ಬಸವನಬಾಗೇವಾಡಿ: ಕೊಳವೆ-ತೆರೆದ ಬಾವಿಯಿಂದ ಬಳಸುವ ನೀರು ಕುಡಿಯಲು ಯೋಗ್ಯವಿದ್ದರೆ ಮಾತ್ರ ಬಳಸಬೇಕು ಎಂದು ಎನ್ ಸಿಡಿಡಬ್ಲ್ಯೂಎಸ್‌ಕ್ಯೂ ತಾಂತ್ರಿಕ ತಜ್ಞ ಡಾ| ಸಂಜೀವ ಅಗರವಾಲ ಹೇಳಿದರು.
ತಾಲೂಕಿನ ಯರನಾಳ, ಇಂಗಳೇಶ್ವರ, ಮತಕ್ಷೇತ್ರದ ಮಟ್ಟಿಹಾಳ ಗ್ರಾಮಕ್ಕೆ ಜಲಜೀವನ ಮಿಷನ್ ಯೋಜನೆಯಡಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಜನರೊಂದಿಗೆ ಸಂವಾದ ಪ್ರಗತಿ ಸಮಸ್ಯೆ ಕುರಿತು ಕೇಂದ್ರ, ರಾಜ್ಯ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ದೇಶದ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿವ ನೀರು ನೀಡುವ ಉದ್ದೇಶದಿಂದ ಜೆಜೆಎಂ ಯೋಜನೆಯಡಿ ಈ ಕಾಮಗಾರಿ ಕೈಗೊಂಡಿದೆ. ಕೆಲವು ಗ್ರಾಮಗಳಿಗೆ ಕೊಳವೆ, ತೆರೆದ ಬಾವಿಯಿಂದ ನೀರು ಪೂರೈಸಲಾಗುತ್ತದೆ. ಆ ನೀರು ಕುಡಿಯಲು ಯೋಗ್ಯವಾಗಿದ್ದರೆ ಮಾತ್ರ ಅದನ್ನು ಬಳಸಲು ಸಾಧ್ಯ ಎಂದರು.
ಸಮರ್ಪಕವಾಗಿ ನೀರು ಸರಬುರಾಜು ಆಗದಿದ್ದಲ್ಲಿ ಮತ್ತು ಕಾಮಗಾರಿಯಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣ ಗ್ರಾಪಂ ದೂರು ನೀಡಬಹುದು. ಕೇಂದ್ರ-ರಾಜ್ಯ ತಂಡದ ತಾಂತ್ರಿಕ ತಜ್ಞರು ಈ ನೀರು ಪರೀಕ್ಷಿಸಿ ಕುಡಿಯಲು ಯೋಗ್ಯವಿದ್ದರೆ ಮಾತ್ರ ಬಳಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದರು.
ಈ ವೇಳೆ ಯರನಾಳ ಗ್ರಾಪಂ ಅಧ್ಯಕ್ಷ ಬಸವರಾಜ ಜಾಲಗೇರಿ, ಸದಸ್ಯರಾದ ಕವಿತಾ ಮಣ್ಣೂರಮಠ, ಸಂಗನಗೌಡ ಪಾಟೀಲ, ರಾಮಣ್ಣ ಒಂಟಗುಡಿ, ತಾಂತ್ರಿಕ ಸಲಹೆಗಾರ ಅಪ್ಪರೊ, ವಿಜಯಪುರ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಜಿಲ್ಲಾ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ ಚವ್ಹಾಣ, ಬಸವನಬಾಗೇವಾಡಿ ಎಇಇ ಎಸ್.ಬಿ. ಪಾಟೀಲ, ಎಸ್.ಎಚ್. ಮುದ್ದೇಬಿಹಾಳ, ಅಭಿವೃದ್ಧಿ ಅಧಿಕಾರಿ ರವಿಕುಮಾರ ಗುಂಡಳ್ಳಿ ಇತರರಿದ್ದರು.