Advertisement

ಉತ್ತರಾಖಾಂಡದ ಬಾಗೇಶ್ವರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ವಿಚಿತ್ರ ಸಮಸ್ಯೆ !

08:39 AM Jul 30, 2022 | Team Udayavani |

ಡೆಹ್ರಾಡೂನ್‌: ಇದ್ದಕ್ಕಿದ್ದಂತೆ ವಿದ್ಯಾರ್ಥಿನಿಯರೆಲ್ಲರೂ ಅಳುವುದಕ್ಕೆ ಆರಂಭಿಸುತ್ತಾರೆ. ಕೆಲವರಂತೂ ತಲೆ ಚಚ್ಚಿಕೊಂಡು, ಬಿದ್ದು, ಒದ್ದಾಡಿ ಬಿಡುತ್ತಾರೆ. ಇಂತದ್ದೊಂದು ವಿಚಿತ್ರ ಘಟನೆಗೆ ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ಸರ್ಕಾರಿ ಶಾಲೆ ಸಾಕ್ಷಿಯಾಗಿದೆ.

Advertisement

“ಮಂಗಳವಾರ ಮೊದಲನೇ ಬಾರಿಗೆ ಹಲವು ವಿದ್ಯಾರ್ಥಿನಿಯರು ಹಾಗೂ ಕೆಲ ವಿದ್ಯಾರ್ಥಿಗಳಲ್ಲಿ ಈ ರೀತಿಯ ಏಕಾಏಕಿ ಬದಲಾವಣೆ ಕಂಡುಬಂದಿತು. ಈ ವಿಚಾರವನ್ನು ಪೋಷಕರಿಗೆ ತಿಳಿಸಿದ ತಕ್ಷಣ, ಅವರು ಪೂಜಾರಿ ಒಬ್ಬರನ್ನು ಕರೆದುಕೊಂಡು ಬಂದು ವಿದ್ಯಾರ್ಥಿಗಳು ಸುಮ್ಮನಾಗುವಂತೆ ಮಾಡಿದರು. ಇತ್ತೀಚೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಶೀಲನೆಗೆ ಬಂದಾಗಲೂ ಅದೇ ರೀತಿ ಸಮಸ್ಯೆಯಾಗಿದೆ’ ಎಂದು ಹೇಳಿದ್ದಾರೆ ಶಾಲೆಯ ಶಿಕ್ಷಕಿ ವಿಮಲಾ ದೇವಿ. ಶಾಲೆಗೆ ಋಣಾತ್ಮಕ ಶಕ್ತಿ ಸೇರಿಕೊಂಡಿದ್ದು, ಅದನ್ನು ಪೂಜೆ ಮಾಡಿ ಸರಿಮಾಡಬೇಕು ಎನ್ನಲಾರಂಭಿಸಿದ್ದಾರೆ ಪೋಷಕರು.

ಈ ವಿಚಾರವಾಗಿ ಮಾನೋರೋಗ ಶಾಸ್ತ್ರಜ್ಞರನ್ನೂ ಸಂಪರ್ಕಿಸಲಾಗಿದ್ದು, ಅವರು ಈ ಪ್ರಕರಣವನ್ನು “ಸಾಮೂಹಿಕ ಹಿಸ್ಟೇರಿಯಾ’ ಎಂದು ಕರೆದಿದ್ದಾರೆ. ಗುಡ್ಡಗಾಡು ಪ್ರದೇಶವಾಗಿರುವ ಇಲ್ಲಿ ದೇವರು-ದೆವ್ವಗಳ ಬಗ್ಗೆ ಹೆಚ್ಚು ನಂಬಿಕೆ ಮತ್ತು ಆಚಾರಗಳಿದ್ದು, ಪೂಜಾರಿ ಬಂದು ಪೂಜೆ ಮಾಡಿದಾಕ್ಷಣ ಸರಿಯಾಗುತ್ತದೆಯೆಂಬ ವಿಚಾರ ಮಕ್ಕಳಲ್ಲಿ ಮೂಡಿಬಿಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯರೂ ಇದನ್ನು ಹಿಸ್ಟೀರಿಯಾ ಎಂದೇ ಹೇಳಿದ್ದು, ಈ ಹಿಂದೆ ಜಿಲ್ಲೆಯ ಬೇರೆ ಬೇರೆ ಶಾಲೆಗಳಲ್ಲಿ ಇದೇ ರೀತಿ ಪ್ರಕರಣ ಉಂಟಾಗಿತ್ತು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next