ಉಳ್ಳಾಲ: ದೇರಳಕಟ್ಟೆಯ ಕಾನಕೆರೆಯ ಬಾವಿಗಳಲ್ಲಿ ಕಂಡುಬಂದಿರುವ ತೈಲ ಮಿಶ್ರಿತ ನೀರನ್ನು ದೇಶದಲ್ಲಿರುವ ಉನ್ನತ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ವರದಿ ನೀಡುವಂತೆ ಎಂಆರ್‌ಪಿಎಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಮುಂದಿನ 15 ದಿನಗಳೊಳಗೆ ಬರುವ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಬೆಳ್ಮ ಗ್ರಾ.ಪಂ. ವ್ಯಾಪ್ತಿಯ ದೇರಳಕಟ್ಟೆ ಕಾನಕೆರೆ ಪ್ರದೇಶದಲ್ಲಿ ತೈಲದ ಅಂಶ ಕಂಡು ಬಂದಿರುವ ಬಾವಿಗಳ ನೀರನ್ನು ಪರಿಶೀಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸ್ಥಳದಲ್ಲಿ ತ್ಯಾಜ್ಯ ನೀರಿನ ಸಮಸ್ಯೆಯೂ ಅಧಿಕವಾಗಿದ್ದು, ಈ ಕುರಿತ ವರದಿಯನ್ನು ಜಿಲ್ಲಾಧಿಕಾರಿಗೆ ನೀಡುವಂತೆ ಪಂಚಾಯತ್ ಆಡಳಿತಕ್ಕೆ ಸೂಚಿಸಲಾಗಿದೆ. ಇದರಿಂದ ಸೊಳ್ಳೆ ಸಮಸ್ಯೆಯೂ ಅಧಿಕವಾಗಿರುವುದರಿಂದ ಆರೋಗ್ಯ ಕಾಪಾಡುವ ಸಲುವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ನೆಟ್ ಒದಗಿಸಲಾಗುವುದು. ಪ್ರದೇಶದಲ್ಲಿ ಸೀವೇಜ್ ಟ್ರೀಟ್‌ಮೆಂಟ್ ಪ್ಲಾಂಟ್ ಅನುಷ್ಠಾನಕ್ಕೆ ಪಂಚಾಯತ್, ಮಂಗಳೂರು ಮಹಾ ನಗರ ಪಾಲಿಕೆ ಜತೆಗೆ ಮಾತುಕತೆ ನಡೆಸಿ, ಸರಕಾರದಿಂದ ಸಿಗುವ 20 ಲಕ್ಷ ರೂ. ಅನುದಾನದಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು, ಹೆಚ್ಚು ವೆಚ್ಚ ಆದಲ್ಲಿ ಕಟ್ಟಡ ಮಾಲಕರು ಭರಿಸುವಂತೆ ತಿಳಿಸಿದರು.
ಸ್ಥಳದಲ್ಲಿ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಾಫ ಹರೇಕಳ, ಬೆಳ್ಮ ಗ್ರಾ.ಪಂ.ಅಧ್ಯಕ್ಷೆ ವಿಜಯಾ ಕೃಷ್ಣಪ್ಪ, ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಜೆಡಿಎಸ್ ಮುಖಂಡ ಅಝೀಝ್ ಮಲಾರ್, ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ರಾವ್, ಪಂ.ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ ಉಪಸ್ಥಿತರಿದ್ದರು.
ನೀರು ಖಾಲಿ ಮಾಡಲು ಆದೇಶ
ಮೊದಲ ಹಂತದಲ್ಲಿ ತೈಲ ಮಿಶ್ರಿತ ನೀರನ್ನು ಎನ್‌ಐಟಿಕೆಯ ವಿಜ್ಞಾನಿಗಳು ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಿದ್ದಾರೆ. ಬಳಿಕ ಈ ನೀರಿನ ಸ್ಯಾಂಪಲ್‌ಗಳನ್ನು ಎಂಆರ್‌ಪಿಎಲ್ ಮಾರ್ಗದರ್ಶನದಲ್ಲಿ ದೇಶದ ಉನ್ನತವಾದ ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಿದ್ದಾರೆ. ಇದರೊಂದಿಗೆ ತೈಲದ ಅಂಶ ಪತ್ತೆಯಾಗಿರುವ ಎಲ್ಲ ಬಾವಿಗಳ ನೀರನ್ನು ಖಾಲಿ ಮಾಡಲು ಪಂಚಾಯತ್‌ಗೆ ಆದೇಶಿಸಲಾಗಿದೆ. ಬಳಿಕ ಶೇಖರವಾಗುವ ನೀರನ್ನು ಮರು ಪರೀಕ್ಷೆ ನಡೆಸಲಾಗುವುದು. ಆ ವರೆಗೆ ಈ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಜಿ.ಪಂ. ಅಭಿಯಂತರಿಗೂ ಸ್ಥಳದಲ್ಲಿ ಕೊಳವೆಬಾವಿ ನಿರ್ಮಾಣಕ್ಕೆ ಜಾಗ ನೋಡು ವಂತೆ ಸೂಚಿಸಲಾಗಿದೆ ಎಂದರು.