Advertisement

UV Fusion: ಪಯಾಣದ ಸಂಗಾತಿ

03:32 PM Aug 22, 2023 | Team Udayavani |

ಪ್ರಯಾಣ ಅಂದಾಗಲೆಲ್ಲ ತತ್‌ಕ್ಷಣಕ್ಕೆ ನೆನಪಿಗೆ ಬರೋದು ಶಿವರಾಮ ಕಾರಂತರ “ಅಳಿದ ಮೇಲೆ’ ಕಾದಂಬರಿ. ಪ್ರಯಾಣದಲ್ಲಿ ಜತೆಯಾದ ಅಪರಿಚಿತ ವ್ಯಕ್ತಿಯೊಬ್ಬನ ಜಾಡು ಹಿಡಿದು ಹೊರಟ ಕಾರಂತರಿಗೆ ಆತನ ಇಡೀ ಬದುಕೆ ಕಾದಂಬರಿಯ ವಸ್ತುವಾಯಿತು. ಪ್ರಯಾಣವೇ ಹಾಗೆ ಪ್ರಯಾಣಿಸುವಷ್ಟು ಹೊತ್ತು ನಮಗೆ ಜತೆಯಾಗುವ ಹತ್ತಾರು ವ್ಯಕ್ತಿತ್ವ ನಮ್ಮ ಬದುಕಿನಲ್ಲಿ ದೀರ್ಘ‌ ಕಾಲ ನೆನಪಲ್ಲಿ ಉಳಿಯಬಹುದಾದ ಪಾತ್ರಗಳಾಗುತ್ತವೆ. ಹಾಗೆಯೇ ನನ್ನ ಪ್ರಯಾಣದ ಅನುಭವದಲ್ಲಿ ಇಂದು, ಎಂದೂ ನನ್ನ ಸ್ಮತಿಯಿಂದ ದೂರವಾಗದಿರುವ ವ್ಯಕ್ತಿತ್ವ ಮಂಜಮ್ಮನದು.

Advertisement

ಮಂಜಮ್ಮ, ನನಗೆ ಬಸ್‌ ಪ್ರಯಾಣದಲ್ಲಿ ಜತೆಯಾದ ಅಪರಿಚಿತ ಹೆಂಗಸು. ಪರಿಚಯಕ್ಕೂ ಮುನ್ನ ಸಾಮಾನ್ಯ ಹೆಂಗಸಾಗಿ ಕಂಡ ಅವಳು, ತನ್ನ ನಿಲ್ದಾಣದಲ್ಲಿ ಇಳಿಯುತ್ತ ಕಡೆಯದಾಗಿ ನನ್ನ ಕಡೆಗೆ ತಿರುಗಿ ನೋಡಿದಾಗ ಹೆಣ್ತನದ ಅಷ್ಟೂ ಮುಖಗಳು ಸೇರಿ ಏಕರೂಪ ತಳೆದವಳಾಗಿ ಕಂಡಿದ್ದಳು. ಅವಳ ಕಥೆಯನ್ನೆಲ್ಲ ಕೇಳಿದ ಅನಂತರ ಅವಳು ಅನಾದಿ ಕಾಲದಿಂದ ಇಂದಿನ ಆನ್‌ಲೈನ್‌ ಕಾಲದ ವರೆಗೂ ನಾನಾ ಪರಿವರ್ತನೆಗಳಿಗೆ ಹೆಣ್ಣು ಹೇಗೆ ತನ್ನನ್ನು ತಾನು ಒಡ್ಡಿಕೊಂಡು ಬದುಕಬೇಕು ಎಂಬುದಕ್ಕೆ ಒಂದು ಮಾದರಿ ಎನಿಸಿತು.

ಸುಮಾರು ಮೂರು ಗಂಟೆಗಳ ಪ್ರಯಾಣದಲ್ಲಿ ಎರಡೂವರೆ ಗಂಟೆಯನ್ನು ಅವಳು ತನ್ನ ಸಂಪೂರ್ಣ ಬದುಕಿನ ಚಿತ್ರೀಕರಣಕ್ಕೆ ತೆಗೆದುಕೊಂಡಳು.

ನಾನು ಮೊದಲೇ ಹೇಳಿದ ಹಾಗೆ ಮಂಜಮ್ಮ ಹೆಣ್ಣಿನ ನಾನಾ ಭಾವನೆಗಳನ್ನ ಒಗ್ಗೂಡಿಸಿದಂತೆ ಇದ್ದವಳು. ಹಾಗಾಗಿ ಅವಳ ಕಥೆಯಲ್ಲಿ ಅಳು, ನಗು, ಆ ವರೆಗೂ ಪ್ರಕಟಗೊಳ್ಳದ ಅದೆಷ್ಟೋ ಆಸೆ, ಕನಸುಗಳು, ಸಮಾಜದ ಕುರಿತು ಕೆಂಡದ ಉಂಡೆಗಳಂಥ ಬೈಗುಳಗಳು, ತಾನಷ್ಟು ದೃಢವಾಗಿದ್ದಾಗಲೂ ಸಣ್ಣದಾಗಿ ಸುಳಿಯುತ್ತಿದ್ದ ಅಸಹಾಯಕತೆ, ಭಯ ಈ ಎಲ್ಲಕ್ಕೂ ಕಾರಣವಾದ ಹಣೆಬರಹ, ದೇವರು ಹೀಗೆ ನಾನಾ ಅಂಶಗಳನ್ನು ಒಳಗೊಂಡಿದ್ದರಿಂದಲೇ ಬಿಡುವಿಲ್ಲದೆ ನನ್ನ ಕಿವಿಗೆ ಎರಡೂವರೆ ಗಂಟೆ ಕೆಲಸ ಕೊಟ್ಟಿದ್ದಳು. ಹಾಗಂತ ನಾನು ಕೇಳಿದ ಅಷ್ಟೂ ಸಮಯದ ಕಥೆಯನ್ನ ಸಂಪೂರ್ಣವಾಗಿ ನಿಮಗೆ ಹೇಳ್ಳೋಕೆ ಹೊರಟಿಲ್ಲ. ಕಥೆಯ ಮುಖ್ಯ ವಸ್ತುವನ್ನಷ್ಟೆ ಸಂಕ್ಷಿಪ್ತವಾಗಿ ಹೇಳ್ತೀನಿ.

ಮಂಜಮ್ಮ ತೀರಾ ಬಡ ಕುಟುಂಬದಲ್ಲಿ ಹುಟ್ಟಿದ ಹೆಣ್ಣು. ಸಣ್ಣ ವಯಸ್ಸಿನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡವಳು. ತಂದೆಯನ್ನು ಬಿಟ್ಟರೆ ಅವಳೊಟ್ಟಿಗೆ ಬಹಳ ಕಾಲ ಉಳಿಯಬಹುದಾದ ಇತರ ಸಂಬಂಧಗಳು ಯಾವೂ ಅವಳಿಗಿರಲಿಲ್ಲ. ಆದರೂ ತಾಯಿಯಿಂದ ಕಲಿಯಬೇಕಾದ ಎಲ್ಲ ಗುಣ, ಮೌಲ್ಯಗಳು ಅವಳಲ್ಲಿದ್ದವು. ಆದರೆ ಒಂದು ಹೆಣ್ಣಿನ ಬದುಕಲ್ಲಿ ಹಂತ ಹಂತವಾಗಿ ಅವಳು ಕಾಣುವ ಬಣ್ಣದ ಕನಸು, ಆಸೆಗಳಿಂದ ಕೂಡಿದ ಭಾವನೆಗಳು ಅವಳಲ್ಲಿದ್ದರು, ಅವುಗಳನ್ನ ಒಳಗೊಂಡ ಹಲವು ಪಾತ್ರಗಳಾಗಿ ಅದರ ಅನುಭವಗಳನ್ನು ಪಡೆಯೊ ಭಾಗ್ಯ ಅವಳಿಗಿನ್ನೂ ಲಭಿಸದ ಕಾರಣ ಯೌವನಾವಸ್ಥೆಯನ್ನು ದಾಟಿ ವಯಸ್ಕ ಹಂತ ತಲುಪಿದ್ದಳು. ಉಳಿದರ್ಧ ಬದುಕಿನ ದಾರಿಗೆ ಮದುವೆ ಎಂಬ ಹೊಸ ತಿರುವು ಇನ್ನೂ ಸಿಕ್ಕಿರಲಿಲ್ಲ.

Advertisement

ಕಾರಣ ಇಷ್ಟೆ, ಅವಳ ತಂದೆಗೆ ಮೊದಲಿನಿಂದಲೂ ವಾಸ್ತವ ಪ್ರಪಂಚದ ಎಲ್ಲ ಜಂಜಾಟಗಳಿಂದ ದೂರಾಗಿ ತನ್ನದೇ ಮತ್ತಿನ ಲೋಕದಲ್ಲಿ ಬದುಕುವ ಚಟ.

ಹಾಗಂತ ಬೇರಾವುದೊ ನೈತಿಕವಲ್ಲದ ಮಾರ್ಗದಲ್ಲಿ ಬದುಕಿನ ಅನುಭವಗಳನ್ನು ಪಡೆಯುವ ಆಲೋಚನೆ ಅವಳ ತಲೆಯಲ್ಲಿ ಎಂದೂ ಬಂದಿರಲಿಲ್ಲ. ಹಾಗಾಗಿ ಅರ್ಧ ಜೀವನ ಸವೆದಿದ್ದರು ಅವಳ ಮಟ್ಟಿಗೆ ನಿಜವಾದ ಜೀವನ ಇನ್ನು ಆರಂಭಗೊಂಡಿರಲಿಲ್ಲ.

ಏನೇ ಆಗ್ಲಿ ಮನುಷ್ಯ ಜನ್ಮ ಪಡೆದ ಮೇಲೆ ಇಲ್ಲಿಂದ ಬರಿಗೈಯಲ್ಲಿ ಹೋಗೋಕೆ ಹೇಗೆ ತಾನೆ ಸಾಧ್ಯ ಅಲ್ವ!.

ಅದಕ್ಕೆ ಕೊನೆ ಕ್ಷಣದಲ್ಲಿ ದೇವರು ಅವಳಿಗೊಂದು ವಿಶೇಷವಾದ ಅವಕಾಶವನ್ನು ಕೊಟ್ಟಿದ್ದ. ಹಾಗಾಗಿ ತಂದೆ ವಯಸ್ಸಿನ ವ್ಯಕ್ತಿ ತನ್ನನ್ನು ಮದುವೆಯಾಗು ಅಂದಾಗ ಅವಳ ತಂದೆಯ ಒಪ್ಪಿಗೆ ಪಡೆದು ಮದುವೆ ಆಗೇ ಬಿಟ್ಟಿದ್ದಳು. ಆದರೆ ಆ ಅವಕಾಶ ಕೂಡ ಕೆಲವು ತಿಂಗಳುಗಳ ಕಾಲ ಮಾತ್ರ ಉಳಿಯುವಂತಹದಾಗಿತ್ತಷ್ಟೆ.

ಅವಳ ಪಾಲಿಗೀಗ ತಂದೆ, ತಂದೆ ವಯಸ್ಸಿನ ಗಂಡ ಯಾರೂ ಉಳಿದಿಲ್ಲ. ಅವಳ ಪಾಲಿಗೆ ಉಳಿದಿರುವುದು ಇಷ್ಟೆ, ಹೆಣ್ಣಾಗಿ ತನಗೆ ಒದಗಬಹುದಾದ ಭಾವನೆ ಅನುಭವಗಳನ್ನು ಪರಿಶುದ್ಧವಾದ ಅರ್ಥದಲ್ಲಿ, ರೀತಿಯಲ್ಲಿ ದಕ್ಕಿಸಿಕೊಂಡೆ ಎಂಬ ಆತ್ಮತೃಪ್ತಿ. ಅವಳು ಆ ವರೆಗೂ ಕಾದಿದ್ದು ಅದಕ್ಕಾಗಿಯೇ.

ಅವಳು ಆವತ್ತು ಮದುವೆಯ ನಿರ್ಧಾರ ತೆಗೆದುಕೊಂಡಾಗಲೂ ಸಮಾಜದ ಕಣ್ಣು ಅವಳತ್ತ ಇತ್ತು, ಇವತ್ತು ಬದುಕಿನ ಕೊನೆಯಲ್ಲೂ ಆಧುನಿಕ ಹೆಣ್ಣಿನ ಮಾದರಿಯಾಗಿ ನಿಂತಿರುವಾಗಲೂ ಸಮಾಜ ಅವಳತ್ತ ನೋಡ್ತಿದೆ… ಪ್ರಯಾಣದ ವೇಳೆ ಕಿಟಕಿಯಿಂದಾಚೆಗೆ ಮಂಜಮ್ಮ ತೋರಿಸಿದ ಆ ವರೆಗೂ ಕಾಣದ ಹೊಸ ಜಗತ್ತಿನ ಚಿತ್ರಣವಿದು.

-ರಶ್ಮಿ ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next