Advertisement

ನೀರು ಬಳಕೆದಾರರ ಸಂಘಗಳ ಅಧೋಗತಿ

10:55 AM Mar 22, 2022 | Team Udayavani |

ಬೆಳಗಾವಿ: ರೈತರು, ಸರ್ಕಾರ, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನಡುವೆ ಸಂಪರ್ಕದ ಕೊಂಡಿಯಾಗಿ ನೀರಾವರಿ ಕಾಲುವೆಗಳ ಸಮರ್ಪಕ ನಿರ್ವಹಣೆ ಮಾಡಬೇಕಾದ ನೀರು ಬಳಕೆದಾರರ ಸಂಘಗಳು ರೈತರ ಅಸಹಕಾರ ಹಾಗೂ ಅನುದಾನ ಕೊರತೆಯಿಂದ ಶೋಚನೀಯ ಸ್ಥಿತಿ ಎದುರಿಸುತ್ತಿವೆ. ನೀರಿನ ಕರ ಬಾಕಿ ಸೇರಿದಂತೆ ಹತ್ತಾರು ಸಮಸ್ಯೆಗಳ ಸುಳಿಗೆ ಸಿಲುಕಿರುವ ಈ ಸಂಘಗಳು ರೈತರ ಜತೆ ಸರ್ಕಾರದಿಂದಲೂ ಅನಾದರಕ್ಕೊಳಗಾಗಿವೆ.

Advertisement

ಮಲಪ್ರಭಾ-ಘಟಪ್ರಭಾ ಯೋಜನೆಗಳ ಅಚ್ಚುಕಟ್ಟು ಪ್ರಾಧಿಕಾರ (ಕಾಡಾ)ದಡಿ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ 650 ನೀರು ಬಳಕೆದಾರರ ಸಂಘಗಳು ನೋಂದಣಿಯಾಗಿದ್ದರೂ ಈ ಪೈಕಿ 350 ಸಂಘಗಳು ಮಾತ್ರ ಸಕ್ರಿಯವಾಗಿರುವುದು ಇದಕ್ಕೆ ಸಾಕ್ಷಿ. ಪ್ರಾಧಿಕಾರದಿಂದ ಒಂದು ಸಂಘಕ್ಕೆ ಪ್ರತಿವರ್ಷ ಒಂದು ಲಕ್ಷ ರೂ. ಕೊಡಲಾಗುತ್ತದೆ. ಈ ಹಣದಲ್ಲಿ ಸಂಘಗಳು ಕಾಲುವೆಗಳ ನಿರ್ವಹಣೆ ಮಾಡಬೇಕು. ದುರಸ್ತಿ ಕಾರ್ಯ ಕೈಗೊಳ್ಳಬೇಕು. ಆದರೆ ಬಹುತೇಕ ಸಂಘಗಳು ಈ ಕಾರ್ಯವನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಇನ್ನೊಂದು ಕಡೆ ನೀರು ಬಳಕೆ ಮಾಡುವ ರೈತರಿಂದ ಈ ಸಂಘಗಳು ಶುಲ್ಕ ಪಡೆದುಕೊಳ್ಳುತ್ತವೆ. ಇದರಲ್ಲಿ ಶೇ.70 ಹಣವನ್ನು ಸಂಘಗಳು ಇಟ್ಟುಕೊಂಡರೆ ಶೇ.30 ಹಣವನ್ನು ಸರ್ಕಾರಕ್ಕೆ ಕೊಡುತ್ತವೆ. ಆದರೆ ನೀರು ಬಳಕೆ ಮಾಡಿಕೊಂಡ ರೈತರು ಸಂಘಗಳಿಗೆ ಇದರ ಹಣ ತುಂಬುತ್ತಿಲ್ಲ. ವರ್ಷಕ್ಕೆ 400ರಿಂದ ಮೂರು ಸಾವಿರ ರೂ. ವೆಚ್ಚ ಮಾತ್ರ ಬರುತ್ತಿದ್ದರೂ ರೈತರು ಈ ಹಣ ಪಾವತಿಗೆ ಮುಂದಾಗುತ್ತಿಲ್ಲ. ಇದರಿಂದಾಗಿ ಎಷ್ಟೋ ಸಂಘಗಳು ಸ್ಥಗಿತಗೊಂಡಿವೆ.

ಸರ್ಕಾರದ ಅನುದಾನ ಪಡೆದರೂ ಈ ಸಂಘಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದು ಪ್ರಾಧಿಕಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಾಧಿಕಾರ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ರೈತರು ಕಾಲುವೆಗಳ ಮೂಲಕ ತಮ್ಮ ಹೊಲಗಳಿಗೆ ನೀರು ಪಡೆಯುತ್ತಿದ್ದಾರೆ. ಪಡೆದುಕೊಂಡ ನೀರಿಗೆ ತೆರಿಗೆ ತುಂಬಿದರೆ ಅದಕ್ಕೆ ಪ್ರೋತ್ಸಾಹಧನ ನೀಡಲಾಗುತ್ತದೆ. ಇಷ್ಟಾದರೂ ರೈತರು ಹಣ ಪಾವತಿಸುತ್ತಿಲ್ಲ ಎಂಬುದು ಕಾಡಾ ಅಧಿಕಾರಿಗಳ ಅಭಿಪ್ರಾಯ.

ಕರ್ನಾಟಕ ನೀರಾವರಿ ತಿದ್ದುಪಡಿ ಕಾಯ್ದೆ 2000ರ ಅನ್ವಯ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಡಿ ನೀರು ನಿರ್ವಹಣೆಯನ್ನು ಉಪ ಕಾಲುವೆ, ಹಂಚು ಕಾಲುವೆಯ ಕೊನೆಯವರೆಗೆ ವ್ಯವಸ್ಥಿತವಾಗಿ ಉಪಯೋಗಿಸಿಕೊಳ್ಳಲು ಮತ್ತು ನೀರಿನ ಕರ ವಸೂಲಾತಿ ಹಾಗೂ ರೈತರನ್ನು ನೇರವಾಗಿ ಪಾಲುದಾರರನ್ನಾಗಿಸುವ ಉದ್ದೇಶದಿಂದ ನೀರು ಬಳಕೆದಾರರ ಸಂಘಗಳನ್ನು ಸ್ಥಾಪಿಸಲಾಗಿದೆ. ಆದರೆ ನೀರು ಬಳಕೆದಾರರ ಸಂಘಗಳು, ರೈತರು ಹಾಗೂ ಸರ್ಕಾರದ ನಡುವಿನ ಸಂಪರ್ಕ ಹಾಗೂ ಸಮನ್ವಯದ ಕೊರತೆಯಿಂದ ಸಂಘಗಳು ಇದ್ದೂ ಇಲ್ಲದಂತಾಗಿವೆ. ಬಹುತೇಕ ಕಡೆ ರೈತರಿಂದ ನೀರಿನ ಕರ ವಸೂಲಾತಿಯಾಗದೆ ಮತ್ತು ಸಿಬ್ಬಂದಿ ವೇತನ ಕೊಡಲು ಸಾಧ್ಯವಾಗದೆ ಸಂಘಗಳು ಶಾಶ್ವತವಾಗಿ ಬಾಗಿಲು ಮುಚ್ಚಿಕೊಂಡಿವೆ. ನೀರು ಬಳಕೆದಾರರ ಸಂಘ ಸ್ಥಾಪನೆಯಾದ ಮೇಲೆ ಅವುಗಳ ಚಟುವಟಿಕೆಗೆ ಸರ್ಕಾರದಿಂದ ವಾರ್ಷಿಕವಾಗಿ 1ರಿಂದ 2ಲಕ್ಷ ರೂ.ವರೆಗೆ ಅನುದಾನ ಬರುತ್ತಿತ್ತು. ಈ ಹಣದಲ್ಲಿ ಕಾಲುವೆಗಳ ನಿರ್ವಹಣೆ, ಸಿಬ್ಬಂದಿ ವೇತನಕ್ಕೆ ವೆಚ್ಚ ಮಾಡಲಾಗುತ್ತಿತ್ತು. ಆದರೆ ಕಳೆದೆರಡು ವರ್ಷಗಳಿಂದ ಈ ಅನುದಾನ ಬಂದಿಲ್ಲ. ಇದರಿಂದ ಅನೇಕ ಸಂಘಗಳು ತಮ್ಮ ಕಾರ್ಯಚಟುವಟಿಕೆಗಳನ್ನೇ ನಿಲ್ಲಿಸಿವೆ ಎಂಬುದು ಬಳಕೆದಾರರ ಸಂಘದ ಸದಸ್ಯರ ಆರೋಪ.

ಇಲ್ಲಿ ಬಳಕೆದಾರರ ಸಂಘಗಳು ಮುಚ್ಚಿರುವುದಕ್ಕೆ ರೈತರ ಧೋರಣೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ರೈತರು ಬಳಕೆದಾರರ ಸಂಘಗಳ ಮೂಲಕ ಕಾಲುವೆಗಳಿಂದ ತಮ್ಮ ಹೊಲಗಳಿಗೆ ನೀರು ಪಡೆಯುತ್ತಾರೆ. ಇದಕ್ಕೆ ಪ್ರತಿ ಎಕರೆಗೆ ವಾರ್ಷಿಕವಾಗಿ 400 ರೂ. ಕರ ನಿಗದಿ ಮಾಡಲಾಗಿದೆ. ದುರ್ದೈವ ಎಂದರೆ ಈ ಹಣವನ್ನೂ ಸಹ ರೈತರು ತುಂಬುತ್ತಿಲ್ಲ. ಹೀಗಾದರೆ ಸಂಘಗಳನ್ನು ನಡೆಸುವುದಾದರೂ ಹೇಗೆ ಎಂಬುದು ನೀರು ಬಳಕೆದಾರರ ಮಹಾಮಂಡಳದ ಕಾರ್ಯದರ್ಶಿ ವಿ.ಎಸ್‌. ಮುದೂ°ರ ಅವರ ಪ್ರಶ್ನೆ. ಹಾಗೆ ನೋಡಿದರೆ ರೈತರಿಗೆ ಈ ನೀರಿನ ಕರ ದೊಡ್ಡದಾದ ಮೊತ್ತವೇನಲ್ಲ. ಆದರೆ ಹಣ ಪಾವತಿ ಮಾಡದಿದ್ದರೂ ನಡೆಯುತ್ತದೆ. ನಮ್ಮ ಒತ್ತಾಯಕ್ಕೆ ಕಾಲುವೆಗಳಲ್ಲಿ ನೀರು ಹರಿದೇ ಹರಿಯುತ್ತದೆ. ಬದಲಾಗಿ ಸರ್ಕಾರ ನಮ್ಮ ಬಾಕಿ ಹಣ ಮನ್ನಾ ಮಾಡಲಿ ಎಂಬುದು ರೈತರ ಧೋರಣೆ. ಇದು ಪ್ರಾಧಿಕಾರ ಹಾಗೂ ನೀರು ಬಳಕೆದಾರರ ಸಂಘಕ್ಕೆ ಸಮಸ್ಯೆಯಾಗಿ ಕುಳಿತಿದೆ. ಈ ವಿಷಯದಲ್ಲಿ ರೈತರಲ್ಲಿ ತಿಳಿವಳಿಕೆ ಮೂಡಿಸುವ ಕಾರ್ಯ ಮೊದಲು ಆಗಬೇಕಿದೆ ಎಂಬುದು ಕಾಡಾ ಅಧಿಕಾರಿಗಳ ಹೇಳಿಕೆ.

Advertisement

 

ನೀರು ಬಳಕೆದಾರರ ಸಂಘಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ರೈತರು ತಪ್ಪದೇ ನೀರಿನ ಕರ ತುಂಬಬೇಕು. ಸರ್ಕಾರ ಸಹ ನೀರಿನ ಕರ ತುಂಬಿ ಬಳಕೆದಾರರ ಸಂಘದಿಂದ ಪತ್ರ ತಂದರೆ ಮಾತ್ರ ಉತಾರ ಕೊಡಲಾಗುವುದು ಎಂಬ ನಿಯಮ ಹೊರಡಿಸಬೇಕು. ಇದಲ್ಲದೆ ಸಂಘಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು.

-ಶ್ರೀಕಾಂತ ಸವಸುದ್ದಿ, ಕಾರ್ಯದರ್ಶಿ, ಕಲ್ಲೋಳ ನೀರು ಬಳಕೆದಾರರ ಸಂಘ

 

ನೀರು ಬಳಕೆದಾರರ ಸಂಘಗಳು ಬಹಳ ಶೋಚನೀಯ ಸ್ಥಿತಿಯಲ್ಲಿವೆ. ಸರ್ಕಾರದಿಂದ ಅನುದಾನ ಬರುವುದು ನಿಂತಿದೆ. ಈ ಕಡೆ ರೈತರು ಸಹ ನೀರಿನ ಕರ ತುಂಬುತ್ತಿಲ್ಲ. ಇದರಿಂದ ಕಾಲುವೆಗಳ ದುರಸ್ತಿ ಕಾರ್ಯ ಕೈಗೊಳ್ಳಲು ಆಗುತ್ತಿಲ್ಲ. ಸಿಬ್ಬಂದಿ ವೇತನವನ್ನೂ ಕೊಡಲು ಆಗುತ್ತಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಒಂದು ಕಠಿಣ ನಿರ್ಧಾರಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಈಗ ಉಳಿದಿರುವ ಸಂಘಗಳು ಸಹ ಬಾಗಿಲು ಹಾಕುತ್ತವೆ.

-ವಿ.ಎಸ್‌.ಮುದ್ನೂರ, ಕಾರ್ಯದರ್ಶಿ, ನೀರು ಬಳಕೆದಾರರ ಮಹಾಮಂಡಳ

 

ಪ್ರಾಧಿಕಾರ ವ್ಯವಸ್ಥಿತವಾಗಿ ನಡೆಯ ಬೇಕಾದರೆ ಅದರಲ್ಲಿ ನೀರು ಬಳಕೆದಾರರ ಸಂಘಗಳ ಪಾತ್ರ ಬಹಳ ಮುಖ್ಯ ವಾಗಿದೆ. ಆದರೆ ಅರ್ಧಕ್ಕೂ ಹೆಚ್ಚು ಸಂಘಗಳು ನಿಷ್ಕ್ರಿಯವಾಗಿವೆ. ರೈತರು ಹಣ ತುಂಬುತ್ತಿಲ್ಲ ಎಂಬ ಕಾರಣದಿಂದ ಈ ಸಂಘಗಳು ಮುಂದೆ ಬರುತ್ತಿಲ್ಲ. ಮೊದಲು ಈ ಸಂಘಗಳನ್ನು ಸಕ್ರಿಯಗೊಳಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ನಾವು ರೈತರು ಹಾಗೂ ಸಂಘಗಳನ್ನು ಜಾಗೃತಿಗೊ ಳಿಸುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ.

-ವಿಶ್ವನಾಥ ಪಾಟೀಲ, ಕಾಡಾ ಅಧ್ಯಕ್ಷ

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next