ಮದ್ದೂರು: ಗ್ರಾಪಂಗಳಿಗೆ ಆಡಳಿತಾಧಿಕಾರಿಗಳಾಗಿ ನೇಮಕಗೊಂಡಿರುವ ತಾಲೂಕು ಮಟ್ಟದ ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು, ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ತಾಪಂ ಉಪಾಧ್ಯಕ್ಷ ಬಿ.ಎಂ.ರಘು ಅವರು ತಿಳಿಸಿದರು. ಪಟ್ಟಣದಲ್ಲಿ ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಯಾವುದೇ ರಾಜಕಾರಣಿಗಳಿಗೆ ಮಣೆ ಹಾಕದೇ, ಕರ್ತವ್ಯ ನಿರ್ವಹಿಸಿ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದರು.
ಕೆಲ ಅಧಿಕಾರಿಗಳು ಹೊರ ಜಿಲ್ಲೆಗಳಿಂದ ಆಗಮಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು, ಕರ್ತವ್ಯ ನಿರತ ಅಧಿಕಾರಿಗಳು ತಾಲೂಕು ಕೇಂದ್ರದಲ್ಲೇ ವಾಸ್ತವ್ಯವಿರುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿರಾಜು ಅವರಿಗೆ ಅಧ್ಯಕ್ಷೆ ಜಯಲಕ್ಷ್ಮಮ್ಮ ಸೂಚಿಸಿದರು.
ಡೀಸಿಗೆ ದೂರು: ತಾಪಂ ಇಒ ಮುನಿರಾಜು ಪ್ರತಿಕ್ರಿಯಿಸಿ, ಸರ್ಕಾರದ ಆದೇಶದನ್ವಯ ಯಾವೊಬ್ಬ ಅಧಿಕಾರಿಯೂ ಹೊರ ಜಿಲ್ಲೆಗಳಿಂದ ಆಗಮಿಸಬಾರದು. ಕೇಂದ್ರ ಸ್ಥಾನದಲ್ಲೇ ಹಾಜರಿದ್ದು, ಕೊರೊನಾ ನಿಯಂತ್ರಣಕ್ಕೆ ಸಹಕಾರ ನೀಡಬೇಕು. ತಪ್ಪಿದಲ್ಲಿ ಡೀಸಿಗೆ ಹೊರ ಜಿಲ್ಲೆಗಳಿಂದ ಆಗಮಿಸುವ ಅಧಿಕಾರಿಗಳ ವಿರುದ ದೂರು ನೀಡುವುದಾಗಿ ಹೇಳಿದರು.
ಕಾರ್ಮಿಕರಿಗೆ ಪ್ರೋತ್ಸಾಹಧನ: ಕಟ್ಟಡ ಕಾರ್ಮಿಕರ ಪ್ರೋತ್ಸಾಹ ಧನಕ್ಕೆ ಅರ್ಜಿಗಳು ಬಂದಿದ್ದು, ಈ ಸಂಬಂಧ ಪರಿಶೀಲನೆ ನಡೆಸಿ, ಡೀಸಿ ಅರ್ಹರ ಖಾತೆಗೆ ವರ್ಗಾವಣೆ ಮಾಡುವುದಾಗಿ ಕಾರ್ಮಿಕ ಇಲಾಖೆ ಅಧಿಕಾರಿ ಕಲ್ಪನಾ ಅವರು ತಿಳಿಸಿದರು. ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್, ಬಿಇಒ ಮಹದೇವ, ಅಧಿಕಾರಿಗಳಾದ ಶ್ರೀನಾಥ್, ಪ್ರದೀಪ್‌ಕುಮಾರ್, ಹನುಮೇಗೌಡ, ಸಿದ್ದರಾಜು, ಶಾಂತರಾಜು ಇದ್ದರು.