ಕಲಬುರಗಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಕರೆ ನೀಡಲಾಗಿರುವ ಹೋರಾಟಕ್ಕೆ ಬೆಂಬಲಿಸಿ ಹಾಗೂ ವಿರೋಧಿಸಿ ಪ್ರತಿಭಟನೆ ನಡೆಸಿದ ಹೋರಾಟಗಾರರನ್ನು ಬಂಧಿಸಿ, ತದನಂತರ ಬಿಡುಗಡೆ ಮಾಡಲಾಯಿತು.
ಇನ್ನು ಕೆಲವರು ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ ಕರ್ನಾಟಕ ಮುಂತಾದ ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕ ರಾಜ್ಯ ವಿರೋಧಿಸಿ ಹಾಗೂ ಡಾ| ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದಾಗ ಪೊಲೀಸರು ಬಂಧಿಸಿದರು.
ಕರವೇ ಜಿಲ್ಲಾಧ್ಯಕ್ಷ ಮಹೇಶ ಕಾಶಿ, ಕಾಶೀನಾಥ ಮಂದೇವಾಲ್, ಕಲ್ಯಾಣಿ ತಳವಾರ್, ಅಶೋಕ್ ಭೀಮಳ್ಳಿ, ಲಕ್ಷ್ಮೀಕಾಂತ್ ಬಿದನೂರ್, ಮಲ್ಲಿಕಾರ್ಜುನ, ಚಂದ್ರಕಾಂತ ಗುತ್ತೇದಾರ, ಮಚೇಂದ್ರ ರೆಡ್ಡಿ, ಸಾಬಣ್ಣ ಬಶೆಟ್ಟಿ, ಶೇಖ್ ಬಬಲು, ಸಿದ್ದಣಗೌಡ ಮಾಲಿಪಾಟೀಲ, ರಾಜು ನಾಟೀಕಾರ್, ಕನ್ನಡ ಸೇನೆ ಕರ್ನಾಟಕ ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೋಮನಾಥ ಕಟ್ಟಿಮನಿ, ರಾಕೇಶ್ ಕಟ್ಟಿಮನಿ ಮುಂತಾದವರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದರು.
ಮಹಿಳೆಯರ ಪ್ರತಿಭಟನೆ: ಪ್ರತ್ಯೇಕ ರಾಜ್ಯ ಕೊಡುವುದೇ ಆದಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಕೊಡಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜನಜಾಗೃತಿ ಹೋರಾಟ ಸಮಿತಿ ಮಹಿಳಾ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಬಂದ್ ಕರೆಗೆ ಬೆಂಬಲಿಸಲಾಗುವುದು ಎಂದು ಕರುನಾಡ ಸಮಿತಿ ಜಿಲ್ಲಾಧ್ಯಕ್ಷ ಪಾಶಾಮಿಯಾ ಹೀರಾಪುರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದಾಗ ಪೊಲೀಸರು ಮುಖಂಡರಾದ ಮಹಾದೇವ
ಮಾನೆ, ಹಣಮಂತರಾಯ್ ಮೇಳಕುಂದಿ, ಪ್ರಸಾದ್ ಜೋಶಿ, ಹಿಸಾಮುದ್ದಿನ್, ಕೃಷ್ಣಾ ಮುಂತಾದ ಹೋರಾಟಗಾರರನ್ನು ಬಂಧಿಸಿದರು. ಅದೇ ರೀತಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎ.ಎಸ್. ಭದ್ರಶೆಟ್ಟಿ ನೇತೃತ್ವದ ಪ್ರತಿಭಟನೆಕಾರರನ್ನು ಬಂಧಿಸಲಾಯಿತು.
ಬಂದ್ ಪರ ಹಾಗೂ ವಿರೋಧದ ಹೋರಾಟದ ಹಿನ್ನೆಲೆಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹೋರಾಟದ ಬಂದೋಬಸ್ತ್ನಿ ರ್ವಹಿಸಿದರು.