ಮೂಡಬಿದಿರೆ: ಕರ್ನಾಟಕ ಸರಕಾರದ ಕೃಷಿ ಬೆಲೆ ಆಯೋಗ, ದಕ್ಷಿಣಕನ್ನಡ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ಮತ್ತು ಮಣಿಪಾಲ ಕೆ.ಎಂ.ಸಿ. ಇವುಗಳ ಸಹಯೋಗದೊಂದಿಗೆ ರೈತರ ಆದಾಯ ಮತ್ತು ಕಲ್ಯಾಣಾಭಿವೃದ್ಧಿಗೆ ಪ್ರಾಯೋಗಿಕವಾಗಿ ಆಯ್ಕೆಯಾಗಿರುವ ದರೆಗುಡ್ಡೆ ಗ್ರಾಮದಲ್ಲಿ ಯೋಜನೆ ಅನುಷ್ಠಾನಕ್ಕಾಗಿ ತೆರೆಯಲಾದ ಕಚೇರಿಯನ್ನು ಶಾಸಕ ಅಭಯಚಂದ್ರ ಜೈನ್ ಸೋಮವಾರ ಉದ್ಘಾಟಿಸಿದರು.
ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ತಲಾ ಒಂದು ಗ್ರಾಮದಂತೆ ದ.ಕ. ಜಿಲ್ಲೆಯಲ್ಲಿ ದರೆಗುಡ್ಡೆ ಗ್ರಾಮವನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭ ಮಾತನಾಡಿದ ಶಾಸಕ ಜೈನ್, ರೈತರು ಹಳ್ಳಿಯಿಂದ ಪೇಟೆಗೆ ವಲಸೆ ಹೋಗಬಾರದು. ಕೃಷಿಯಲ್ಲಿನ ಅವಕಾಶ ಗಳನ್ನು ಬಳಸಿಕೊಂಡು ತಮ್ಮ ಆದಾಯ ವೃದ್ಧಿಸಬೇಕು. ಆಧುನಿಕ ಕೃಷಿ ಪದ್ಧತಿಗೆ ಹೊಂದಿಕೊಳ್ಳಬೇಕು. ಆಧುನಿಕ ಕೃಷಿಗೆ ಸರಕಾರದಿಂದಲೂ ವಿವಿಧ ರೀತಿಯ ಪ್ರೋತ್ಸಾಹ ಯೋಜನೆಗಳಿವೆ. ರೈತರು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎಸ್. ಪ್ರಕಾಶ್ ಕಮ್ಮರಡಿ ಮಾತನಾಡಿ ರಾಜ್ಯದ ಶೇ. 50 ರಷ್ಟು ಮಂದಿ ಕೃಷಿ ಕ್ಷೇತ್ರದಿಂದ ವಲಸೆ ಹೋಗುತ್ತಿರುವುದನ್ನು ತಡೆಗಟ್ಟಿ, ಐದು ವರ್ಷಗಳಲ್ಲಿ ಕೃಷಿಕರ ಆದಾಯ ದ್ವಿಗುಣಗೊಳಿಸುವುದು ಪ್ರಧಾನಿ ಮೋದಿಯವರ ಯೋಜನೆ ಯಾಗಿದೆ. ಇದನ್ನು ಉತ್ತೇಜಿಸಲು ರಾಜ್ಯ ಸರಕಾರವೂ ಕೈಜೋಡಿಸಿದೆ. ಈ ಯೋಜನೆಯ ಮೂಲಕ ಹಳ್ಳಿಗಳಿಗೆ ಕೃಷಿ ತಂತ್ರಜ್ಞಾನವನ್ನು ಪರಿಚಯಿಸುವುದು, ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸು ವುದು ಸಹಿತ ಹಲವಾರು ಕ್ರಮಗಳನ್ನು ಕೈಗೊಂಡಿದ್ದು ಇಲಾಖೆಯು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ ಎಂದರು.
ಹಿರಿಯ ಕೃಷಿ ತಜ್ಞ ಡಾ.ಎಲ್.ಸಿ. ಸೋನ್ಸ್, ಬೀದರ್ ಕೃಷಿ ವಿ.ವಿ.ಯ ಸಹಾಯಕ ನಿರ್ದೇಶಕ ಡಾ.ಎಸ್.ಎಂ.ಶಿವಕುಮಾರ್, ಮೀನುಗಾರಿಕಾ ವಿಶ್ವ ವಿದ್ಯಾಲಯದ ಸಹಾಯಕ ನಿರ್ದೇಶಕ ಡಾ.ಎಂ.ಎಂ. ವೇಣುಗೋಪಾಲ್, ಕೆ.ಎಂ.ಸಿ. ಆಸ್ಪತ್ರೆಯ ಡಾ. ವಿನಿತಾ ಭಟ್, ಶಂಕರ ಚಿಕ್ಕಣ್ಣನವರ್, ತಾ.ಪಂ. ಸದಸ್ಯ ಪ್ರಶಾಂತ್ ಕುಮಾರ್, ದರೆಗುಡ್ಡೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಚೌಟ ಮತ್ತಿತರರು ಉಪಸ್ಥಿತರಿದ್ದರು.
ಕೃಷಿ ಅಧಿಕಾರಿ ಶಿವಕುಮಾರ್ ಮಗದ ಸ್ವಾಗತಿಸಿ ಪ್ರಸ್ತಾವನೆಗೈದರು.