Advertisement

ಗ್ರಾಮಾಭಿವೃದ್ಧಿಗೆ ತೆರಿಗೆ ಹಣ ಬಳಸಿ

10:00 PM Nov 04, 2019 | Team Udayavani |

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗ್ರಾಪಂಗೆ ಬರುವ ತೆರಿಗೆ ಹಣವನ್ನು ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಬಳಸ‌ಬೇಕು ಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಅಣ್ಣೇಶ್ವರ ಗ್ರಾಪಂ ಆವರಣದಲ್ಲಿ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ಮೊದಲನೇ ಹಂತದ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.

Advertisement

ಎಲ್ಲರಿಗೂ ಸೌಲಭ್ಯ ದೊರಕಬೇಕು: ಪ್ರತಿಯೊಂದು ಗ್ರಾಮಸಭೆಗೂ ಭಾಗವಹಿಸುತ್ತೇನೆ. ಅಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡರೆ ಬಗೆಹರಿಸಲು ಅನುಕೂಲವಾಗುವುದು. ಸಾರ್ವಜನಿಕರಿಗೆ ಗ್ರಾಮ ಸಭೆಯ ಮಹತ್ವವನ್ನು ತಿಳಿಯಬೇಕು. ಗ್ರಾಮ ಸಭೆಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಸರ್ಕಾರ ಸೌಲಭ್ಯಗಳನ್ನು ಮನದಟ್ಟು ಮಾಡಲು ಅನುಕೂಲವಾಗುವುದು. ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯಗಳು ಸಿಗಬೇಕು ಎಂದರು.

ಅನುದಾನ ಸಮರ್ಪಕವಾಗಿ ಬಳಸಿ: ಗ್ರಾಪಂ ವ್ಯಾಪ್ತಿಯ ಎಲ್ಲಾ ರೀತಿಯಲ್ಲಿ ಅಭಿವೃದ್ಧಿಗೊಳಿಸಿ. ಶಾಸಕರ ಅನುದಾನವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಸಮಗ್ರ ಅಭಿವೃದ್ಧಿಪಡಿಸಿ. ಯಾವುದೇ ಸಣ್ಣಪುಟ್ಟ ಕೆಲಸಗಳು ಇಲ್ಲದೆ ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿ ಕೊಳ್ಳಬೇಕು. ಕೆಲವೊಂದು ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ವಿಶೇಷ ಯೋಜನೆಯನ್ನು ರೂಪಿಸಿ ಸರ್ಕಾರಕ್ಕೆ ಈಗಾಗಲೇ ಕ್ರಿಯಾಯೋಜನೆಯನ್ನು ಕಳುಹಿಸಿಕೊಡಲಾಗಿದೆ. ಚರಂಡಿ ಮತ್ತು ರಸ್ತೆಗಳಿಗೆ ವಿಶೇಷವಾಗಿ ಒತ್ತು ನೀಡಿ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿರುವ ಗ್ರಾಮಗಳಿಗೆ ಸಂಪರ್ಕ ರಸ್ತೆಯ ಪ್ರಸ್ತಾವನೆಯನ್ನು ಒಳಗೊಂಡಂತೆ ಸುಮಾರು 20 ಕೋಟಿ ರೂ. ಅನುದಾನದ ಕ್ರಿಯಾಯೋಜನೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ ಎಂದರು.

ಹೈನುಗಾರಿಕೆಗೆ ಮಾರಕ: ಜಿಪಂ ಸದಸ್ಯ ಕೆ.ಸಿ.ಮಂಜುನಾಥ್‌ ಮಾತನಾಡಿ, ಪಂಚಾಯಿತಿ ವ್ಯಾಪ್ತಿಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕ್ರಿಯಾ ಯೋಜನೆ ರೂಪಿಸಿ ಅಭಿವದ್ಧಿ ಕಾರ್ಯವಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಹೈನುಗಾರಿಕೆ ನಂಬಿಕೊಂಡು ರೈತರು ಜೀವನ ಸಾಗಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಲು ಉತ್ಪನ್ನಗಳ ಆಮದು ನೀತಿ ರೈತರ ಆರ್ಥಿಕ ಅಭಿವೃದ್ಧಿಗೆ ಮಾರಕವಾಗಲಿದೆ. ಜೊತೆಗೆ ಹೈನುಗಾರಿಕೆ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಆದ್ದರಿಂದ ಕೂಡಲೇ ಆಮದು ನೀತಿ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಸ್ವಚ್ಛತೆ ಕಾಪಾಡಬೇಕು: ತಾಪಂ ಅಧ್ಯಕ್ಷೆ ಚೈತ್ರಾ ವೀರೇಗೌಡ ಮಾತನಾಡಿ, ರಸ್ತೆಗಳು, ಚರಂಡಿಗಳು, ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ತಮ್ಮ ಪರಿಸರ ಸ್ವಚ್ಛವಾಗಿದ್ದರೆ ಆರೋಗ್ಯ ಸಮಸ್ಯೆ ಬರುವುದಿಲ್ಲ. ಸರಕಾರದ ಸವಲತ್ತುಗಳನ್ನು ಇಲಾಖಾವಾರು ಪಡೆದುಕೊಳ್ಳಬೇಕು. ಅರ್ಹ ಫಲಾನುಭವಿಗಳಿಗೆ ಸರಕಾರದ ಸೌಲಭ್ಯ ಸಿಗಲು ನಾಗರಿಕರು ಸಹಕರಿಸಬೇಕು. ಅಧಿಕಾರಿಗಳು ಸ್ಪಂದಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ದೊರೆಯುವಂತೆ ಆಗಬೇಕು ಎಂದರು.

Advertisement

ಅಧಿಕಾರಿಗಳಿಗೆ ಎಚ್ಚರಿಕೆ: ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸರಿಯಾಗಿ ಗ್ರಾಮ ಸಭೆಯ ಬಗ್ಗೆ ಮಾಹಿತಿ ನೀಡಿಲ್ಲ. ನಾನು ಇಲ್ಲದಿರುವ ಸಂದರ್ಭದಲ್ಲಿ ಕಾರ್ಡ್‌ನ್ನು ತಂದು ಟೇಬಲ್‌ ಮೇಲೆ ಇಟ್ಟು ಹೋಗಿರುತ್ತಾರೆ. ಫೋನ್‌ ಮೂಲಕವಾದರೂ ಬನ್ನಿ ಎಂದು ತಿಳಿಸಿಲ್ಲ. ಉಪಾಧ್ಯಕ್ಷರಿಗೂ ಸಹ ಮಾಹಿತಿ ನೀಡಿಲ್ಲ. ಈ ತರಹದ ಬೇಜವಾಬ್ದಾರಿತನ ಮುಂದಿನ ದಿನಗಳಲ್ಲಿ ಆಗದಂತೆ ಎಚ್ಚರ ವಹಿಸಬೇಕು. ಗ್ರಾಪಂಗಳು ತಾಲೂಕು ಪಂಚಾಯಿತಿಯ ಅಧೀನದಲ್ಲಿರುವುದು ತಿಳಿದುಕೊಳ್ಳಬೇಕು ಎಂದು ಎಚ್ಚರಿಸಿದರು.

ಅಣ್ಣೇಶ್ವರ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮುರಳಿ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಮುರುಡಯ್ಯ, ಗ್ರಾಪಂ ಉಪಾಧ್ಯಕ್ಷ ಯರ್ತಿಗಾನಹಳ್ಳಿ ಶಿವಣ್ಣ, ಸದಸ್ಯರಾದ ಮುನಿರಾಜು, ದೇವಿಕಾ, ಅನಿತಾ, ತುಳಸಿ, ಅಂಬುಜಾಕ್ಷಿ, ದೀಪಾ, ಗೋಪಾಲ್‌, ಕವಿತಾ, ಮುನಿಯಪ್ಪ, ನಂಜೇಗೌಡ, ಲಕ್ಷ್ಮಮ್ಮ, ರೇಣುಕಾ, ಮುನಿಕೃಷ್ಣ, ಪಾರ್ವತಮ್ಮ, ರೂಪಾಶ್ರೀ, ಮುನಿಯಪ್ಪ, ನಾರಾಯಣ್‌, ಪ್ರೇಮ, ಪಿಡಿಒ ವೆಂಕಟೇಶ್‌ ಎಂ.ಇನಾಮ್‌ದಾರ್‌, ಕಾರ್ಯದರ್ಶಿ ರಾಧಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next