Advertisement

ರಾಜಕೀಯಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಬಳಕೆ ಅಕ್ಷಮ್ಯ : ಹೆಚ್ ಡಿಕೆ

03:39 PM Nov 09, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರ ಮತ್ತು ಬಿಜೆಪಿ ನಾಯಕರು ನಾಡಪ್ರಭು ಕೆಂಪೇಗೌಡರ ಹೆಸರನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಜನರು ಕೂಡ ನೋಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದ್ದಾರೆ.

Advertisement

ಬಸವನಗುಡಿಯಲ್ಲಿ ಜೆಡಿಎಸ್ ಕಚೇರಿಯನ್ನು ಉದ್ಘಾಟನೆ ಮಾಡುವ ಮುನ್ನ ನೆಟ್ಕಲ್ಲಪ್ಪ ವೃತ್ತದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿ, ಪ್ರತಿಮೆ ಸ್ಥಾಪನೆ ಮಾಡಿ ಒಕ್ಕಲಿಗರ ಮತ ಸೆಳೆಯಬಹುದು ಎಂದು ಬಿಜೆಪಿಯವರು ಲೆಕ್ಕಾಚಾರ ಮಾಡಿದ್ದಾರೆ. ಬಿಜೆಪಿ ನಾಯಕರು ಆ ರೀತಿ ಭ್ರಮೆಯಲ್ಲಿದ್ದರೆ ಜನರೇ ಆ ಭ್ರಮೆಯಿಂದ ಹೊರ ತರುತ್ತಾರೆ ಎಂದು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಕೆಂಪೇಗೌಡ ಪ್ರತಿಮೆ‌ ಅನಾವರಣ ಬಿಜೆಪಿ ಸರ್ಕಾರದ ನಿಯೋಜಿತ ಕಾರ್ಯಕ್ರಮ. ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ, ಹೋಗುತ್ತಾರೆ ಅಷ್ಟೇ. ಇದಕ್ಕೆ ನಾನು ಹೆಚ್ಚು ಮಹತ್ವ ಕೊಡಲು ಹೋಗುವುದಿಲ್ಲ. ಮೋದಿ ಅವರನ್ನು ಕರೆತಂದು ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಿಸಿದರೆ ಒಕ್ಕಲಿಗರ ಮತಗಳು ಬರುತ್ತದೆಂದು ಬಿಜೆಪಿಯವರು ಭ್ರಮೆಯಲ್ಲಿದ್ದರೆ, ಜನರೇ ಅದರಿಂದ ಹೊರ ತರುತ್ತಾರೆ ಎಂದರು.

ಬೆಂಗಳೂರು ದೊಡ್ಡಮಟ್ಟದಲ್ಲಿ ಬೆಳೆದಿದೆ. ಅದೇ ರೀತಿ ನಿರುದ್ಯೋಗ ಸಮಸ್ಯೆ ಇದೆ. ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತಾವಧಿಯಲ್ಲಿ ಬೆಂಗಳೂರಲ್ಲಿ ಹಲವಾರು ರೀತಿಯ ಅನಾಹುತ ಮಾಡಿದ್ದಾರೆ. ಅದನ್ನು ಸರಿಪಡಿಸುವ ಮೂಲಕ ಕೆಂಪೇಗೌಡರಿಗೆ ಗೌರವ ಕೊಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಧರ್ಮ, ಜಾತಿ ಬಿಟ್ಟರೆ ರಾಷ್ಟ್ರೀಯ ಪಕ್ಷಗಳಿಗೆ ಬೇರೆ ವಿಷಯ ಇಲ್ಲ

Advertisement

ಧರ್ಮ, ಜಾತಿ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜನರ ಮನಸ್ಸನ್ನು ಕೆಡಿಸುತ್ತವೆ. ಆ ಎರಡೂ ಪಕ್ಷಗಳಿಗೆ ಅಭಿವೃದ್ಧಿ ಬೇಕಿಲ್ಲ ಎಂದರು.

ಹಿಂದೂ ಪದದ ಕುರಿತು ಶಾಸಕ ಸತೀಶ್ ಜಾರಕಿಹೊಳಿ ಅವರು ನೀಡಿರುವ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಸೂಕ್ಷ್ಮ ವಿಚಾರ ಇಟ್ಟುಕೊಂಡು ಚುನಾವಣಾ ರಾಜಕೀಯ ಮಾಡುತ್ತಿವೆ. ಇದು ಸರಿಯಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಎಲ್ಲಾ ಅರಿವಿದ್ದರೂ ಜನರ ಸಮಸ್ಯೆ ಕೇಳಲು ಯಾರೂ ತಯಾರಿಲ್ಲ. ನಾನು ಹೊಡೆದಂಗೆ ಮಾಡ್ತೀನಿ, ನೀನು ಅತ್ತಂಗೆ ಮಾಡು ಎನ್ನುವಂಥ ನೀತಿ ಅನುಸರಿಸುತ್ತಿವೆ. ಇವರ ಯೋಗ್ಯತೆ ಏನು ಎನ್ನುವುದು ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.

ಬಸವನಗುಡಿ ಕ್ಷೇತ್ರದಲ್ಲಿ ಯಾತ್ರೆ

ನೆಟ್ಕಲ್ಲಪ್ಪ ವೃತ್ತದಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಸಾಗಿದರು. ಎನ್ ಆರ್ ಕಾಲೊನಿ, ಹನುಮಂತ ನಗರ, ಶ್ರೀನಗರ ಬಸ್ ನಿಲ್ದಾಣ, ಪಿಇ ಎಸ್ ಕಾಲೇಜು, ಹನುಮಂತನಗರ ಮುಖ್ಯರಸ್ತೆ, ಸೀತಾ ಸರ್ಕಲ್ ವರೆಗೆ ಸುಮಾರು 8 ಕಿ.ಮೀ. ದೂರ ಕ್ರಮಿಸಿದರು.

ಬಸವನಗುಡಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಇಂದಿನಿಂದ ಮನೆ ಮನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಪಕ್ಷದ ಮುಖಂಡ ಬಾಗೇಗೌಡ ಹಾಗೂ ವಿಧಾನ ಪರಿಷತ್ ಸದಶ್ಯ ಟಿ.ಎ. ಶರವಣ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಮ್ಮ ಪಕ್ಷದ ಅಭ್ಯರ್ಥಿ ಅರಮನೆ ಶಂಕರ್ ಗೆಲುವಿಗೆ ಎಲ್ಲರೂ ಕೆಲಸ ಮಾಡುತ್ತಾರೆ ಎಂದರು.

ಸೀತಾ ಸರ್ಕಲ್ ಬಳಿ ನೂತನವಾಗಿ ಸ್ಥಾಪಿಸಲಾಗಿರುವ ಜೆಡಿಎಸ್ ಕಚೇರಿಯನ್ನು ಮಾಜಿ ಮುಖ್ಯಮಂತ್ರಿಗಳು ಉದ್ಘಾಟಿಸಿದರು.ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ, ಬಸವನಗುಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್, ಪಕ್ಷದ ಹಿರಿಯ ಮುಖಂಡ ಬಾಗೇಗೌಡ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next