ಪಣಜಿ: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪಣಜಿ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಫರ್ಧಿಸುವುದಾಗಿ ಗೋವಾ ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ಪರ್ರಿಕರ್ ಪುತ್ರ ಉತ್ಪಲ್ ಪರ್ರಿಕರ್ ಶುಕ್ರವಾರ ಘೋಷಿಸಿದ್ದಾರೆ.
ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಭವಿಷ್ಯದ ಕುರಿತು ರಾಜ್ಯದ ಜನತೆ ನಿರ್ಧರಿಸಲಿದ್ದಾರೆ. ಕೇವಲ ಮನೋಹರ್ ಪರ್ರಿಕರ್ ರವರ ತತ್ವ ಸಿದ್ಧಾಂತಗಳನ್ನು ಮುಂದುವರೆಸಿಕೊಂಡು ಹೋಗಲು ನಾನು ಪಣಜಿ ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದೇನೆ ಎಂದರು.
ಪಣಜಿ ಕ್ಷೇತ್ರದ ಹಾಲಿ ಬಿಜೆಪಿಯ ಉಮೇದುವಾರರ ಬಗ್ಗೆ ಮಾತನಾಡುವುದು ಕೂಡ ನಾಚಿಕೆಗೇಡಿನ ಸಂಗತಿ. ನನಗೆ ಬೇರೆ ಪಕ್ಷಗಳಿಗೆ ಹೋಗುವ ಯೋಚನೆಯೂ ಇಲ್ಲ ಎಂದರು.
ನನಗೆ ಹಲವು ರಾಜಕೀಯ ಪಕ್ಷಗಳು ಆಫರ್ ನೀಡಿವೆ. ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ತಂದೆಯವರೊಂದಿಗೆ ಕೆಲಸ ಮಾಡಿದವರಿಗಾಗಿ ನಾನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಫರ್ಧಿಸುತ್ತಿದ್ದೇನೆ. ನನ್ನ ತಂದೆ ಗೋವಾದ ರಾಜಕೀಯದಲ್ಲಿ ಸಕ್ರೀಯವಾಗಿದ್ದಾಗ ಗೋವಾದ ಜನರಿಗಾಗಿ ದುಡಿದಿದ್ದರು. ನನ್ನ ತಂದೆಗೂ ಮತ್ತು ರಾಜ್ಯದ ಜನೆತೆಗೂ ಅವಿನಾಭಾವ ಸಂಬಂಧವಿತ್ತು ಎಂದರು.
ಪಣಜಿ ಕ್ಷೇತ್ರದದಿಂದ ಕಳೆದ ಸುಮಾರು 25 ವರ್ಷಗಳಿಂದ ಮನೋಹರ್ ಪರ್ರಿಕರ್ ಸ್ಫರ್ಧಿಸಿ ಸತತ ಜಯಗಳಿಸಿದ್ದರು. ಈ ಕ್ಷೇತ್ರದಿಂದ ಪ್ರಸಕ್ತ ಚುನಾವಣೆಯಲ್ಲಿ ಉತ್ಪಲ್ ಪರೀಕರ್ ಬಿಜೆಪಿಯಿಂದ ಸ್ಫರ್ಧಿಸುವ ಇಚ್ಛೆ ಹೊಂದಿದ್ದರು. ಆದರೆ ಬಿಜೆಪಿಯು ಹಾಲಿ ಶಾಸಕ ಬಾಬೂಶ್ ಮೊನ್ಸೆರಾತ್ ರವರಿಗೆ ಟಿಕೆಟ್ ನೀಡಿದೆ.