Advertisement
ಇದು ಸ್ಥಳೀಯ ಸಸ್ಯವರ್ಗದ ಅಭಿವೃದ್ಧಿಗಿಂತಲೂ ವೇಗವಾಗಿ ನೆಲವನ್ನಾಕ್ರಮಿಸುವ ರಾಕ್ಷಸ ಗಿಡ. ಭೂಖಂಡಗಳನ್ನು ದಾಟಿ ಹರಡಿದ ಇದರ ಕತೆಯೂ ಸೋಜಿಗವೇ.
Related Articles
Advertisement
ಲಂಟಾನವು ಟನ್ ಗಟ್ಟಲೆ ಬೀಜಗಳನ್ನು ಉತ್ಪಾದಿಸುತ್ತದೆ. ಲಂಟಾನಾ ಬದುಕುವುದಕ್ಕೆ ಅದರ ಕಾಂಡ ನೆಲತಾಕಿದರೂ ಸಾಕು. ಲಂಟಾನಾ ಬೀಜಪ್ರಸಾರವೂ ಅಷ್ಟೇ ಪರಿಣಾಮಕಾರಿ. ತಾನು ಉಳಿಯಲು, ಮರು ಉತ್ಪತ್ತಿಯಾಗಲು ತನ್ನದೇ ಬದುಕುವ ನಿಯಮ ಲಂಟಾನಕ್ಕಿದೆ. ಹೀಗಾಗಿ ಲಂಟಾನ ಕಳೆಯಾಗಿ ನಿರ್ವಹಿಸಲು ಬಹಳ ಕಷ್ಟದ ಕೆಲಸ.
ರಾಜ್ಯದ ಅರಣ್ಯ ಇಲಾಖೆಯು ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಯಕ್ರಮದ ಅಡಿಯಲ್ಲಿ ಬಂಡೀಪುರದಾದ್ಯಂತ ಹರಡಿರುವ ಲಂಟಾನವನ್ನು ತೆಗೆದುಹಾಕುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದರಿಂದ ನೀವೇ ಆಲೋಚಿಸಬಹುದು ಕಳೆಯ ಪ್ರಭಾವವನ್ನು. ಎಳವೆಯಲ್ಲಿಯೇ ಕಿತ್ತು ನಿವಾರಿಸಿದರೆ ಆದೀತು, ಕೆಟ್ಟದ್ದನ್ನು ನೀಗಿಸಲು ಶ್ರಮ ಹೆಚ್ಚು ಎನ್ನುವ ಪಾಠವೂ ಇದರಲ್ಲಡಗಿದೆ.
ಲಂಟಾನದ ತ್ವರಿತ ಬೆಳವಣಿಗೆಯನ್ನು ಒಳ್ಳೆಯದಕ್ಕಾಗಿ ಬಳಸಿಕೊಳ್ಳಬಹುದು. ಕೆಲವು ಪ್ರದೇಶಗಳಲ್ಲಿ ಮಣ್ಣಿನಿಂದ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳುವುದಕ್ಕೆ ಜೈವಿಕ ಮಾಲಿನ್ಯಕ್ಕೆ ಪರಿಹಾರವಾಗಿಯೂ ಬಳಸಲಾಗಿದೆಯಂತೆ.
ಇವಿಷ್ಟು ಅಪವಾದಗಳಿದ್ದರೂ ಸ್ಥಳೀಯವಾಗಿ ಲಂಟಾನವನ್ನು ಬಳಸಿಕೊಳ್ಳುವ ಅನೇಕ ವಿಧಾನಗಳನ್ನೂ ಕಂಡುಕೊಂಡಿದ್ದಿವೆ. ಲಂಟಾನಾ ಎಲೆಗಳು ಆಂಟಿಮೈಕ್ರೊಬಿಯಲ್, ಶಿಲೀಂಧ್ರನಾಶಕ ಮತ್ತು ಕೀಟನಾಶಕ ಗುಣಗಳನ್ನು ಹೊಂದಿವೆ ಮತ್ತು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಗಿಡಮೂಲಿಕೆ ಔಷಧಿಗಳಲ್ಲಿ ಬಳಸಲಾಗುತ್ತದೆ. ಹೇರಳವಾಗಿ ಎಲ್ಲೆಂದರಲ್ಲಿ ಸಿಗುವ ಲಂಟಾನವನ್ನು ಪೀಠೊಪಕರಣಗಳ ತಯಾರಿಕೆಯಲ್ಲಿಯೂ ಬಳಸಿ ಸೈ ಎಂದೆನಿಸಿಕೊಂಡಿದ್ದಿದೆ. ಲಂಟಾನದಿಂದ ತಯಾರಿಸಿದ ಪೀಠೊಪಕರಣಗಳು ಬಿದಿರು ಅಥವಾ ಬೆತ್ತದ ಪೀಠೊಪಕರಣಗಳಂತೆ ಕಾಣುತ್ತದೆ, ಆದರೆ ಹೆಚ್ಚು ಬಾಳಿಕೆ ಬರುತ್ತವೆ.
ತಮಿಳುನಾಡಿನ ಕೆಲವೆಡೆ, ಬಿಳಿಗಿರಿರಂಗನ ಬೆಟ್ಟದ ಸೋಲಿಗರು ಲಂಟಾನದಿಂದ ತಯಾರಿಸುತ್ತಿರುವ ಪೀಠೊಪಕರಣಗಳು ಮತ್ತು ಅಲಂಕಾರಿಕ ವಸ್ತುಗಳು ಎಲ್ಲರ ಗಮನಸೆಳೆದಿವೆ. ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಮಾರ್ಗಗಳನ್ನು ಹುಡುಕಲು ಇದು ಪ್ರೇರೇಪಿಸುತ್ತದೆ. ಉದ್ಯಾನವನಗಳಲ್ಲಿ ಅಲಂಕಾರಕ್ಕೆಂದು ಭಾರತಕ್ಕೆ ಬಂದ ಲಂಟಾನ, ಅರಣ್ಯ ಮತ್ತು ವೈವಿಧ್ಯತೆಗೂ ಕಂಟಕವಾಗಿದೆ. ಹೆಚ್ಚಾದರೆ ಅಮೃತವೂ ವಿಷ ಎಂಬುದಕ್ಕೆ ಇದೇ ಸಾಕ್ಷಿ.
ಬದಲಾಗುತ್ತಿರುವ ಹವಾಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯದೊಂದಿಗೆ, ಲಂಟಾನಾ ಹೆಚ್ಚಿನ ತಾಪಮಾನ ಮತ್ತು ತೇವಾಂಶವನ್ನು ಸಹಿಸಿಕೊಳ್ಳಬಲ್ಲದು. ಈ ಪ್ರಭೇದವು ಈಗ ಸುಮಾರು ಮೂರು ಲಕ್ಷ ಚ. ಕಿ. ಮೀ. ಅರಣ್ಯದಲ್ಲಿ ಹರಡಿಬಿಟ್ಟಿವೆ. ಕಾಡು ಪ್ರಾಣಿ-ಮಾನವ ಸಂಘರ್ಷಕ್ಕೂ ಇದು ಕಾರಣವಾಗಿದೆ. ಹಾಗಾಗಿ ಲಂಟಾನ ಸಸ್ಯವಾಗಿ ಕೇವಲವಲ್ಲ. ತನ್ನನ್ನು ಯಾವಕಾಲಕ್ಕೂ ಪ್ರಸ್ತುತವಾಗಿಸಲು ಹೊರಟ ಕಳೆಯದ-ಕಳೆ.
-ವಿಶ್ವನಾಥ ಭಟ್
ಧಾರವಾಡ