“ಬದುಕು ನಿತ್ಯ ಹೋರಾಟವಾಗಿದೆ, ಆದರೆ, ಯಾರ ವಿರುದ್ಧ ಈ ಹೋರಾಟ? ನನ್ನನ್ನು ಬರಪೂರ ದ್ವೇಷಿಸುವ ಶತ್ರುಗಳ ವಿರುದ್ಧವೇ? ಉಹೂಂ, ಮತ್ತೆ ಪ್ರೀತಿಸುವವರ ವಿರುದ್ಧವೇ? ಆತ್ಮೀಯರ ವಿರುದ್ಧವೇ? ಅಥವಾ ಬದುಕು ಸೃಷ್ಟಿಸಿದ ಭಗವಂತನ ವಿರುದ್ಧವಿರಬಹುದೇ? ಉಹೂಂ ಅದೂ ಅಲ್ಲ, ಮತ್ತೆ ಯಾರ ವಿರುದ್ಧ ಈ ಹೋರಾಟ? ಪುನಃ ಅದೇ ಪ್ರಶ್ನೆ, ಕೇವಲ ಪ್ರಶ್ನೆಯಲ್ಲ ಇದು ದ್ವಂದ್ವ, ಯಥಾವತ್ ಅದೇ ಮಾಯೆ!’
ನನ್ನ ವಿರುದ್ಧ ನಾನೇ ಹೋರಾಡುತ್ತೇನೆ, ನನ್ನ ತತ್ವಗಳನ್ನು ಪುನಃ ನಾನೇ ಪ್ರಶ್ನಿಸಿಕೊಳ್ಳುತ್ತೇನೆ. ಚಂಚಲವಾಗುವ ಮನಸ್ಸು ದೀರ್ಘಕಾಲದ ನಿರ್ದಿಷ್ಟ ಉತ್ತರ ನೀಡುವುದೇ ಇಲ್ಲ. ಹೌದು, ಈ ನಿತ್ಯ ಹೋರಾಟದ ಫಲವಾದರೂ ಏನಿರಬೇಕು? ಯಾವ ಅಪೇಕ್ಷೆಯನಿಟ್ಟುಕೊಂಡು ಈ ರಣ ಕಾಳಗಕ್ಕೆ ಇಳಿದಿದ್ದೇನೆ? ಇಂತಹ ದೊಂದು ಯೋಚನೆಯಾದರೂ ಆದ್ಯಾವಾಗ ಮೊಳಕೆಯೊಡೆಯಿತು ಎಂದು ಊಹಿಸಿಕೊಂಡಾಗ ನೆನಪಾಗುವುದೇ ಬಾಲ್ಯ!
ಓಡು, ನಿಲ್ಲಬೇಡ, ನಿನ್ನ ದಾರಿ ಸಿಗುವವರೆಗೂ, ಅದೂ ನಿನಗೆ ಸರಿಯಾದ ದಾರಿಯೆಂದು ನೀನು ಒಪ್ಪುವ ವರೆಗೂ ಎಲ್ಲಿಯೂ ನಿಲ್ಲದೇ ನಿರಂತರ ಓಡು, ನಿನ್ನ ಪ್ರತಿಸ್ಪರ್ಧಿ ನೀನೇ ಹೊರತು ಮತ್ಯಾರಿಲ್ಲ, ಮನಸ್ಸು ಆಲಸ್ಯ ಬಯಸುತ್ತದೆ, ನೆತ್ತಿ ಕಾವೇರುತ್ತದೆ, ಕಾಲು ನಿಲ್ಲು ಎನ್ನುತ್ತದೆ, ದೇಹವಾ ದರೂ ವಿಶ್ರಾಂತಿ ಬೇಕು ಎನ್ನುತ್ತದೆ, ಇಂತಿಷ್ಟು ನಿಜವಾದ ನಿನ್ನ ಶತ್ರುಗಳು. ನೀನು ಹೋರಾಡಬೇಕಾದುದೇ ಇವುಗಳ ವಿರುದ್ಧ, ಇವು ನಿನ್ನ ಕೊನೆಗಾ ಲದವರೆಗೂ ನಕ್ಷತ್ರಿಕನಂತೆ ಬೆಂಬಿಡದೇ ಕಾಡುವ ಶನಿಗಳು, ಹೋರಾಡು,ಓಡು, ಓಡುತ್ತಲೇ ಇರು. ಇಂತಹ ನುಡಿಗಳ ತಲೆಗೆ ತುಂಬಿ, ನನ್ನ ಪ್ರತಿಸ್ಪರ್ಧಿ ನಾನೇ ಎಂಬ ಅರಿವು ಮೂಡಿಸಿದ್ದು ಅವಳೇ! ಹೌದು, ಅವಳು ಹೇಳಿದ್ದು ನಿಜವಾಗಿತ್ತು, ದಿನಗಳು, ವರ್ಷಗಳು ಕಳೆದಂತೆ ಎಲ್ಲವೂ ಅರ್ಥವಾಗುತ್ತ ಹೋದಾಗ ವಾಸ್ತವದ ನೈಜ ಹೋರಾಟ, ತುತ್ತು ಅನ್ನಕ್ಕೂ ಪರದಾಟ, ಆಗಲೇ ಅವಳು ನೆನಪಾಗಿದ್ದು ಅಮ್ಮಾ!
ಬದುಕು ನಿಂತ ನೀರಲ್ಲ, ಹರಿಯಬೇಕು. ಪ್ರತಿ ಬಾರಿಯೂ ಸೋಲಾಗಬಹುದು, ಸೋಲೆ ಗೆಲುವಿನ ಸೂತ್ರ, ಒಮ್ಮೆ ಗೆದ್ದು ಬಿಟ್ಟರೆ ಏನುಂಟು? ಸೋಲು, ಗೆಲುವ ಬಿಟ್ಟು ಕೊಟ್ಟು ಸೋಲು, ಗೆಲುವು ಹಣವನ್ನು, ಶ್ರೀಮಂತಿಕೆಯ ಜತೆಗೆ ಅಹಂಕಾರದ ದರ್ಪವನ್ನು ಕೊಂಡು ಬರುತ್ತದೆ. ಸೋಲು ಅವಮಾನದ ಜತೆಗೆ ಸ್ವಾಭಿಮಾನದ ಪಾಠವಾಗುತ್ತದೆ. ಬದುಕಿನ ಪಾಠವಿದು ಜೀವಮಾನಕ್ಕೆ ಆಧಾರವೆಂಬ ಒಂದಿಷ್ಟು ವಿಚಾರಗಳನ್ನು ಪ್ರವಚನದಂತೆ ಹೇಳುತಿದ್ದಳು. ಒಮ್ಮೊಮ್ಮೆ ತೂಗಡಿಸುತ್ತಾ, ಒಮ್ಮೊಮ್ಮೆ ಗಂಭೀರವಾಗಿ ಆಲಿಸುತ್ತಾ, ಮತ್ತೂಮ್ಮೆ ಪ್ರಶ್ನಿಸುತ್ತಲೂ ಇರುತಿದ್ದ ಕಾಲವದು.
ವಾರಗಟ್ಟಲೇ ಜಡಿ ಮಳೆ ಹಿಡಿದರೆ ಕೆಂಪಂಚಿನ ಮನೆಯಲ್ಲ ರಾಡಿ-ರಾಡಿ, ನೆಲವೆಲ್ಲ ತೇವಾಂಶ ಬರಿತ ಪಾಚಿ. ಮಳೆಗೆ ನೆಲದ ಒಲೆಗಳಿಗೆ ಹಸಿ ಕಟ್ಟಿಗೆ ತುರುಕಿ, ತುಕ್ಕಿಡಿದ ಕಬ್ಬಿಣದ ಊದುಗೊಳವೆಯಿಂದ ಉಸಿರುಗಟ್ಟಿ ಊಊಊ ಉ ಎಂದು ಊದುತಿದ್ದರೇ ಅಮ್ಮ, ಮನೆಯಲ್ಲ ದೇವನಗರಿಯಂತೆ ಹೊಗೆಯ ಮಾಯೆ, ಕಣ್ಣುಜ್ಜಿಕೊಂಡು ಮ್ಮಾ…ಕಣ್ಣುರಿ ಎಂದರೇ “ಅಯ್ಯೋ ಆಳ್ವಾಗೋಗ ಆ ಮಳಿಗ್ ಏನ್ ಬಂದದೋ ಶನಿ ಮುಂಡೆದು, ಧೋ ಸುರಿಯಕ್ಕತ್ತಿ ಬಿಡುವಲ್ದು ತೂತಿYàತ್ ಬಿತ್ತೇನೋ, ನಿಮ್ಮಪ್ಪಂಗೆ ಮೊದೆÉ ಹೇಳಿದ್ದೆ ಮಳೆಗಾಲ ಶುರುವಾಗೋಕು ಮುಂಚೆಯೇ ಒಂದಿಷ್ಟು ಒಣ ಕಟ್ಟಿಗೆ ಎತ್ತಿಡು ಅಂತ, ಮಾತ್ ಕೇಳ್ಬೇಕಲ್ಲ, ಬೇಸೋಳು ಹೇಗಾದ್ರು ಬೇಸಾಕ್ಲಿ ಹೊತ್ತಿಗೆ ಸರಿಯಾಗಿ ಹೊಟ್ಟಿಗೆ ಬಿದ್ರಾತು, ಈ ಒಲಿಗೋ ನೆ®ª… ನೆ®ª… ಒಂದ್ಕಡೆ ಮಣ್ಣೆ ಬಿದೋಗದೆ ಥತ್ ಏನ್ ಜೀವ°ವೋ’ ಎಂಬ ಅಷ್ಟುದ್ದದ ದೂರನ್ನ ಒಂದೇ ಉಸಿರಿಗೆ ಒದರಿ ಮತ್ತೆ ಹಸಿ ಒಲೆಗೆ ಕೊಳವೆಯಿಂದ ಅವಳ ಸಿಟ್ಟನ್ನ ಊದುವ ಕೆಲಸ. ಅವಳ ಹಸಿಕೋಪವೂ ಅದೆಷ್ಟು ಅದ್ಭುತವಾಗಿತ್ತು ಅಂತ ಈಗೀಗ ಅನ್ಸತ್ತೆ. ಜಡಿ ಮಳೆ ಬಂದ್ರೆ ಅವಳ ನೆನಪ ಹೊತ್ತೆ ಬರೋದು.
ಶಂಕರಮ್ಮ ಟೀಚರ್ ಎಲ್ಲರಿಗೂ ಪಾಠ ಓದಿಸ್ತ ಇದ್ರು ನಾನಾಗ ನಾಲ್ಕನೇ ಕ್ಲಾಸು, ಸರಿಯಾಗಿ ಪಾಠ ಓದದೆ ಇದ್ದ ಕಾರಣ ಅಮ್ಮನ್ನ ಕರೆಸಿದ್ರು, ಇವಳು ಮನೆಯಲ್ಲಿ ದಿನಪಾಠ ಓದಲ್ವ? ಹೋಮÌರ್ಕ್ ಸಹ ಮಾಡ್ಕೊಂಡ್ ಬರಲ್ಲ? ನಮ್ ಮಾತ್ ಕೇಳಲ್ಲ ಮೇಡಂ, ಗುಂಡ್ರುಗೋವಿ ರೀತಿಯಲ್ಲಿ ತೀರುಗ್ತಳೆ ಊರು-ಬೇಲಿಯಲ್ಲ, ಪುಸ್ತಕ ಅಂತ ಹಿಡಿಯಲ್ಲ, ಅವರಿರವರ ಮನೆಗೆ ಟೀವಿ ನೋಡೋಕೆ ಹೋಗ್ತಳೆ “ದಂಡ-ಪಿಂಡಗಳು’ ಧಾರಾವಾಹಿ ಹಾಡ್ ಕೇಳಿ ಕಣ್ಮುಚ್ಚಿ ಹೇಳ್ತಳೆ. ಹೀಗೆ ಟೀಚರ್ಗಿಂತ ಹೆಚ್ಚಿನ ದೂರು ಅಮ್ಮನದೇ ಇತ್ತು. ಉಫ್ ನನ್ ಅವಸ್ಥೆ ದೇವರಿಗೆ ತೃಪ್ತಿ. ಗೆಳೆಯರ ಮುಂದೆ ನನ್ ಇಮೇಜ್ ಡ್ಯಾಮೇಜ್ ಮಾಡಿದ್ರು ಇಬ್ರು. ಸಂಜೆ ಮನೆಗೆ ಬಂದದ್ದೆ ಇವಳ ಇಸಲು ಪೊರಕೆ ಸೇವೆ ತಿಂದು, ಒಂದಿಷ್ಟು ಸುಧಾರಿಸಿಕೊಂಡ ಮೇಲೆ ಅವಳು ಬದುಕಿನ ಪಾಠ ಆರಂಭ ಮಾಡಿದ್ದು. ಅಲ್ಲಿಂದ ಓದನ್ನ-ಜೀವನವನ್ನ ಮತ್ತಷ್ಟು ಗಂಭೀರವಾಗಿ ತೆಗೆದುಕೊಂಡದ್ದು. ಬೆನ್ನು ತಟ್ಟಿ ಪ್ರಶಂಸೆ ಪಡೆದದ್ದು ಅಂದಿನಿಂದಲೇ.
ನಿತ್ಯ-ಪಾಠ; ಪ್ರತೀ ಉತ್ತರದಲ್ಲೂ ಒಂದೊಂದು ಪ್ರಶ್ನೆಯನ್ನೆ ಎತ್ತಿಕ್ಕುವ ನನ್ನ ಜಾಣತನಕ್ಕೆ ಶಿಕ್ಷಕರಾಗಲಿ, ಮನೆಯವರಾಗಲಿ, ಗೆಳೆಯರಾಗಲಿ ಬೇಶ್ ಎಂದು ಕೊಂಡಾಡಲೇ ಇಲ್ಲ. ಒಮ್ಮೊಮ್ಮೆ ಅನಿಸುತಿತ್ತು ಅತಿಯಾಗಿ ಪ್ರಶ್ನಿಸುತ್ತಾ ನನ್ನ ದಡ್ಡತನವನ್ನು ನಾನೇ ಪ್ರಶಂಸಿಸಿಕೊಳ್ಳುತಿದ್ದೇನಾ? ಮನಸ್ಸು ಮಾತಿಗಿಳಿದು ಕೇಳಿದಾಗಲೇ ಅನಿಸಿದ್ದು, ಇಲ್ಲ ಪ್ರಶ್ನಿಸುವ ಎದೆಗಾರಿಕೆ ಎಲ್ಲರಿಗೂ ಇರುವುದಿಲ್ಲ. ಅದು ನನ್ನೊಳಗಿದೆ ಎಂಬ ಸಮರ್ಥನೆ. ಅದು ನಿಜವೂ ಸಹ, ಮುಖ್ಯ ಶಿಕ್ಷಕರಾ ಗಲಿ, ಊರಿನ ಗಣ್ಯರಾಗಲಿ, ರಾಜಕಾರಣಿಯಾಗಲಿ ಎಲ್ಲರನ್ನು ಪ್ರಶ್ನಿಸುತ್ತಿದ್ದೆ. ಅದು ಒಂದಿಷ್ಟು ಪ್ರಚಾರದ ಸುದ್ದಿಯಾದರೆ ಮತ್ತಷ್ಟು ಅಪಪ್ರಚಾರ. ಹೆಣ್ಮಗು ಇಷ್ಟು ಧೈರ್ಯಸ್ಥಿಕೆ ಒಳ್ಳೆಯದಲ್ಲ ಅಂತ ಭೀತಿ ತುಂಬುವ ಮಾತುಗಳು.
ನೀ ನಿನ್ನದೇ ದಾರಿಯಲ್ಲಿ ಸಾಗುತಿದ್ದಿಯ, ಅಂಜದೆ, ಅಳುಕದೆ ಮುನ್ನುಗ್ಗು ಪ್ರತಿ ಸೋಲು ನಿನ್ನ ಗೆಲುವು, ಪ್ರತಿ ಗೆಲುವು ನಿನಗೆ ಹೊಸ ತಿರುವು. ಸತ್ಯದ ಮಾರ್ಗದಲ್ಲಿ ನಡೆ, ಅನ್ಯಾಯದ ವಿರುದ್ಧ ಸಿಡಿದೇಳು. ಅವಳ ಇಂತಹುದೇ ಮಾತುಗಳು ನನ್ನನ್ನು ಬದುಕಿಸಿದವು ನಾನು ಬದುಕುಳಿದೆ. ಈಗೀಗ ಮಗನಿಗೆ ನಿತ್ಯ-ಪಾಠದಲ್ಲಿ ಇದೇ ಹೇಳುವಾಗ ಪ್ರವಚನ ಶುರು ಮಾಡª ಎಂಬುವ ಅವನ ಮಾತುಗಳಿಗೆ, ಮನೆಯ ಮುಂದಿನ ತುಕ್ಕಿಡಿದ ಕಬ್ಬಿಣದ ಗೇಟಿಗೆ ಪಾಚಿ ಬಣ್ಣ ಬಳಿಯುತ್ತಾ ಅವಳನ್ನೇ ನೆನಹುವಾಗ, ಎದೆ ಗುಡುಗಿ ಮಳೆಯ ಆರಂಭವಾಗುತ್ತದೆ.
-ದೀಪಿಕಾ ಬಾಬು
ಮಾರಘಟ್ಟ