Advertisement

ಅನುದಾನ ವಾಪಸ್‌ ಹೋಗದಂತೆ ಬಳಸಿ

09:10 PM Nov 06, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಜಿಲ್ಲೆಯ ಅಭಿವೃದ್ಧಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಎಲ್ಲಾ ಇಲಾಖೆಗಳು ಬಳಸಿಕೊಳ್ಳಬೇಕು. ಕಾಲಕಾಲಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ಸರ್ಕಾರದ ಅನುದಾನವನ್ನು ಜಿಲ್ಲೆಯ ಅಭಿವೃದ್ಧಿಗೆ ಸದ್ಬಳಕೆ ಮಾಡಬೇಕೆಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ಮೂರು ತಿಂಗಳಿಗೊಮ್ಮೆ ಕೊಡುವ ಅನುದಾನವನ್ನು ಹಾಗೆ ಇಟ್ಟುಕೊಂಡು ವರ್ಷದ ಕೊನೆಯಲ್ಲಿ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಖರ್ಚು ಮಾಡಲು ಹೊರಟರೆ ಅಧಿಕಾರಿಗಳ ನಡೆ ಬಗ್ಗೆ ಅನುಮಾನ ಮೂಡುತ್ತದೆ ಎಂದು ಎಚ್ಚರಿಸಿದರು.

ಸಭೆಗೆ ಗೈರಾದರೆ ಸಹಿಸುವುದಿಲ್ಲ: ಅಧಿಕಾರಿಗಳು ಮದುವೆ ಇದೆ, ಬೇರೆ ಸಭೆಗಳಿಗೆ ಇವೆ ಎಂದು ಕೆಡಿಪಿ ಸಭೆಗಳಿಗೆ ಗೈರಾಗುವ ಪ್ರವೃತ್ತಿ ಬೆಳೆಸಿಕೊಂಡರೆ ಸಹಿಸಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಇಲಾಖೆಗಳ ಅಧಿಕಾರಿಗಳು ಮುಕ್ತವಾಗಿ ಚರ್ಚೆ ಮಾಡಬೇಕು ಎಂದು ತಾಕೀತು ಮಾಡಿದರು.

ಸಮಸ್ಯೆಗಳ ಬಗ್ಗೆ ಗಮನಕ್ಕೆ ತನ್ನಿ: ನೀವು ಬರೀ ಪ್ರಗತಿ ವರದಿ ಕೊಟ್ಟರೆ ಏನು ಪ್ರಯೋಜನೆ, ಇಲಾಖೆಯಲ್ಲಿನ ಸಮಸ್ಯೆಗಳು ಗಮನಕ್ಕೆ ತನ್ನಿ, ಯಾವ ಅಧಿಕಾರಿ ನೋಡಿದರೂ ಸಚಿವರ ಸಭೆಯಲ್ಲಿ ತಲೆ ತಗ್ಗಿಸಿಕೊಂಡು ಇರುತ್ತೀರಿ, ನಿಮ್ಮ ಸಮಸ್ಯೆಗಳ ಬಗ್ಗೆ ಹೇಳುವುದಿಲ್ಲ ಅಂದರೆ ಸಚಿವರಿಗೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಅರಿವು ಉಂಟಾಗುವುದೇ ಹೇಗೆ ಎಂದು ಪ್ರಶ್ನಿಸಿದರು.

ಜಿಲ್ಲೆಯ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಕ್ಕೆ ತಂದರೆ ಸ್ಪಂದಿಸುತ್ತಾರೆ. ಅಧಿಕಾರಿಗಳು ಪಾರದರ್ಶಕವಾಗಿ ಮುಕ್ತವಾಗಿ ಚರ್ಚೆ ಮಾಡಬೇಕು ಎಂದರು.

Advertisement

ನಾವು ಯಾವುದೇ ಅಧಿಕಾರಿಗಳಿಗೆ ತೊಂದರೆ ಕೊಡಲ್ಲ. ಆದರೆ ನನ್ನ ಹಾಗೂ ಸಿಇಒ ವೇಗಕ್ಕೆ ನೀವು ಬರಬೇಕು. ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಹೊಂದಬೇಡಿ. ನಮಗೆ ಸಹಕಾರ ಕೊಟ್ಟರೆ ನಾವು ನಿಮಗೆ ಸಹಕಾರ ಕೊಡುತ್ತೇವೆ ಎಂದು ತಮ್ಮ ಮೊದಲ ಕೆಡಿಪಿ ಸಭೆಯಲ್ಲಿ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಅಂಗನವಾಡಿ ಕಟ್ಟಡ ವಿಳಂಬಕ್ಕೆ ಕಿಡಿ: ಜಿಲ್ಲೆಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ವಿಳಂಬ ಆಗುತ್ತಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು, ಕಾಲಮಿತಿಯೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕೆಂದರು. ಕೃಷಿ ಇಲಾಖೆ ಸೌಲಭ್ಯಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಆದರೆ ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಅರಿವು ರೈತರಲ್ಲಿ ಇಲ್ಲ. ಈ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸಬೇಕು ಎಂದರು.

ಗ್ರಾಪಂ ಮಟ್ಟದಲ್ಲಿ ಕೆರೆಗಳಲ್ಲಿ ಮೀನುಗಳ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಬೇಕು, ವಸತಿ ಯೋಜನೆಗಳಡಿ ನಿವೇಶನ ಅರ್ಹರಿಗೆ ತಲುಪಿಸಬೇಕು. ಗ್ರಾಮ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಳ್ಳಬೇಕಾದರೆ ಗ್ರಾಪಂ ಚುನಾಯಿತ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.

500 ಸಸಿ ನೆಡಿ: ತಾಪಂ ಇಒಗಳು, ನೋಡಲ್‌ ಅಧಿಕಾರಿಗಳು ಕಡ್ಡಾಯವಾಗಿ ಗ್ರಾಪಂಗಳಿಗೆ ತೆರಳಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಬೇಕು. ಪ್ರತಿ ಜಿಪಂ ಸದಸ್ಯರ ಕ್ಷೇತ್ರದಲ್ಲಿ ಅರಣ್ಯ ಇಲಾಖೆಯಿಂದ 500 ಸಸಿಗಳನ್ನು ರಸ್ತೆ ಬದಿ ನಡೆಬೇಕು. ಇದಕ್ಕೆ ಜಿಪಂ ಸದಸ್ಯರನ್ನು ಆಹ್ವಾನಿಸಬೇಕೆಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು. 14ನೇ ಹಣಕಾಸು ಯೋಜನೆಯಡಿ ಬಿಡುಗಡೆಗೊಂಡಿರುವ ಅನುದಾನವನ್ನು ಅನ್ಯ ಕಾರ್ಯಗಳಿಗೆ ಬಳಸದೇ ಉದ್ದೇಶಿತ ಕಾರ್ಯಗಳಿಗೆ ಮಾತ್ರ ಬಳಸಬೇಕೆಂದು ತಾಪಂ ಇಒಗಳಿಗೆ ಸೂಚಿಸಿದರು.

5 ಕೋಟಿ ರೂ.ಗೆ ಪ್ರಸ್ತಾವನೆ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ ಕೊಡಬೇಕಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 85 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಎಲ್ಲಾ ಗ್ರಾಮಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಕಲ್ಪಿಸಲು ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು. ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ಕುಡಿಯುವ ನೀರಿನ ಅಭಿವೃದ್ಧಿ ಕಾರ್ಯಗಳ ಪರಿಹಾರಕ್ಕೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಭೆಯಲ್ಲಿ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ತಿಳಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಟ್ಯಾಂಕರ್‌ ನೀರು ಪೂರೈಕೆ ಕಡಿಮೆ ಮಾಡಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಅಕ್ಕಪಕ್ಕದ ರೈತರ ಮನವೊಲಿಸಿ ಖಾಸಗಿ ಕೊಳವೆ ಬಾವಿಗಳಿಂದ ಗ್ರಾಮಕ್ಕೆ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನಸೌಧ, ವಿಕಾಸಸೌಧಕ್ಕೆ ತೆರಳುವೆ: ಅಧಿಕಾರಿಗಳು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಏನೇ ಸಮಸ್ಯೆ ಇರಲಿ. ತಕ್ಷಣ ನನ್ನ ಗಮನಕ್ಕೆ ತನ್ನಿ. ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗಳ ಬಗ್ಗೆ ನನ್ನ ಗಮನಕ್ಕೆ ತಂದರೆ ವಿಧಾನಸೌಧ, ವಿಕಾಸಸೌಧಕ್ಕೆ ತೆರಳಿ ಸಂಬಂಧಪಟ್ಟವರ ಗಮನಕ್ಕೆ ತಂದು ಜಿಲ್ಲೆಗೆ ಆಗಬೇಕಾದರೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ತರುವೆ ಎಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಭರವಸೆ ನೀಡಿದರು.

ಜಿಲ್ಲೆಯ ಶಿಡ್ಲಘಟ್ಟ, ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ತಾಲೂಕುಗಳನ್ನು ಬರದ ಪಟ್ಟಿಯಿಂದ ಕೈಬಿಟ್ಟಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿ ಜಿಪಂ ಅಧ್ಯಕ್ಷರು, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಮೂರು ತಾಲೂಕುಗಳನ್ನು ಬರದ ಪಟ್ಟಿಗೆ ಸೇರಿಸುವಂತೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.

ಸರ್ಕಾರಿ ವಾಹನಗಳ ದುರ್ಬಳಕೆಗೆ ಆಕ್ರೋಶ: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ವಾಹನಗಳನ್ನು ಕೆಲವರು ತಮ್ಮ ಸ್ವಂತ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನೇ ಕಂಡಂತೆ ಬಹಳಷ್ಟು ಇಲಾಖೆ ವಾಹನಗಳಲ್ಲಿ ನೆಂಟರು, ಸಂಬಂಧಿಕರು, ಖಾಸಗಿ ವ್ಯಕ್ತಿಗಳು ತಿರುಗಾಡುವುದನ್ನು ಕಂಡಿದ್ದೇನೆ. ಮುಂದೆ ಈ ರೀತಿ ಕಂಡು ಬಂದರೆ ಅಲ್ಲಿಯೇ ವಾಹನಗಳನ್ನು ಸೀಸ್‌ ಮಾಡಲಾಗುವುದು ಎಂದು ಜಿಪಂ ಅಧ್ಯಕ್ಷರು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು ಸ್ವಂತ ವಾಹನಗಳನ್ನು ಬಳಿಸುತ್ತಿವೆ. ಗುತ್ತಿಗೆ ವಾಹನಗಳನ್ನು ಎಷ್ಟು ಇಲಾಖೆಗಳು ಪಡೆದುಕೊಂಡಿವೆ ಎಂಬುದರ ಬಗ್ಗೆ ಮುಂದಿನ ಸೋಮವಾದರೊಳಗೆ ಸಮಗ್ರ ವರದಿ ಕೊಡಬೇಕೆಂದು ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next