ದೇವನಹಳ್ಳಿ: ದಾಳಿಂಬೆ ಬೆಳೆಯನ್ನು ಆಯ್ಕೆ ಮಾಡಿಕೊಂಡಿರುವ ರೈತರು ಸೂಕ್ತವಾದ ಮಾರ್ಗದರ್ಶನವಿಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ದಾಳಿಂಬೆ ಬೆಳೆಯಲ್ಲಿ ತಂತ್ರಜ್ಞಾನವನ್ನು ಬಳಸಿ ರೈತರ ಆರ್ಥಿಕಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಸೈಂಟಿಪಿಕ್ ಆಗ್ರೊ ಟೆಕ್ನಾಲಜೀಸ್ (ಅಂತಾರಾಷ್ಟ್ರೀಯ ಆಗ್ರೋ ಕನ್ಸಲ್ಟೆನ್ಸಿ ವಿಭಾಗ) ಅಧ್ಯಕ್ಷ ಡಾ.ಸುನಿಲ್ ತಾಮಗಾಳೆ ತಿಳಿಸಿದರು.
ತಾಲೂಕಿನ ಸಾದಹಳ್ಳಿಯಲ್ಲಿ ಸೈಂಟಿಪಿಕ್ ಆಗ್ರೊ ಟೆಕ್ನಾಲಜೀಸ್ ವತಿಯಿಂದ ರೈತರಿಗೆ ದಾಳಿಂಬೆ ಬೆಳೆಯ ವಿಚಾರ ಸಂಕೀರ್ಣ ಹಾಗೂ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅನೇಕ ರೈತರು ದ್ರಾಕ್ಷಿ ಬೆಳೆಯಿಂದ ದಾಳಿಂಬೆ ಬೆಳೆಗೆ ಬರುತ್ತಿದ್ದಾರೆ.ತೋಟಗಾರಿಕೆ ಬೆಳೆಗೆ ಸಾಕಷ್ಟು ವೈಜ್ಞಾನಿಕ
ವಿಧಾನಗಳಿದ್ದು ಅದನ್ನು ಬಳಸಿಕೊಳ್ಳಬೇಕು. ಒಂದು ಎಕರೆಗೆ 20 ಲಕ್ಷ ಲಾಭ ಪಡೆಯಬಹುದು. ದಾಳಿಂಬೆಗೆ ಹೆಚ್ಚಿನ ಮಾರುಕಟ್ಟೆ ಇದೆ. ಮಹಾರಾಷ್ಟ್ರ ಇತರೆ ಕಡೆಗಳಲ್ಲಿ ಹೆಚ್ಚು ಬೆಳೆಯುತ್ತಾರೆ ಎಂದರು.
ಆರ್ಥಿಕ ಮಟ್ಟ ಸದೃಢ: ತರಬೇತಿ ಕಾರ್ಯಾಗಾರಕ್ಕೆ ಚಿತ್ರದುರ್ಗ, ಕೊಪ್ಪಳ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಬಳ್ಳಾರಿ, ಕೋಲಾರ, ರಾಮನಗರ ಹಾಗೂ ಇತರೆ ಕಡೆಗಳಿಂದ ರೈತರು ತರಬೇತಿಗೆ ಬಂದಿದ್ದಾರೆ. ಹನಿ ನೀರಾವರಿಯ ಮೂಲಕ ದಾಳಿಂಬೆ ಬೆಳೆಯಬಹುದು. ವಾತಾವರಣದಲ್ಲಿ ಉಂಟಾಗುವ ಬದಲಾವಣೆಗೆ ಅನುಗುಣವಾಗಿ ಅವುಗಳನ್ನು ಪೋಷಣೆ, ಬೇರುಗಳ ರಕ್ಷಣೆ, ಕೀಟಭಾದೆ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಕಾಲಕಾಲಕ್ಕೆ ರೋಗಬಾಧೆ ಬರದಂತೆ ರೈತರು ನೋಡಿಕೊಳ್ಳಬೇಕು. ದಾಳಿಂಬೆ ಹಣ್ಣು ಮಾರುಕಟ್ಟೆಯಲ್ಲಿ ಹೆಚ್ಚು ವಹಿವಾಟು ಆಗುತ್ತಿದೆ.
ಆಧುನಿಕ ತಂತ್ರಜ್ಞಾನ ಕ್ರಮವನ್ನು ರೈತರು ಬಳಸಿದರೆ ಆರ್ಥಿಕ ಮಟ್ಟ ಸದೃಢವಾಗುತ್ತದೆ ಎಂದರು.
ದಾಳಿಂಬೆಗೆ ಮಾರುಕಟ್ಟೆ ವ್ಯವಸ್ಥೆ ಅವಶ್ಯ: ರೈತ ಮುನೇಗೌಡ ಮಾತನಾಡಿ, ದಾಳಿಂಬೆ ಬೆಳೆಗೆ ಹೆಚ್ಚಿನ ಮಾರುಕಟ್ಟೆಯಿದೆ. ರೈತರು ವೈಜ್ಞಾನಿಕವಾಗಿ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಲ್ಲಿ ಮಾಡಬೇಕು. ಈ ಹಿಂದೆ ದ್ರಾಕ್ಷಿ ಬೆಳೆಯುತ್ತಿದ್ದೆವು. ಈಗ ದ್ರಾಕ್ಷಿ ಬಿಟ್ಟು ದಾಳಿಂಬೆ ಬೆಳೆಯುತ್ತಿದ್ದೇವೆ. ದ್ರಾಕ್ಷಿಯಲ್ಲಿ ವ್ಯಾಪಾರಸ್ಥರು ತೆಗೆದುಕೊಂಡು ಹೋದ ಹಣವನ್ನೇ ಪಾವತಿ ಮಾಡಿಲ್ಲ. ಇನ್ನು ಮುಂದೆಯಾದರೂ ರೈತರು ದಾಳಿಂಬೆ ಬೆಳೆ ಬೆಳೆದಿರುವವರು ಸಾಲ ನೀಡಬೇಡಿ. ಸರಿಯಾದ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಸರ್ಕಾರ ದಾಳಿಂಬೆಗೆ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಬೇಕು. ವಿದೇಶಗಳಿಗೆ ಕಳುಹಿಸುವಂತೆ ಆಗಬೇಕು ಎಂದು ಹೇಳಿದರು.
ರೈತರಿಗೆ ಕಾರ್ಯಾಗಾರ ಅಗತ್ಯ: ನಿವೃತ್ತ ಜಿಲ್ಲಾಧಿಕಾರಿ ಲಕ್ಷ್ಮಣ್ ಸ್ವಾಮಿ ಮಾತನಾಡಿ, ದಾಳಿಂಬೆ ಬೆಳೆಗೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಸಾಂಗ್ಲಿ ಇತರೆ ಕಡೆ ಹೋಗಿ ದಾಳಿಂಬೆ ಸಂಬಂಧಪಟ್ಟಂತೆ ತಿಳಿದುಕೊಂಡು ಬಂದಿದ್ದೇನೆ. ಸರ್ಕಾರ ವಿದೇಶಗಳಿಗೆ ದಾಳಿಂಬೆ ಕಳುಹಿಸಲು ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡ ಬೇಕು. ಸರ್ಕಾರ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ದಾಳಿಂಬೆ ಬೆಳೆಯ ಕಾರ್ಯಾಗಾರವನ್ನು ಮಾಡಬೇಕು ಎಂದರು. ದಾಳಿಂಬೆ ಬೆಳೆಯುವ ರೈತರು ಇದ್ದರು.