ಉತ್ತರಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದೇ ಕಾರಣಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಪ್ರಸಕ್ತ ಚುನಾವಣೆಯಲ್ಲಿ ಈ ನಿರ್ಲಕ್ಷಿತ ವರ್ಗದತ್ತ ಗಮನ ನೆಟ್ಟಿವೆ. ಪ್ರಮುಖ ಪಕ್ಷಗಳಾದ ಬಿಜೆಪಿ, ಎಸ್‌ಪಿ ಹಾಗೂ ಕಾಂಗ್ರೆಸ್‌ನ ಪ್ರಣಾಳಿಕೆಗಳತ್ತ ಒಮ್ಮೆ ಕಣ್ಣುಹಾಯಿಸಿದರೂ “ಮಹಿಳಾ ಮತಗಳ ಬೇಟೆ’ಗೆ ನಡೆಸಿದ ಯತ್ನಗಳು ಕಣ್ಣಿಗೆ ರಾಚುತ್ತವೆ.
ಹಿಂದಿ ಹಾರ್ಟ್‌ಲ್ಯಾಂಡ್‌ನಲ್ಲಿ ಕಳೆದುಕೊಂಡಿರುವ ನೆಲೆಯನ್ನು ಮರುಸ್ಥಾಪಿಸಲು ಹೆಣಗಾಡುತ್ತಿರುವ ಕಾಂಗ್ರೆಸ್, ಮಹಿಳಾ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟುಕೊಂಡು ಹೊಸ ಪ್ರಯೋಗ ಮಾಡಲು ಹೊರಟಿದೆ. ಅದರಂತೆ, ಮಹಿಳೆಯರಿಗೆ ಶೇ.40ರಷ್ಟು ಟಿಕೆಟ್ ಅನ್ನೂ ನೀಡಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಮಹಿಳೆ ಯರಿಗೆ ಸಂಬಂಧಿಸಿದ ವಿಚಾರಗಳನ್ನೇ ಮುಂದಿಟ್ಟು ಕೊಂಡು ಪ್ರಚಾರ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಅವರು ಟೀಕಾಕಾರರಿಗೆ ಬಾಲಿವುಡ್ ಸಿನೆಮಾ “ದೀವಾರ್’ನ ಡೈಲಾಗ್ ನೆನಪಿಸುತ್ತಾ, “ಮೇರೇ ಪಾಸ್ ಬೆಹೆನ್ ಹೇ’ (ನನ್ನೊಂದಿಗೆ ನನ್ನ ಸಹೋದರಿಯರಿದ್ದಾರೆ) ಎಂದು ಹೇಳಿದ್ದರು. ಕಾಂಗ್ರೆಸ್‌ನ ಪಿಂಕ್ ಮ್ಯಾನಿಫೆಸ್ಟೋ (ಗುಲಾಬಿ ಪ್ರಣಾಳಿಕೆ)ದಲ್ಲಿ ಮಹಿಳೆಯರಿಗೆ ಸರಕಾರಿ ಉದ್ಯೋಗಿಗಳಲ್ಲಿ ಶೇ. 40 ಮೀಸಲಾತಿ, ಆಶಾ ಕಾರ್ಯಕರ್ತೆಯರ ಗೌರವಧನ 10,000ರೂ.ಗೆ ಏರಿಕೆ ಸೇರಿ ಹಲವು ಘೋಷಣೆಗಳನ್ನು ಮಾಡಿದೆ. “ಲಡ್ಕಿ ಹೂಂ, ಲಡ್ ಸಕ್ತೀ ಹೂಂ’ ಸ್ಲೋಗನ್ ರಾಜ್ಯಾದ್ಯಂತ ಹೆಣ್ಣು ಮಕ್ಕಳನ್ನು ಆಕರ್ಷಿಸಿದೆ. ಝಾನ್ಸಿ, ಬುಂದೇಲ್ ಖಂಡ್‌ನಲ್ಲಿ ನಡೆಸಿದ ಮ್ಯಾರಥಾನ್‌ನಲ್ಲಿ ಭಾರೀ ಸಂಖ್ಯೆಯ ಯುವತಿಯರು ಪಾಲ್ಗೊಂಡಿದ್ದು ಕೂಡ ಇದಕ್ಕೆ ಸಾಕ್ಷಿ.
ಇನ್ನು, ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಕಳೆದ ಡಿ.21ರಂದು ಪ್ರಧಾನಿ ನರೇಂದ್ರ ಮೋದಿ ಸ್ವಸಹಾಯ ಸಂಘಗಳ ಬ್ಯಾಂಕ್ ಖಾತೆಗೆ 1 ಸಾವಿರ ಕೋಟಿ ರೂ. ವರ್ಗಾಯಿಸಿ ದ್ದರು. ಇದರಿಂದ ಸುಮಾರು 16 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದೂ ಹೇಳಿದ್ದರು. ಪ್ರಯಾಗ್‌ರಾಜ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 2 ಲಕ್ಷ ಮಹಿಳೆಯರು ಪಾಲ್ಗೊಂಡಿದ್ದರು. ಇದಲ್ಲದೇ ಕೇಂದ್ರ ಸರಕಾರದ ಉಜ್ವಲ ಯೋಜನೆ, ಉಚಿತ ಪಡಿತರ ವಿತರಣೆ, ನಗದು ವರ್ಗಾವಣೆ, ಆಯುಷ್ಮಾನ್ ಭಾರತ್, ಆವಾಸ್ ಯೋಜನೆ ಮತ್ತಿತರ ಕಾರ್ಯಕ್ರಮಗಳನ್ನು ಮಹಿಳಾ ಸಶಕ್ತೀಕರಣದ ಉದ್ದೇಶದಿಂದಲೇ ಜಾರಿ ಮಾಡಲಾಗಿದೆ ಎಂದು ಬಿಜೆಪಿ ಬಿಂಬಿಸಿದೆ. ಪ್ರಣಾಳಿಕೆಯಲ್ಲೂ 3 ಸಾವಿರ ಪಿಂಕ್ ಪೊಲೀಸ್ ಬೂತ್ ಸ್ಥಾಪನೆ, “ಮಿಷನ್ ಪಿಂಕ್ ಟಾಯ್ಲೆಟ್’ ಯೋಜನೆ, 2 ಉಚಿತ ಎಲ್‌ಪಿಜಿ ಸಿಲಿಂಡರ್, 60 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರಯಾಣ ಉಚಿತ ಮತ್ತಿತರ ಜನಪ್ರಿಯ ಭರವಸೆಗಳನ್ನು ನೀಡಿದೆ.
ಪ್ರಮುಖ ವಿಪಕ್ಷ ಸಮಾಜವಾದಿ ಪಕ್ಷ, “ನಯೀ ಹವಾ ಹೇ, ನಯೀ ಸಪಾ ಹೇ’ ಎಂಬ ಹೊಸ ಟ್ಯಾಗ್ ಲೈನ್‌ನೊಂದಿಗೆ ಸ್ತ್ರೀಯರನ್ನು ಓಲೈಸುವ ಪ್ರಯತ್ನ ನಡೆಸಿದೆ. ಈವರೆಗೆ ಎಂ-ವೈ(ಮುಸ್ಲಿಂ-ಯಾದವ್) ಎಂದು ಗುರುತಿಸಿಕೊಳ್ಳುತ್ತಿದ್ದ ಎಸ್ಪಿ, ಈ ಬಾರಿ “ಎಂ-ವೈ’ ಎಂದರೆ “ಮಹಿಳೆ ಮತ್ತು ಯುವಜನತೆ’ ಎಂದು ಹೇಳಿಕೊಂಡಿದೆ. ಪ್ರಣಾಳಿಕೆಯಲ್ಲಿ ಸರಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, 12ನೇ ತರಗತಿ ಪಾಸಾದ ಹೆಣ್ಣುಮಕ್ಕಳಿಗೆ 36,000 ರೂ. ಸಹಾಯಧನ ಘೋಷಿಸಿದೆ.
ಆದರೆ ಬಿಎಸ್ಪಿ ಮಾತ್ರ ಈ ವಿಚಾರದಲ್ಲೂ “ಮೌನ’ಕ್ಕೆ ಶರಣಾಗಿದೆ. ಮಹಿಳಾ ಮತದಾರರನ್ನು ಒಗ್ಗೂಡಿಸುವ ಅಥವಾ ಸೆಳೆಯುವ ನಿಟ್ಟಿನಲ್ಲಿ ಹೇಳಿಕೊಳ್ಳುವಂಥ ಯಾವುದೇ ಹೆಜ್ಜೆ ಇಟ್ಟಿಲ್ಲ.
ಹೇಗಿದೆ ಸ್ತ್ರೀ ಶಕ್ತಿ?
ಉ.ಪ್ರದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರ್ಪಡೆಯಾಗಿದ್ದಾ ರೆ. ಪರಿಣಾಮವೆಂಬಂತೆ ಪಟ್ಟಿಯಲ್ಲಿನ ಲಿಂಗಾನುಪಾತ 11 ಅಂಕಗಳಷ್ಟು ಸುಧಾರಣೆ ಕಂಡಿದೆ. 2021ರ ನ. 1ರಂದು ಪ್ರತಿ 1,000 ಪುರುಷರಿಗೆ 857 ಮಹಿಳಾ ಮತದಾರರಿದ್ದರು. ಆದರೆ ಡಿ. 5ರ ವೇಳೆಗೆ ಮಹಿಳೆಯರ ಸಂಖ್ಯೆ 868ಕ್ಕೇರಿದೆ. ಚುನಾವಣ ಆಯೋಗದ ಮಾಹಿತಿ ಪ್ರಕಾರ, ಉ.ಪ್ರದೇಶದಲ್ಲಿ 8.04 ಕೋಟಿ ಪುರುಷ ಮತದಾರರಿದ್ದರೆ, 6.98 ಕೋಟಿ ಮಹಿಳಾ ಮತದಾರರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ದಾಖಲೆಯ 40 ಮಹಿಳೆಯರು ಅಸೆಂಬ್ಲಿ ಪ್ರವೇಶಿಸಿದ್ದರು. ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಒಟ್ಟಾರೆ 96 ಮಹಿಳೆಯರಿಗೆ ಟಿಕೆಟ್ ಸಿಕ್ಕಿತ್ತು. ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಮತ್ತು ಅಪ್ನಾ ದಳದ 35 ಮಹಿಳೆಯರು ಚುನಾಯಿತರಾಗಿದ್ದರೆ, ಕಾಂಗ್ರೆಸ್ ಮತ್ತು ಬಿಎಸ್ಪಿಯ ತಲಾ ಇಬ್ಬರು, ಎಸ್ಪಿಯ ಒಬ್ಬ ಮಹಿಳಾ ಅಭ್ಯರ್ಥಿ ವಿಧಾನಸಭೆ ಮೆಟ್ಟಿಲು ಹತ್ತಿದ್ದರು. ಒಟ್ಟಿನಲ್ಲಿ ಯುಪಿ ಚುನಾವಣೆಯಲ್ಲಿ ಮಹಿಳಾ ಕೇಂದ್ರಿತ ಪ್ರಚಾರವು ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು.