Advertisement

ರೈತರಿಗೆ ಉಪಯುಕ್ತವಾದ ಆನ್‌ಲೈನ್‌ ತರಬೇತಿ

09:15 PM Jun 05, 2021 | Team Udayavani |

ಗಂಗಾವತಿ: ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದ ರೈತರಿಗೆ ಅಂತರ್ಜಾಲ ತರಬೇತಿ ಉಪಯುಕ್ತವಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ಹೇಳಿದರು.

Advertisement

ಅವರು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಆನ್‌ ಲೈನ್‌ ಕೃಷಿ ಮಾಹಿತಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಲಾಕ್‌ಡೌನ್‌ ಸಂದರ್ಭದಲ್ಲೂ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಈ ಲಾಕ್‌ಡೌನ್‌ ಸಂದರ್ಭದಲ್ಲಿ ರೈತರಿಗೆ ಮಾಹಿತಿ ತಲುಪಿಸಲು ಕೃಷಿ ವಿಜ್ಞಾನ ಕೇಂದ್ರ, ಕಳೆದ 2 ವರ್ಷಗಳಿಂದ ಅಂತರ್ಜಾಲ ತರಬೇತಿಯನ್ನು ರೈತರಿಗೆ ನೀಡುತ್ತಿದೆ. ಆರಂಭದಲ್ಲಿ ಕೆಲವು ರೈತರು ಮಾತ್ರ ಆನ್‌ಲೈನ್‌ ತರಬೇತಿಯಲ್ಲಿ ಭಾಗವಹಿಸಿದ್ದರು. ಈಗ ಹೆಚ್ಚಿನ ರೈತರು ತರಬೇತಿಗೆ ಒಗ್ಗಿಕೊಂಡಿದ್ದಾರೆ.

ನಗರ ಪ್ರದೇಶಗಳಿಂದ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡು ಹಳ್ಳಿಗಳಿಗೆ ಬಂದು ಕೃಷಿಯತ್ತ ಮುಖ ಮಾಡಿದ್ದಾರೆ. ರೈತರಿಗೆ ಸೂಕ್ತ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ರೈತರಿಗೆ ನೆರವಾಗಲು ಗಂಗಾವತಿ ಕೃಷಿ ವಿಜ್ಞಾನಕೇಂದ್ರ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಎಂ.ವಿ. ರವಿ ಮಾತನಾಡಿ, ಆನ್‌ಲೈನ್‌ ಕೃಷಿ ತರಬೇತಿಯಲ್ಲಿ ನಾನಾ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ರೈತರಿಗೆ ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸುವುದಲ್ಲದೇ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ಇದು ರೈತರಿಗೆ ಆಶಾಕಿರಣವಾಗಿದೆ. ಒಂದು ತಿಂಗಳಿನಿಂದ ಕೃಷಿ ವಿಜ್ಞಾನಕೇಂದ್ರ 35 ಆನ್‌ಲೈನ್‌ ತರಬೇತಿಗಳು, ಕೃಷಿ ಮಾಹಿತಿಗಳ ಬಗ್ಗೆ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಸುಮಾರು 2500 ರೈತರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಈ ತರಬೇತಿಯಲ್ಲಿ ಗುಣಮಟ್ಟದ ಬೀಜಗಳ ಆಯ್ಕೆ, ಬೀಜೋಪಚಾರ, ಸಮಸ್ಯಾತ್ಮಕ ಮಣ್ಣುಗಳ ನಿರ್ವಹಣೆ, ಸಾವಯವ ಕೃಷಿ, ಅರಣ್ಯ ಕೃಷಿ, ನವೀನ ತಳಿಗಳ ಪರಿಚಯ, ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ, ಜೈವಿಕ ಪೀಡೆ ನಿರ್ವಹಣೆ, ಸಮಗ್ರ ಕೃಷಿ ಪದ್ಧತಿ, ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಸೇರಿ ಮುಂತಾದ ವಿಷಯಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುತ್ತಿದೆ ಎಂದರು.

ತಜ್ಞರಿಂದ ಬೆಳಗ್ಗೆ 10:30ರಿಂದ 12:30ರವರೆಗೆ ವಾರದ ಮೂರು ದಿನ ಉಪನ್ಯಾಸ ಏರ್ಪಡಿಸಲಾಗುತ್ತಿದೆ. ಈ ತರಬೇತಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲದೇ ಪಕ್ಕದ ಜಿಲ್ಲೆಯಾದ ಬಳ್ಳಾರಿ, ರಾಯಚೂರು, ಹಾಸನ, ವಿಜಯಪುರ ಜಿಲ್ಲೆಗಳ ರೈತರು ಭಾಗವಹಿಸಿ ತಮ್ಮ ಸಮಸ್ಯೆ ಪರಿಹರಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ| ಎಂ.ವಿ. ರವಿಯವರು ಆನ್‌ಲೈನ್‌ ತರಬೇತಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದರಿಂದ ರೈತರಿಗೆ ಹೆಚ್ಚಿನ ಉಪಯೋಗವಾಗುತ್ತಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next