ಶ್ಮಶಾನವೆಂದರೆ ದೊಡ್ಡವರಿಂದ ಮಕ್ಕಳ ತನಕ ಭಯ, ಅಸಹ್ಯಗಳೇ ತುಂಬಿಕೊಂಡಿರುವುದು ಸಹಜ. ಆದರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಿದ್ಯಾನಗರದಲ್ಲಿರುವ ರುದ್ರಭೂಮಿ ಭಿನ್ನವಾಗಿದೆ. ಈ ರುದ್ರಭೂಮಿ ಮೃತ ವ್ಯಕ್ತಿಗಳಿಗೆ ಸದ್ಗತಿ ಕಾಣಿಸುವ ತಾಣವಾಗುವ ಜತೆಗೆ ಸಾಹಿತ್ಯ, ಸಂಸ್ಕೃತಿ ಪ್ರೇಮಿಗಳಿಗೆ ರಂಗಧಾಮ ಕಾರ್ಯಕ್ರಮ ಕುಟೀರಗಳು ಚಟುವಟಿಕೆಗಳ ಮೂಲಕ ಮುದ ನೀಡುವ ತಾಣವೂ ಆಗಿದೆ.
ರುದ್ರಭೂಮಿಯ ಎರಡೂವರೆ ಎಕ್ರೆ ಜಾಗವನ್ನು ಎರಡು ಕುಟೀರಗಳನ್ನಾಗಿ ಮಾಡಲಾಗಿದೆ. ಒಂದಕ್ಕೆ ಸದ್ಗತಿ ಮತ್ತೂಂದಕ್ಕೆ ನೆಮ್ಮದಿ ಕುಟೀರ ಎಂದು ಹೆಸರಿಡಸಲಾಗಿದೆ. ರುದ್ರಭೂಮಿಗೆ ಕರೆ ಬಂತೆಂದರೆ ಅದು ಸಾವಿನ ಸುದ್ದಿಯೇ ಆಗಿರುತ್ತದೆ. ಒಂದು ಕರೆ ಮಾಡಿದರೆ ಸಾಕು, ಮೃತರ ಕಳೇಬರ ತರಿಸಲು ವಾಹನದಿಂದ ಹಿಡಿದು ಸಕಲ ವ್ಯವಸ್ಥೆಗೂ ಸಿದ್ಧ ಈ ರುದ್ರಭೂಮಿ.
ಅಂತಿಮವಾಗಿ ಬಂಧುವನ್ನು ಗೆಳೆಯನನ್ನು ಸಹೋದರ, ಸಹೋದರಿಯನ್ನು ಬೀಳ್ಕೊಟ್ಟ ಬಳಿಕ ಇಲ್ಲಿ ಸತ್ಛತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಬಡವರ, ಅನಾಥ ಶವಗಳ ಸಂಸ್ಕಾರವನ್ನು ಶುಲ್ಕರಹಿತವಾಗಿ ನಡೆಸಿದ್ದೂ ಇದೆ. ವಿಶೇಷ ಅಂದರೆ ಇಲ್ಲಿನ ಬೆಳಗು ಸಾವಿನ ಸುದ್ದಿಯಿಂದಲೇ ಆರಂಭವಾಗುತ್ತದೆ, ಆದರೆ ಸಂಜೆಯ ಸಮಯದಲ್ಲಿ ಇಲ್ಲಿ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳು ನಡೆಯುತ್ತವೆ, ಎಷ್ಟೋ ಬಾರಿ ಇಡೀ ದಿನದ ಸಮ್ಮೇಳನಗಳೂ ನಡೆಯುತ್ತವೆ.
ಇಲ್ಲಿನ ಸುತ್ತಲಿನ ಪರಿಸರ, ವೃಂದಾವನದ ನೋಟ, ಗಿಡ ಮರಗಳೂ, ಅರಳಿದ ಹೂವುಗಳೂ ನಮ್ಮನ್ನು ನೋಡಿ ಸಾಂತ್ವನದ ಮಾತುಗಳನ್ನು ಆಡುತ್ತವೆ. ಇಲ್ಲಿ ಒಂದು ಕಡೆ ಮೃತ ವ್ಯಕ್ತಿಯ ದಹನ ನಡೆದರೆ, ಇನ್ನೊಂದು ಕಡೆ ಚೆಂಡೆಯ, ಮದ್ದಲೆಯ ಸದ್ದು ಕೇಳುತ್ತವೆ, ಜತೆಗೆ ಪುಸ್ತಕ ಬಿಡುಗಡೆ, ಕಾವ್ಯವಾಚನದಂತ ಸಮಾರಂಭಗಳು ನಡೆಯುತ್ತವೆ.
ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಗಳ ಜತೆಗೆ ಇದೀಗ ಈ ರುದ್ರಭೂಮಿಯಲ್ಲಿ ರಂಗಧಾಮ ಕೂಡ ತಲೆ ಎತ್ತಿದೆ. ರುದ್ರಭೂಮಿ ಹಾಗೂ ರಂಗಭೂಮಿಗಳಲ್ಲಿನ ಎರಡೂ ಒಗೆಯ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವಿದ್ಯಾನಗರದ ರುದ್ರಭೂಮಿಯ ಆಡಳಿತ ಸಮಿತಿ 24 ಗಂಟೆ ಸೇವೆಗೆ ಸಿದ್ಧವಾಗಿದೆ.
ನೆಮ್ಮದಿ ಕುಟೀರದಲ್ಲಿ ಸಣ್ಣ-ಪುಟ್ಟ ಕಾರ್ಯಕ್ರಮಗಳಿಗೆ ಸುದ್ದಿಗೋಷ್ಠಿಗಳಿಗೆ, ಸಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ರಂಗಧಾಮ ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ನಾಡಿನಲ್ಲೇ ಅತಿ ಹೆಚ್ಚು ಪುಸ್ತಕಗಳು ದಾನರೂಪದಲ್ಲಿ ಹರಿದುಬಂದ ದಾಖಲೆ ಈ ಕುಟೀರಕ್ಕಿದೆ. ಪ್ರಸ್ತುತವಾಗಿ ಯಕ್ಷಗಾನ, ನಾಟಕ, ಸಂಗೀತ ತರಗತಿಗಳು ನಡೆಯುತ್ತಿವೆ.
ರಜಾ ದಿನಗಳಲ್ಲಿ ವೈದ್ಯರು, ಉದ್ಯೋಗಿಗಳು, ಎಂಜಿನಿಯರ್ ನಿವೃತ್ತರು, ಶಿಕ್ಷಕರು ಎಲ್ಲ ಸೇರಿ ಪ್ರತೀ ರವಿವಾರ ಶಿರಸಿಯ ವಿದ್ಯಾನಗರ ರುದ್ರಭೂಮಿಯಲ್ಲಿ ಸ್ವತ್ಛತೆಯ ಕೆಲಸ, ಹಸುರುಗೋಡೆ ನಿರ್ವಹಣೆ, ಶವ ಸಂಸ್ಕಾರಕ್ಕೆ ಕಟ್ಟಿಗೆ ತರುವುದು ಮುಂತಾದ ಎಲ್ಲ ಕೆಲಸಗಳನ್ನೂ ಮಾಡುತ್ತಾರೆ.
ವಿದ್ಯಾನಗರದ ರುದ್ರಭೂಮಿ ದೇಶದ ಗಮನ ಸೆಳೆದಿದ್ದು, ರಾಜ್ಯ ರಾಜಧಾನಿಯಿಂದ ಶಿರಸಿಯ ರುದ್ರಭೂಮಿಗೆ ನಾಡಗುರು ಕೆಂಪೇಗೌಡರ ಪ್ರಶಸ್ತಿ ದೊರೆತಿದೆ.
–
ಅಪೂರ್ವ
ಶಿರಸಿ