ದಾಂಡೇಲಿ : ಹಿಂದೂ ಧರ್ಮಿಯರ ಸಂಭ್ರಮ, ಸಡಗರದ ಹಬ್ಬಗಳಲ್ಲಿ ಅಗ್ರಣೀಯ ಸ್ಥಾನದಲ್ಲಿರುವ ಚೌತಿ ಹಬ್ಬವನ್ನು ದಾಂಡೇಲಿಯ ಹಿಂದೂ ಬಾಂಧವರ ಮನೆ ಮನೆಗಳಲ್ಲಿ ಶೃದ್ದಾಭಕ್ತಿಯಿಂದ ಆಚರಿಸಲಾಗುತ್ತಿದೆ. ನಗರದ ಬಹುತೇಕ ಹಿಂದು ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜಿಸುತ್ತಾರೆ. ಗಣೇಶನ ಪ್ರತಿಷ್ಟಾಪನೆಯ ಬಳಿಕ ವಿವಿಧ ಪೂಜೆಗಳ ಜೊತೆಗೆ ಭಜನೆ, ಗುಮುಟೆ ಭಜನೆಯನ್ನು ಹಮ್ಮಿಕೊಳ್ಳಲಾಗುತ್ತದೆ.
ನಗರದ ಗಾಂಧಿನಗರದಲ್ಲಿರುವ ನಗರ ಸಭೆಯ ಉತ್ಸಾಹಿ ಅಧಿಕಾರಿ ಬಾಳು ಗವಸ ಅವರ ಮನೆಯಲ್ಲಿ ಗಣೇಶ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಇಲ್ಲಿ ಪುಗುಡಿ ನೃತ್ಯದ ಮೂಲಕ ಗಣಪತಿಯನ್ನು ಆರಾಧನೆ ಮಾಡಲಾಗುತ್ತಿರುವುದು ವಿಶೇಷ.
ಮಹಾರಾಷ್ಟ್ರದ ಜನಪದ ಕಲೆಯಾದ ಪುಗುಡಿ ನೃತ್ಯವನ್ನು ಮರಾಠಾ ಸಮುದಾಯದವರು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಇಲ್ಲಿ ಮಂಗಳವಾರ ರಾತ್ರಿ ಬಾಳು ಗವಸ ಅವರ ತಾಯಿ ಯಶೋಧಾ ಗವಾಸ್, ಸಾವಿತ್ರಿ ಗವಾಸ್ ಹಾಗೂ ಶಕುಂತಲಾ ಉಪ್ಪಾರ್ ಅವರುಗಳು ಸೇರಿ ಪುಗಡಿ ನೃತ್ಯದ ಮೂಲಕ ಗಣೇಶನ ಆರಾಧನೆಯಲ್ಲಿ ತಮ್ಮನ್ನು ತಾವು ಭಕ್ತಿಭಾವದಿಂದ ತೊಡಗಿಸಿಕೊಂಡರು. ಮಣ್ಣಿನ ಕೊಡಗಳ ಮೂಲಕ ಪುಗಡಿ ನೃತ್ಯ ಮಾಡಲಾಗುತ್ತಿದೆಯಾದರೂ ಇತ್ತೀಚಿನ ದಿನಗಳಲ್ಲಿ ಮಣ್ಣಿನ ಕೊಡಗಳ ಅಭಾವವಿರುವುದರಿಂದ ಅನಾಧಿಕಾಲದಿಂದ ಬಂದ ಜನಪದ ಕಲೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯವ ದೃಷ್ಟಿಯಿಂದ ಈ ನೃತ್ಯವನ್ನು ಭಕ್ತಿಯಿಂದ ಮಾಡಿಕೊಂಡು ಬರಲಾಗುತ್ತಿರುವುದು ಇಲ್ಲಿಯ ವಿಶೇಷ.
ಇದನ್ನೂ ಓದಿ :ಮಾನವ ರೂಪಿ ತಂತ್ರಜ್ಞಾನ, ನೀರಾವರಿ ಸೌಕರ್ಯಗಳ ಮಾಸ್ಟರ್ ಮೈಂಡ್ ಸರ್. ಎಂ. ವಿಶ್ವೇಶ್ವರಯ್ಯ
ಈ ನೃತ್ಯವನ್ನು ನೋಡಲು ಸ್ಥಳೀಯರು ಸಹ ಆಗಮಿಸಿದ್ದರು. ಪುಗಡಿ ನೃತ್ಯ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಬಾಳು ಗವಾಸ, ಪ್ರದೀಪ ಗವಸ, ಪ್ರಿಯಾ ಗವಾಸ್, ವೈಶಾಲಿ ಗವಾಸ್ ಹಾಗೂ ಗವಾಸ್ ಕುಟುಂಬಸ್ಥರ ಸಹಕಾರದಲ್ಲಿ ವಿಜೃಂಭಣೆಯಿಂದ ಜರುಗಿತು.