಿಕೆಗಳ ಮೇಲೆ ಆಸೆಯಾದರೆ, ತಾಯಿಗೆ ತನ್ನ ಮಗು ಉತ್ತಮ ಬದುಕನ್ನು ಕಟ್ಟಿ ಬೆಳೆಯಬೇಕೆಂಬ ಆಸೆ. ವಿದ್ಯಾರ್ಥಿಗೆ ಒಳ್ಳೆಯ ಅಂಕ ಗಳಿಸುವ ಆಸೆಯಾದರೆ, ಶಿಕ್ಷಕನಿಗೆ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಸಾಧನೆಯನ್ನು ಮಾಡಬೇಕೆಂಬ ಆಸೆ.
ತರುಣಿಯರಿಗೆ ಚಿನ್ನ ಕೊಂಡು ಕೊಳ್ಳಬೇಕೆಂಬ ಆಸೆಯಾದರೆ, ಚಿನ್ನ ವ್ಯಾಪಾರಸ್ಥನಿಗೆ ಒಳ್ಳೆಯ ವ್ಯಾಪಾರವಾಗಲೆಂಬ ಆಸೆ. ಗರ್ಭಿಣಿಗೆ ಆರೋಗ್ಯವಂತ ಮಗು ಜನಿಸಲಿ ಎಂಬ ಆಸೆಯಾದರೆ, ಯಮನ ಹಾದಿಯನ್ನು ಕಾಯುತ್ತಿರುವ ವೃದ್ಧನಿಗೆ ಸುಖ ಮರಣ ಹೊಂದಿ ಸ್ವರ್ಗ ಸೇರಬೇಕೆಂಬ ಆಸೆ.
ಹೀಗೆ ನಾವು ಹುಟ್ಟಿನಿಂದ ಸಾವು ಕಾಣುವವರೆಗೂ ಸಾವಿರಾರು ಆಸೆಗಳನ್ನು ಹೊತ್ತು ಜೀವನ ನಡೆಸುತ್ತಿರುತ್ತೇವೆ. “ಕನಸು ಕಾಣಬೇಕು” ಎಂಬ ಅಬ್ದುಲ್ ಕಲಾಂ ಅವರ ಒಂದು ಸಂದೇಶ ಅದೆಷ್ಟೋ ಯುವಜನರಿಗೆ ಪ್ರೇರಣೆಯಾಗಿ ಕನಸನ್ನು ನನಸಾಗಿಸುವತ್ತ ಹೆಜ್ಜೆ ಹಾಕಿದ್ದಾರೆ. ಒಮ್ಮೆ ಒಬ್ಬ ವಿದ್ಯಾರ್ಥಿಯು ಸಭಿಕರನ್ನು ಉದ್ದೇಶಿಸಿ ಮಾತನಾಡುವಾಗ ಆತ “ನನಗೆ ಮುಂದೊಂದು ದಿನ ಆಕಾಶದಲ್ಲಿ ಹಾರಾಡಬೇಕೆಂಬ (ಪೈಲೆಟ್) ಆಸೆ ಇದೆ” ಎಂದು ಹೇಳುತ್ತಾನೆ. ಇನ್ನೊಬ್ಬ ವಿದ್ಯಾರ್ಥಿ ಅದೇ ಸಭೆಯಲ್ಲಿ ಮಾತನಾಡುವಾಗ “ನನಗೆ ಉದ್ಯಮಿಯಾಗಬೇಕೆಂಬ ಕನಸು ಇದೆ” ಎಂದು ಹೇಳುತ್ತಾನೆ. ಇಬ್ಬರೂ ಕೂಡ ತನೇನಾಗಬೇಕು ಎಂಬುದನ್ನು ಎರಡು ವಿಭಿನ್ನ ಪದಗಳನ್ನು ಬಳಸಿ ಹೇಳಿದ್ದಾರೆ. ಹಾಗಾದರೆ ಕನಸು ಕೂಡ ಆಸೆಯ ಮತ್ತೂಂದು ರೂಪ ಎಂದು ಹೇಳಬಹುದಲ್ಲವೇ? ಎಲ್ಲ ಕನಸುಗಳನ್ನು ಆಸೆಗಳು ಎಂದು ಹೇಳಬಹುದು, ಆದರೆ ಎಲ್ಲ ಆಸೆಗಳನ್ನು ಕನಸುಗಳು ಎಂದು ಹೇಳಲಾಗುವುದಿಲ್ಲ ಎಂಬುದು ನನ್ನ ಅಭಿಪ್ರಾಯ.
ಆಸೆಗಳಿಲ್ಲದ ಮನುಷ್ಯನ ಬದುಕು ಬಿಡಿಗಾಸಿಗೂ ಬೆಲೆ ಬಾಳದು. ಜೀವ ದೇಹಕ್ಕೆ ಚೈತನ್ಯ ನೀಡಿದರೆ, ಆಸೆ ಜೀವನಕ್ಕೆ ಚೈತನ್ಯ ನೀಡುತ್ತದೆ. ನಮ್ಮೆಲ್ಲ ಆಸೆಗಳಿಗೆ ಕನಸಿನ ಗೂಡು ಕಟ್ಟಿ ಜೀವನದ ಹಾದಿಯಲ್ಲಿ ಎಚ್ಚರಿಕೆಯಿಂದ ಸಾಗುತ್ತೇವೆ. ಆ ಕನಸನ್ನು ನನಸಾಗಿಸಲು ನಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಪಟ್ಟು, ಶ್ರದ್ಧೆಯಿಂದ, ದೃಢತೆ, ಬದ್ಧತೆ, ಸಮಯ ಪಾಲನೆ ಇವುಗಳನ್ನು ಪಾಲಿಸಬೇಕು. ನಾವು ಜೀವನದಲ್ಲಿ ತಿರುಕನಂತೆ ಕನಸು ಮಾತ್ರ ಕಾಣದೆ ಕನಸಿನ ಆಸೆಯನ್ನು ಸಾಕಾರಗೊಳಿಸಲು ಪ್ರಯತ್ನಿಸುವುದು ಉತ್ತಮವಾದ ನಡೆ ಎಂಬುದು ನನ್ನ ಅನಿಸಿಕೆ.
- ಮಧುರಾ
ಕಾಂಚೋಡು