ನವದೆಹಲಿ: ಕೋವಿಡ್ 19 ಸೋಂಕು ಪ್ರಕರಣ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತರಾಖಂಡ್ ಸರ್ಕಾರ ಲಾಕ್ ಡೌನ್ ಅನ್ನು ಜುಲೈ 20ರವರೆಗೆ ವಿಸ್ತರಿಸಿರುವುದಾಗಿ ಘೋಷಿಸಿದೆ. ಮದುವೆ ಮತ್ತು ಅಂತ್ಯಸಂಸ್ಕಾರ ಕಾರ್ಯಕ್ರಗಳಿಗೆ ಕೇವಲ 50 ಜನರು ಭಾಗವಹಿಸಬಹುದಾಗಿದೆ ಎಂದು ನಿರ್ಬಂಧ ವಿಧಿಸಿದೆ.
ಇದನ್ನೂ ಓದಿ:ಮತ್ತೆ ಕಾಂಗ್ರೆಸ್ ಕಡೆ ಮುಖಮಾಡಿದ ಎಂ.ಸಿ.ಸುಧಾಕರ್?
ಪ್ರಸಿದ್ಧ ಪ್ರವಾಸಿ ತಾಣವಾದ ಮುಸ್ಸೋರಿ ಮತ್ತು ನೈನಿತಾಲ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಇದರಿಂದ ಕೋವಿಡ್ 3ನೇ ಅಲೆ ಕ್ಷಿಪ್ರವಾಗಿ ಹರಡಬಹುದು ಎಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಹರಿದ್ವಾರದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗಿರುವುದಕ್ಕೆ ಸಾಕ್ಷಿಯಾಗಿದ್ದು, ಈ ನಿಟ್ಟಿನಲ್ಲಿ ಜನರ ಸುರಕ್ಷತೆಯ ನೆಲೆಯಲ್ಲಿ ಮುಂಬರುವ ಕನ್ವರ್ ಯಾತ್ರೆಯನ್ನು ರದ್ದುಗೊಳಿಸುವಂತೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಲ್ಲಿ ಮನವಿ ಮಾಡಿಕೊಂಡಿರುವುದಾಗಿ ವಿವರಿಸಿದೆ.
ಕನ್ವರ್ ಯಾತ್ರೆ ಜನರ ಧಾರ್ಮಿಕ ಭಾವನೆಯಾಗಿದ್ದು, ಜನರ ಪ್ರಾಣವನ್ನು ಕಾಪಾಡುವಲ್ಲಿ ಸರ್ಕಾರ ಪ್ರಮುಖ ಪಾತ್ರವಹಿಸಬೇಕು. ಹೀಗಾಗಿ ಅಪಾರ ಪ್ರಮಾಣದ ಜನಸೇರುವ ಯಾತ್ರೆಯನ್ನು ರದ್ದುಪಡಿಸುವಂತೆ ಐಎಂಎ ಮುಖ್ಯಮಂತ್ರಿ ಪುಷ್ಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿರುವುದಾಗಿ ವರದಿ ಹೇಳಿದೆ.