Advertisement

ಕಳ್ಳಭಟ್ಟಿ ದುರಂತಕ್ಕೆ 90 ಬಲಿ

12:30 AM Feb 10, 2019 | Team Udayavani |

ಲಕ್ನೋ: ಉತ್ತರಪ್ರದೇಶ ಮತ್ತು ಉತ್ತರಾಖಂಡದ ಅಕ್ಕಪಕ್ಕದ ಹಳ್ಳಿಗಳಲ್ಲಿ ಕಳ್ಳಭಟ್ಟಿ ದುರಂತಕ್ಕೆ ಬಲಿಯಾದವರ ಸಂಖ್ಯೆ ಶನಿವಾರ 90ಕ್ಕೇರಿದೆ. ಪಶ್ಚಿಮ ಉ.ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿ 38 ಮಂದಿ ಮೃತಪಟ್ಟರೆ, ಖುಷಿನಗರದಲ್ಲಿ 10 ಮಂದಿ, ಮೀರತ್‌ನಲ್ಲಿ 14 ಮಂದಿ ಮತ್ತು ಉತ್ತರಾಖಂಡದಲ್ಲಿ 28 ಮಂದಿ ಬಲಿಯಾಗಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರುವ ಭೀತಿಯಿದೆ ಎಂದು ವೈದ್ಯರು ತಿಳಿಸಿದ್ದಾರೆ. 

Advertisement

ಸಹರಾನ್ಪುರದ ಗ್ರಾಮಸ್ಥರು 3 ದಿನಗಳ ಹಿಂದೆ ನೆರೆಯ ಉತ್ತರಾಖಂಡಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ, ಅಲ್ಲಿ ಕಳ್ಳಭಟ್ಟಿ ಕುಡಿದಿದ್ದರು. ಅಲ್ಲದೆ, ಅಲ್ಲಿಂದ ವಾಪಸಾಗುವಾಗ ಅಕ್ರಮವಾಗಿ ಕಳ್ಳಭಟ್ಟಿಯನ್ನು ತಮ್ಮೂರಿಗೆ ತಂದು, ಉಳಿದವರಿಗೆ ಹಂಚಿದ್ದರು. ಈ ಕಳ್ಳಭಟ್ಟಿಯ ಮೂಲ ಬಿಹಾರವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಘೋಷಿಸಿದ್ದಾರೆ. ಜತೆಗೆ, ಖುಷಿನಗರ ಮತ್ತು ಸಹರಾನ್ಪುರದ ಜಿಲ್ಲಾ ಅಬಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.

30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ದುರಂತಕ್ಕೆ ಆಡಳಿತಾರೂಢ ಬಿಜೆಪಿ ಸರಕಾರವೇ ಕಾರಣ. ಅಬಕಾರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅವಘಡ ಸಂಭವಿಸಿದೆ ಎಂದು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ ಆರೋಪಿಸಿದ್ದಾರೆ.

ಪ್ರಕರಣ ಸಂಬಂಧ 30 ಮಂದಿಯ ಬಂಧನ
ತಲಾ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ ಯೋಗಿ
ಅಬಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next