ಡೆಹರಾಡೂನ್ : ಇಲ್ಲಿಗೆ ಸಮೀಪದ ರಾಮನಗರದ ದೇವಸ್ಥಾನವೊಂದರಲ್ಲಿ ಹಿಂದೂ ಹುಡುಗಿಯೊಂದಿಗೆ “ಲೈಂಗಿಕ ಭಂಗಿಯಲ್ಲಿ ಇದ್ದ” ಎಂಬ ಕಾರಣಕ್ಕೆ ಉದ್ರಿಕ್ತ ಸಮೂಹದಿಂದ ಚಚ್ಚಿ ಸಾಯಿಸಲ್ಪಡಲಿದ್ದ ಮುಸ್ಲಿಂ ಯುವಕನೋರ್ವನ ಜೀವವನ್ನು ಉಳಿಸಿದ ಸಿಕ್ಖ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗಗನ್‌ದೀಪ್ ಸಿಂಗ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿ ವಸ್ತುತಃ ಹೀರೋ ಆಗಿದ್ದಾರೆ.
ಉದ್ರಿಕ್ತ ಗುಂಪಿನಿಂದ ಚಚ್ಚಿ ಸಾಯಿಸಲ್ಪಡಲಿದ್ದ ಮುಸ್ಲಿಂ ಯುವಕನ ಜೀವ ಉಳಿಸುವಲ್ಲಿ ಗಗನ್‌ದೀಪ್ ಸಿಂಗ್ ಅವರು ತೋರಿರುವ ಧೈರ್ಯ, ಸಾಹಸದ ವಿಡಿಯೋ ಚಿತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲೀಗ ವೈರಲ್ ಆಗಿದೆ; ಅಂತೆಯೇ ಎಲ್ಲರೂ ಅವರನ್ನು ಹೀರೋ ಆಗಿ ಪ್ರಶಂಸಿಸುತ್ತಿದ್ದಾರೆ.
ಹಿಂದೂ ಹುಡುಗಿ ಮತ್ತು ಮುಸ್ಲಿಂ ಹುಡುಗ ಪರಸ್ಪರರನ್ನು ಭೇಟಿಯಾಗಲು ರಾಮನಗರದ ದೇವಸ್ಥಾನಕ್ಕೆ ಹೋಗಿದ್ದರು. ಆ ಸುದ್ದಿ ಸ್ಥಳೀಯರಿಗೆ ಗೊತ್ತಾಗಿ ಈ ಜೋಡಿಗೆ “ಸರಿಯಾಗಿ ಪಾಠ ಕಲಿಸಬೇಕು” ಎಂಬ ಕಾರಣಕ್ಕೆ ಗುಂಪೊಂದು ದೇವಸ್ಥಾನದೆಡೆಗೆ ಸಾಗಿತ್ತು. ಎಸ್‌ಐ ಗಗನ್‌ದೀಪ್ ಸಿಂಗ್ ಅವರಿಗೆ ಈ ಬಗ್ಗೆ ಯಾರೋ ಮಾಹಿತಿ ತಲುಪಿಸಿದ್ದರು. ಸಿಂಗ್ ಅವರು ಕೂಡಲೇ ದೇವಸ್ಥಾನದತ್ತ ಧಾವಿಸಿದರು. ಅದಾಗಲೇ ಉದ್ರಿಕ್ತ ಗುಂಪು ಯುವ ಪ್ರೇಮಿಗಳನ್ನು ಸುತ್ತುವರಿದಿತ್ತು.
ಆಗ ಧೈರ್ಯ, ಸಾಹಸದಿಂದ ಮುನ್ನುಗ್ಗಿದ ಎಸ್‌ಐ ಸಿಂಗ್ ಯುವಕನ ಮೇಲೆ ಬೀಳುತ್ತಿದ್ದ ಉದ್ರಿಕ್ತರ ಹೊಡೆತಗಳಿಗೆ ತಮ್ಮನ್ನೇ ಒಡ್ಡಿಕೊಂಡರು. ಉದ್ರಿಕ್ತರ ಪ್ರಹಾರಗಳನ್ನು ಸಹಿಸಿಕೊಂಡೂ ಯುವ ಜೋಡಿ ರಕ್ಷಿಸುವಲ್ಲಿ ಅವರು ಯಶಸ್ವಿಯಾದರು. ಬಳಿಕ ಅವರು ಜೋಡಿಯನ್ನು ಪೊಲೀಸ್ ರಕ್ಷಣೆಯಲ್ಲಿ ಠಾಣೆಗೆ ಒಯ್ದರು. ಅನಂತರ ಹುಡುಗ ಮತ್ತು ಹುಡುಗಿಯನ್ನು ಹೆತ್ತವರ ವಶಕ್ಕೆ ಒಪ್ಪಿಸಿದರು.
ಈ ಇಡಿಯ ಪ್ರಹಸನ ವಿಡಿಯೋದಲ್ಲಿ ದಾಖಲಾಗಿದ್ದು ಅದರಲ್ಲಿ ಸ್ಪಷ್ಟವಾಗಿ ಕಂಡು ಬಂದಿರುವ ಐವರು ಹಲ್ಲೆಕೋರರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ತಲೆಮರೆಸಿಕೊಂಡಿರುವ ಆ ಐವರಿಗಾಗಿ ಪೊಲೀಸರಿಗೆ ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಧೈರ್ಯ, ಸಾಹಸ ಮೆರೆದು ಮುಸ್ಲಿಂ ಯುವಕ ಮತ್ತು ಹಿಂದೂ ಹುಡುಗಿಯನ್ನು ರಕ್ಷಿಸಿದ ಎಸ್‌ಐ ಗಗನ್‌ದೀಪ್ ಗೆ ಪೊಲೀಸ್ ಇಲಾಖೆ 2,500 ರೂ. ಇನಾಮು ನೀಡಿ ಗೌರವಿಸಿದೆ.