Advertisement

UV Campaign: ನಮಗೆ ಕಾಲುಸಂಕ ಬೇಕು- ಬಳುಕುವ ಸಂಕದಿಂದ ಆತಂಕ!

01:05 PM Jul 28, 2024 | Team Udayavani |

ಉಪ್ಪುಂದ : ಹೊಳೆಯ ಒಂದು ದಂಡೆಯಲ್ಲಿ ಅಂಚಿನ ಮಣ್ಣೇ ಆಧಾರ. ಇನ್ನೊಂದು ಕಡೆಯಲ್ಲಿ ಎರಡು ಮರದ ದಿಮ್ಮಿಗಳನ್ನು ನೆಟ್ಟು ಅವುಗಳನ್ನು ಇನ್ನೊಂದು ದಿಮ್ಮಿಯಿಂದ ಜೋಡಿಸಲಾಗಿದೆ. ಅವುಗಳನ್ನು ಮೂರು ಮರಗಳನ್ನು ಅಡ್ಡಲಾಗಿ ಹಾಕಲಾಗಿದೆ. ಅದರ ಮೇಲೆ ಮರದ ಸಣ್ಣ ಸಣ್ಣ ಕೋಲುಗಳನ್ನು ಅಡ್ಡಕ್ಕೆ ಕಟ್ಟಿ ಕಾಲು ಸಂಕ ನಿರ್ಮಿಸಲಾಗಿದೆ. ಆಧಾರಕ್ಕೆ ಹಗ್ಗವನ್ನು ಕಟ್ಟಲಾಗಿದೆ. ಇದರ ಮೇಲೆಯೇ ತುಂಬಿ ಗದ್ದೆ ನಿವಾಸಿಗಳು ನಿತ್ಯ ಸರ್ಕಸ್‌ ನಡೆಸಬೇಕು.

Advertisement

ತಗ್ಗರ್ಸೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ತುಂಬಿಗದ್ದೆ ಗ್ರಾಮದಲ್ಲಿ ಮರಾಠಿ-ನಾಯ್ಕ ಸಮುದಾಯಕ್ಕೆ ಸೇರಿದ ಜನರೇ ಇರುವ ಊರಿಗೆ ಇದುವ ಪ್ರಧಾನ ಸಂಪರ್ಕವೇ ಈ ಕಾಲು ಸಂಕ. ಇಲ್ಲಿ ಒಬ್ಬಂಟಿಯಾಗಿ ಬಂದು ಕಾಲು ಸಂಕ ದಾಟುವುದು ತುಂಬಾ ಅಪಾಯಾಕಾರಿ. ಯಾಕೆಂದರೆ ಇದು ಅಲುಗಾಡುವ ಸೇತುವೆ! ಅಪಾಯಕ್ಕೆ ಸಿಲುಕಿ ಕೂಗಿಕೊಂಡರೂ ರಕ್ಷಣೆಗೆ ಬರಲು ಸಮೀಪದಲ್ಲಿ ಮನೆಗಳಿಲ್ಲ. ಸುತ್ತಲೂ ಅರಣ್ಯ ಪ್ರದೇಶ. ಅಪ್ಪತಪ್ಪಿ ಬಿದ್ದರೆ ದೇವರೇ ಗತಿ. ತುಂಬಿಗದ್ದೆ ಗ್ರಾಮದಲ್ಲಿ ಸುಮಾರು
17ರಿಂದ 20 ಮನೆಗಳಿವೆ. ಈ ಮರದ ದಿಮ್ಮಿಯ ಕಾಲು ಸಂಕದ ಮೂಲಕ ಪ್ರತಿನಿತ್ಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ತುಂಬಿ ಹರಿಯುವ ನದಿಯನ್ನು ದಾಟುವುದು ಅನಿವಾರ್ಯವಾಗಿದೆ.

ಆಸ್ಪತ್ರೆಗೆ ಹೊತ್ತುಕೊಂಡು ಹೋಗಬೇಕು
ಕೆಳಗಡೆ ರಭಸವಾಗಿ ಹರಿಯುವ ನೀರಿನ ಸೆಳೆತ, ಮೇಲೆ ಅಲುಗಾಡುವ ಕಾಲು ಸಂಕದ ಮೇಲೆ ನಿತ್ಯ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ದೊಡ್ಡ ಸವಾಲಿನಿಂದ ಕೂಡಿದೆ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾದರೆ ನೀರಿನ ಹರಿಯು ಅಪಾಯದ ಮಟ್ಟವನ್ನು ಮೀರಿ ಸೆಳೆತ ಇರುತ್ತದೆ. ಆಗ ಯಾರು ಕೂಡಾ ಸಂಕ ದಾಟುವ ಸಾಹಸಕ್ಕೆ ಕೈಹಾಕುವುದಿಲ್ಲ. ಇನ್ನು ಮಳೆಗಾಲದಲ್ಲಿ ಹಿರಿಯರನ್ನು, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸುವುದು ಬಲು ಕಷ್ಟ. ಇವರನ್ನು ಸೇತುವೆ ಮೇಲೆ ಹೊತ್ತುಕೊಂಡೇ ಹೋಗಬೇಕು. ಅದಕ್ಕೆ ಅಷ್ಟೇ ಧೈರ್ಯವೂ ಬೇಕು.

ರಾತ್ರಿ ಬೆಳಗಾಗುವುದರೊಳಗೆ ಶಿಫ್ಟ್
ಇಲ್ಲೊಂದು ಸೇತುವೆ ನಿರ್ಮಾಣಕ್ಕೆ ಮಾಜಿ ಶಾಸಕ ಬಿ.ಎಂ.ಸುಕುಮಾರ್‌ ಶೆಟ್ಟಿ ಅವರ ಅವಧಿಯಲ್ಲಿ ಅನುದಾನ ನೀಡಲಾಗಿತ್ತು ಎನ್ನುತ್ತಾರೆ ಇಲ್ಲಿ ನಾಗರಿಕರು. ಕಾಮಗಾರಿ ಮಾಡಲು ಸಿದ್ಧತೆ ಕೂಡ ಪ್ರಾರಂಭವಾಗಿತ್ತು. ಆದರೆ ರಾತ್ರಿ ಬೆಳಗಾಗುವುದರೊಳಗೆ ಇಲ್ಲಿಗೆ ಬಂದ ಯಂತ್ರಗಳನ್ನು ಮತ್ತೊಂದು ಕಡೆಗೆ ಸಾಗಿಸಲಾಗಿತ್ತಂತೆ. ಬಳಿಕ ಇಲ್ಲಿ ಸೇತುವೆ ಭರವಸೆಯಾಗಿಯೇ ಉಳಿ ಯಿತು.

ಇವರಿಗೆ ಬೇರೆ ಮಾರ್ಗವೇ ಇಲ್ಲ
ತುಂಬಿಗದ್ದೆಯ ಪರಿಶಿಷ್ಟ ಪಂಗಡದ ನಿವಾಸಿಗಳು ಮಖ್ಯ ರಸ್ತೆಗೆ ಬರಬೇಕಾದರೆ, ನಗರ ಪ್ರದೇಶಗಳಿಗೆ ಸಂಪರ್ಕ ಸಾಧಿಸಬೇಕಾದರೆ ಈ ಕಾಲು ಸಂಕವನ್ನು ದಾಟಿ ಬರಬೇಕು. ಇದು ಬಿಟ್ಟರೆ ಬೇರೆ ಮಾರ್ಗವಿಲ್ಲ. ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾದರೆ ಕಾಲು ಸಂಕದ ಮೇಲೆ ನೀರು ಹರಿಯುತ್ತದೆ. ಮಳೆಗಾಲದಲ್ಲಿ ನೀರಿನ ಸೆಳೆತ ಹೆಚ್ಚಿರುತ್ತದೆ. ಪ್ರತಿ ವರ್ಷ ಮರಗಳನ್ನು ಉಪಯೋಗಿಸಿ ತೂಗು ಸೇತುವೆ ನಿರ್ಮಾಣ ಮಾಡಿಕೊಳ್ಳುತ್ತಾರೆ. ಇದರ ಮೇಲೆ ಹಿಡಿದುಕೊಂಡು ಹೋಗಲು ಒಂದು ಬದಿಯಿಂದ ಇನ್ನೊಂದು ಬದಿಗೆ ಹಗ್ಗ ಕಟ್ಟಿಕೊಂಡಿದ್ದಾರೆ.

Advertisement

ವಾಹನ ನಿಲ್ಲಿಸಲು ಹೊಳೆ ಬದಿ ಶೆಡ್‌!
ಮಳೆಗಾಲದಲ್ಲಿ ಈ ಊರಿಗೆ ಈ ಕಾಲು ಸಂಕ ಮಾರ್ಗ ಬಿಟ್ಟರೆ ಬೇರೆ ಮಾರ್ಗ ಇಲ್ಲ ತಮ್ಮ ವಾಹನಗಳನ್ನು ನಿಲ್ಲಿಸಲು ಹೊಳೆ ಬದಿಯಲ್ಲಿ ಶೇಡ್‌ಗಳನ್ನು ನಿರ್ಮಿಸಿ ಕೊಂಡಿದ್ದಾರೆ. ಎಲ್ಲಿಗೆ ಹೋಗಬೇಕಾದರು ಸೇತುವೆ ಮೂಲಕ ಹೊಳೆ ದಾಟಿ ಪೇಟೆಗೆ ಹೋಗಿ ಬಂದು ಶೇಡ್‌ನ‌ಲ್ಲಿ ಬೈಕ್‌ಗನ್ನು ಇಟ್ಟು ಮನೆಗೆ ತೆರಳಬೇಕು.

ಸಂಕಷ್ಟಕ್ಕೆ ಸ್ಪಂದನೆ ದೊರಕುತ್ತಿಲ್ಲ
ಜನ ಪ್ರತಿನಿಧಿಗಳಿಗೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಆದರೆ ನಮ್ಮ ಸಂಕಷ್ಟಕ್ಕೆ ಸ್ಪಂದನೆ ದೊರಕುತ್ತಿಲ್ಲ. ಅನಾರೋಗ್ಯ ಪೀಡಿತರನ್ನು ಮಳೆಗಾಲದಲ್ಲಿ ಆಸ್ಪತ್ರಗೆ ಸಾಗಿಸಲು ತುಂಬಾ ತೊಂದರೆಯಾಗುತ್ತಿದೆ.
*ಕೇಶವ, ಸ್ಥಳೀಯ ನಿವಾಸಿ

*ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next