ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವಂತಹ ಅನೇಕ ಜಾತ್ರೆಗಳಲ್ಲಿ ವಿಶೇಷ ಸ್ಥಾನ ಪಡೆದ ಜಾತ್ರೆ ಅಂದರೆ ಅದು ಅನಂತಾಡಿ ಮೆಚ್ಚಿ ಜಾತ್ರೆ.
ಅನಂತಾಡಿ ಎಂಬ ಊರು ಇರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ. 7 ಮಂದಿ ಅಕ್ಕ-ತಂಗಿ ಉಳ್ಳಾಲ್ತಿ ಅಮ್ಮನವರಲ್ಲಿ ಅನಂತಾಡಿಯ ಉಳ್ಳಾಲ್ತಿ ಅಮ್ಮನವರು ಕೂಡ ಒಬ್ಬರಾಗಿದ್ದಾರೆ. ಈ ಜಾತ್ರೆಯು ಫೆಬ್ರವರಿ – ಮಾರ್ಚ್ ತಿಂಗಳ ಮಾಯಿಯ ಹುಣ್ಣಿಮೆ ದಿನದಂದು ನಡೆಯುತ್ತದೆ. ಅನಂತಾಡಿ ಜಾತ್ರೆ ಬಂತು ಅಂದರೆ ಈ ಊರಿನ ಜನರಿಗೆ ಹಬ್ಬದ ವಾತಾವರಣವಿದ್ದಂತೆ, ಈ ಜಾತ್ರೆಗೆ ಹೊರ ರಾಜ್ಯ ಜಿಲ್ಲೆಯಿಂದಲೂ ಜನ ಬರುತ್ತಾರೆ, ಅನಂತಾಡಿಯ ಬಂಟ್ರಿಂಜ ಎಂಬಲ್ಲಿ ಈ ಜಾತ್ರೆ ನಡೆಯುತ್ತದೆ. ಇದು ಹೆಚ್ಚು ಜನ ಸೇರಿ ಆಚರಿಸುವಂತಹ ಜಾತ್ರೆಯಾಗಿದೆ. ಈ ಕ್ಷೇತ್ರಕ್ಕೆ ಜನರು ಹರಕೆ ಹಾಗೂ ಹರಕೆಯ ರೂಪದಲ್ಲಿ ವಸ್ತುಗಳನ್ನು ಕೊಡುತ್ತಾರೆ.
ಸಾಮಾನ್ಯವಾಗಿ ನಾವು ದೇವಸ್ಥಾನದಲ್ಲಿ ಒಂದು ಮೊಗ(ಮೂರ್ತಿ) ಇರುವ ದೇವರನ್ನು ನೋಡಿರುತ್ತೇವೆ. ಆದರೆ ಅನಂತಾಡಿ ಉಳ್ಳಾಲ್ತಿ ಅಮ್ಮನ ಮೆಚ್ಚಿ ಜಾತ್ರೆಯ ವಿಶೇಷ ಏನೆಂದರೆ ಇಲ್ಲಿ ಉಳ್ಳಾಲ್ತಿ ಅಮ್ಮನಿಗೆ 3 ಮೊಗಗಳಿವೆ ಚಿನ್ನ, ಬೆಳ್ಳಿ, ಚಂದನದ ಮೊಗಗಳಿವೆ. ಚಂದನದ ಮೊಗವನ್ನು ಸಂಪೂರ್ಣ ರಕ್ತ ಚಂದನದಿಂದ ಮಾಡಲಾಗಿದೆ.
ಬೆಳ್ಳಿಯ ಮೊಗದ ದೇವಿಯ ದರ್ಶನದ ಬಲಿಯನ್ನು ಮಹಿಳೆಯರು ನೋಡಬಾರದೆಂದು ಹಿಂದಿನಿಂದಲೂ ಬಂದ ಸಂಪ್ರದಾಯವಿದೆ. ಹಿಂದೆ ಮಹಿಳೆ ಒಬ್ಬರು ಬೆಳ್ಳಿ ಮೊಗದ ಬಲಿ ನಡೆಯುವಾಗ ಕದ್ದು ನೋಡಿದ್ದರು. ಆಗ ಅವರು ಆ ಸ್ಥಳದಲ್ಲಿಯೇ ಕಲ್ಲಾಗಿದ್ದಾರೆ ಎಂಬ ಕಥೆಯೂ ಇದೆ. ಈ ಎಲ್ಲ ಮೊಗವನ್ನು ಜಾತ್ರೆಯ ದಿನ ಆರಾಧಿಸಲಾಗುತ್ತದೆ ಮತ್ತು ತ್ರಿಮೂರ್ತಿಗಳನ್ನು ಇಟ್ಟುಕೊಂಡು ಬಲಿ ಹೊರಡಲಾಗುತದೆ. ಉಳ್ಳಾಲ್ತಿ ಅಮ್ಮನ ಜಾತ್ರೆಯ ಬಳಿಕ ಇಲ್ಲಿ ಪರಿವಾರದ ದೈವಗಳಿಗೆ ನೇಮ ನಡೆಯುತ್ತದೆ. ಇದನ್ನು ನೋಡುವುದು ಕಣ್ಣಿಗೆ ಹಬ್ಬದಂತಿರುವುದು.
ಈ ಕ್ಷೇತ್ರದ ಇನ್ನೊಂದು ವಿಶೇಷ ಏನೆಂದರೆ ಅದು ಧರ್ಮ ಮೆಚ್ಚಿ ಜಾತ್ರೆ . ಇದು 12 ವರ್ಷಗಳಿಗೊಮ್ಮೆ ನಡೆಯುವ ಧರ್ಮ ಮೆಚ್ಚಿ ಜಾತ್ರೆಯಾಗಿದೆ. ಇದು ಅನಂತಾಡಿಯ ಚಿತ್ತರಿಗೆ ಎಂಬಲ್ಲಿ ನಡೆಯುತ್ತದೆ. ಈ ಧರ್ಮ ಮೆಚ್ಚಿ ನಡೆಯುವಾಗ ಇಲ್ಲಿ ಸಂಪೂರ್ಣ ಉಚಿತವಾಗಿರುತ್ತದೆ ಯಾವುದೇ ಹಣದ ವ್ಯಾಪಾರ ಇಲ್ಲಿ ನಡೆಯುದಿಲ್ಲ. 12 ವರ್ಷ ಕಾದು ಕುಳಿತು ಈ ಧರ್ಮ ಮೆಚ್ಚಿ ಜಾತ್ರೆ ನೋಡುವುದೇ ಒಂದು ಸಂತೋಷದ ವಿಷಯವಾಗಿದೆ. ಈ ಸುಂದರ ಭಕ್ತಿಯ ಜಾತ್ರೆಯನ್ನು ನೋಡುವುದೇ ಚೆಂದ.
-ಮಲ್ಲಿಕಾ ಜೆ.ಬಿ.
ಅನಂತಾಡಿ