Advertisement

ನನೆಗುದಿಗೆ ನಿರಾಶ್ರಿತ ಕೇಂದ್ರ

09:36 AM Aug 07, 2020 | Suhan S |

ಬೆಂಗಳೂರು: ನಗರದಲ್ಲಿ ವಸತಿ ರಹಿತರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ನಗರದ ಏಳು ಭಾಗದಲ್ಲಿ ನಿರಾಶ್ರಿತ ಕೇಂದ್ರಗಳನ್ನು ಪ್ರಾರಂಭಿಸಲು ವರ್ಷಗಳ ಹಿಂದೆಯೇ ಪಾಲಿಕೆ ಯೋಜನೆ ರೂಪಿಸಿಕೊಂಡಿತ್ತು.

Advertisement

ಆದರೆ, ಉದ್ದೇಶಿತ ಕೇಂದ್ರಗಳಲ್ಲಿ ಇದುವರೆಗೆ ಉಪ್ಪಾರಪೇಟೆ ವ್ಯಾಪ್ತಿಯಲ್ಲಿನ ಒಂದು ಕೇಂದ್ರ ಮಾತ್ರ ಸೇವೆಗೆ ಮುಕ್ತವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ನಿರಾಶ್ರಿತ ಕೇಂದ್ರಗಳ ಕೊರತೆ ಇದೆ. ಇಷ್ಟಾದರೂ ಕೇಂದ್ರಗಳ ಸಂಖ್ಯೆ ಹೆಚ್ಚಿಸಲು ಪಾಲಿಕೆ ಮನಸ್ಸು ಮಾಡುತ್ತಿಲ್ಲ. ಕಳೆದ ವರ್ಷ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಗಳಲ್ಲೂ ಹಲವು ಸ್ವಯಂ ಸೇವಾ ಸಂಸ್ಥೆಗಳು ಸಮೀಕ್ಷೆ ನಡೆಸಿ, ಒಟ್ಟಾರೆ 4,246 ಜನ ನಿರ್ಗತಿಕರು ಇರುವುದಾಗಿ ವರದಿ ಸಲ್ಲಿಸಿದ್ದವು. ವರದಿಯಲ್ಲಿ ನಗರದಲ್ಲಿನ ನಿರ್ಗತಿಕ ಮಹಿಳೆಯರಿಗೆ ಪ್ರತ್ಯೇಕವಾಗಿ 16 ಹಾಗೂ ಎಂಟು ವಲಯದಲ್ಲಿ ನಿರ್ಗತಿಕರ ಸಂಖ್ಯೆಗೆ ಅನುಗುಣವಾಗಿ ಹೊಸದಾಗಿ 77 ಹೊಸ ನಿರ್ಗತಿಕರ ಕೇಂದ್ರವನ್ನು ಪ್ರಾರಂಭಿಸುವಂತೆ ಶಿಫಾರಸು ಮಾಡಿತ್ತು. ಆದರೆ, ಶಿಫಾರಸಿನ ಒಂದು ಅಂಶವೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ.

ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಪ್ರತಿ ಲಕ್ಷ ಜನಸಂಖ್ಯೆಗೆ 50 ಹಾಸಿಗೆಗಳ ಸಾಮರ್ಥ್ಯದ ಒಂದು ನಿರಾಶ್ರಿತ ಕೇಂದ್ರ ಸ್ಥಾಪಿಸಬೇಕು. ಆದರೆ, ನಗರದಲ್ಲಿ 1.30 ಕೋಟಿ ಜನಸಂಖ್ಯೆ ಇದ್ದರೂ, ಒಟ್ಟಾರೆ 737 ಹಾಸಿಗೆಗಳ ಕೇವಲ 10 ನಿರಾಶ್ರಿತ ಕೇಂದ್ರಗಳು ಇವೆ. ಸದ್ಯ ಇವುಗಳಲ್ಲಿ 195 ಜನ ನಿರ್ಗತಿಕರು (ಇತ್ತೀಚಿನ ವರೆಗೆ) ಇದ್ದಾರೆ. ಈ ಹತ್ತು ನಿರ್ಗತಿಕರ ಕೇಂದ್ರಗಳನ್ನೂ ಉತ್ತಮಪಡಿಸುವ ಕೆಲಸವಾಗಿಲ್ಲ.

ಆರು ಕೇಂದ್ರಗಳ ದುರಸ್ತಿಗೆ ವರ್ಷ ಬೇಕಾ?: ನಗರದ ಮೂರು ವಲಯದಲ್ಲಿ ಆರು ನಿರಾಶ್ರಿತ ಕೇಂದ್ರ ಪ್ರಾರಂಭಿಸಲು ಹೊಸದಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಬೇಕಿಲ್ಲ. ಈಗಾಗಲೇ ಇರುವ ಹಳೆಯ ಪಾಲಿಕೆ ಕಟ್ಟಡಗಳನ್ನೇ ನಿರ್ಗತಿಕರ ಕೇಂದ್ರದ ಬಳಕೆಗೆ ಅನುಗುಣವಾಗಿ ಬದಲಾಯಿಸಿ ಕೊಳ್ಳಬೇಕಿದೆ. ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಮುಗಿಸಿದರೂ, ಈ ನಿರ್ಗತಿಕರ ಕೇಂದ್ರಗಳು ಸೇವೆಗೆ ಮುಕ್ತವಾಗಲಿದೆ. ಈ ಮೂಲಕ ರಸ್ತೆ ಬದಿ ನಿದ್ರಿಸುವ ನೂರಾರು ಜನರಿಗೆ ಆಶ್ರಯತಾಣವಾಗಲಿದೆ. ಆದರೆ, ಪಾಲಿಕೆ ಅಧಿಕಾರಿಗಳು ಮಾತ್ರ ಈ ನಿಟ್ಟಿನಲ್ಲಿ ಮನಸ್ಸು ಮಾಡುತ್ತಿಲ್ಲ.

ಆರೂ ಕೇಂದ್ರ ನನೆಗುದಿಗೆ: ಏಳು ಉದ್ದೇಶಿತ ನಿರ್ಗತಿಕರ ಕೇಂದ್ರಗಳಲ್ಲಿ ಇದುವರೆಗೆ ಉಪ್ಪಾರಪೇಟೆಯ ಕೇಂದ್ರ ಮಾತ್ರ ಸೇವೆಗೆ ಮುಕ್ತವಾಗಿದೆ. ಉಳಿದ ಆರೂ ಕೇಂದ್ರಗಳ ದುರಸ್ತಿ ಕಾರ್ಯ ನನೆಗುದಿಗೆ ಬಿದ್ದಿದೆ. ಕ್ವಿನ್ಸ್‌ ರಸ್ತೆಯಲ್ಲಿ ಎರಡು, ಕುಂಬಾರಗುಂಡಿಯಲ್ಲಿ  ಮೂರು ಹಾಗೂ ಉಪ್ಪಾರಪೇಟೆಯಲ್ಲಿ ಒಂದು ಕೇಂದ್ರ ಸೇರಿ ಒಟ್ಟು ಆರು ನಿರ್ಗತಿಕರ ಕೇಂದ್ರ ದುರಸ್ತಿ ಯೋಜನೆಯನ್ನು ಪಾಲಿಕೆ ಒಂದು ವರ್ಷದ ಹಿಂದೆಯೇ  ರೂಪಿಸಿಕೊಂಡಿದೆ.

Advertisement

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರಾಶ್ರಿತ ಕೇಂದ್ರಗಳನ್ನು ಪ್ರಾರಂಭಿಸಲು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಜನಪ್ರತಿನಿಧಿಗಳ ಅಸಹಕಾರವೂ ಕಾರಣ ಎಂದು ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದರು.

ಉದ್ದೇಶಿತ ಕೇಂದ್ರ ಪ್ರಾರಂಭ ಮಾಡುವುದಕ್ಕೆ ಈಗಾಗಲೇ ಇರುವ ಕಟ್ಟಡವನ್ನು ದುರಸ್ತಿ ಮಾಡಿದರೆ ಸಾಕು. ಇದಕ್ಕೆ ಹೆಚ್ಚು ಸಮಯ ಮತ್ತು ಅನುದಾನವೂ ಬೇಕಾಗಿಲ್ಲ. ಇಷ್ಟಾದರೂ ಕೇಂದ್ರಗಳ ದುರಸ್ತಿ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಅಲ್ಲದೆ, ಹಲವು ಭಾಗಗಳಲ್ಲಿ ಕೆಲವು ಜನಪ್ರತಿನಿಧಿಗಳ ವಿರೋಧವೂ ವ್ಯಕ್ತವಾಗುತ್ತಿದೆ. ಸುತ್ತ ವಸತಿ ಪ್ರದೇಶವಿದ್ದು, ನಿರಾಶ್ರಿತ ಕೇಂದ್ರ ಬೇಡ ಎಂದೂ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಹಿನ್ನಡೆಯಾಗುತ್ತಿದೆ ಎಂದರು.

ಕೋವಿಡ್‌ ಕೇಂದ್ರಕ್ಕೆ ಅವಕಾಶ :  ನಗರದಲ್ಲಿ ಪಾಲಿಕೆ ಕೋವಿಡ್ ಆರೈಕೆ ಕೇಂದ್ರವನ್ನು ಪ್ರಾರಂಭಿಸುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಇಂತಹಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಬಳಕೆ ಮಾಡದೆ ಉಳಿದಿರುವ ಕಟ್ಟಡಗಳನ್ನು ಆರೈಕೆ ಕೇಂದ್ರವನ್ನಾಗಿ ಬದಲಾಯಿಸಿಕೊಂಡು, ಮುಂದಿನ ದಿನಗಳಲ್ಲಿ ಅದನ್ನು ನಿರಾಶ್ರಿತ ಕೇಂದ್ರವನ್ನಾಗಿ ಬದಲಾಯಿಸಲೂ ಪಾಲಿಕೆಗೆ ಅವಕಾಶ ಇದೆ. ಈ ರೀತಿ ಮಾಡುವುದರಿಂದ ಪಾಲಿಕೆ ಆದಾಯವೂ ಉಳಿತಾಯವಾಗಲಿದೆ. ನಿರಾಶ್ರಿತ ಕೇಂದ್ರಗಳ ಸುದೀರ್ಘ‌ ಬಳಕೆಯಾಗಲಿದೆ. ಅಲ್ಲದೆ, ನಗರದಲ್ಲಿ ಈ ಹಿಂದೆಗಿಂತ ಈಗ ನಿರಾಶ್ರಿತ ಕೇಂದ್ರಗಳ ಅಗತ್ಯತೆ ಹೆಚ್ಚಿದೆ.

ನಗರದಲ್ಲಿ ನಿರಾಶ್ರಿತರ ಕೇಂದ್ರಗಳ ಪ್ರಾರಂಭ ಸಂಬಂಧ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಕೋವಿಡ್ ಭೀತಿಯಿಂದ ಹಿನ್ನಡೆ ಉಂಟಾಗುತ್ತಿದೆ. ಅಲ್ಲದೆ, ಕೆಲವು ಭಾಗದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿರೋಧದಿಂದ ಕೇಂದ್ರ ಪ್ರಾರಂಭವಾಗಿಲ್ಲ.  ಎಸ್‌.ಜಿ. ರವೀಂದ್ರ, ಪಾಲಿಕೆ ವಿಶೇಷ ಆಯುಕ್ತ (ಕಲ್ಯಾಣ)

ಕೇಂದ್ರಗಳು ಎಲ್ಲೆಲ್ಲಿ? : 

ಪಶ್ಚಿಮ : ಗೂಡ್‌ಶೆಡ್‌ ರಸ್ತೆಯಲ್ಲಿ ಎರಡು ರಾಮಮಂದಿರ, ರಾಜಾಜಿನಗರ ಹೆಲ್ತ್‌, ಕಿಯೋಸ್ಕ್, ಉಪ್ಪಾರಪೇಟೆ ಮುಂಭಾಗ

ಪೂರ್ವ :  ಮರ್ಫಿಟೌನ್‌, ಕೃಷ್ಣರಾಜೇಂದ್ರ ಮಾರುಕಟ್ಟೆ ಸಮೀಪ

ದಾಸರಹಳ್ಳಿ :  ತುಮಕೂರು ರಸ್ತೆ ಚೊಕ್ಕಸಂದ್ರ ಮುಖ್ಯರಸ್ತೆ

ಮಹದೇವಪುರ :  ನಗರಸಭೆ ಕಟ್ಟಡ, ಹೂಡಿ ಮುಖ್ಯರಸ್ತೆ

ಬೊಮ್ಮನಹಳ್ಳಿ :  ಅಂಬೇಡ್ಕರ್‌ ಭವನ, ಜಂಬೂಸವಾರಿ ದಿಣ್ಣೆ

ಯಲಹಂಕ :  ಬಾಗಲೂರು ರಸ್ತೆ, ಬಾಗಲೂರು

 

 ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next