ಚಿಂತಾಮಣಿ: ತಾಲೂಕಿನಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ನರೇಗಾ) ದುರುಪಯೋಗ ಪಡಿಸಿಕೊಳ್ಳುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ತಾಲೂಕಿನಲ್ಲಿ ಕಂಡುಬಂದಿದೆ.
ಉದ್ಯೋಗ ಖಾತ್ರಿ ಯೋಜನೆ ಎಂದರೆ ಸೂಚಿಸುವಂತೆ ಕೂಲಿ ಇಲ್ಲದ ಬಡ ಜನರಿಗೆ ಸರ್ಕಾರದಿಂದಲೇ ಕೆಲಸ ಕೊಟ್ಟು ಕೂಲಿ ಕೊಡುವುದು ಈ ಯೋಜನೆಯ ಉದ್ದೇಶ. ಆದರೆ ಗ್ರಾಮೀಣ ಭಾಗಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ ರೈತರು ತಮ್ಮ ಜಮೀನುಗಳಲ್ಲಿ ಬದು, ಕಾಲುವೆ, ಗೋಗುಂಟೆಗಳು ಸೇರಿದಂತೆ ಕೆರೆಯಲ್ಲಿ ಹುಳು ತೆಗೆಯುವುದು ಇನ್ನಿತರ ಹಲವು ಕಾಮಗಾರಿಗಳನ್ನು ಈ ಯೋಜನೆಯಡಿ ಮಾಡಿಕೊಳ್ಳುವ ಅವಕಾಶವಿರುತ್ತೆ. ಆದರೆ ಆಗುತ್ತಿರುವುದೇ ಬೇರೆ.
ಮಾನವ ಕೂಲಿಗೆ ಕತ್ತರಿ: ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ನಂದಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಅಣ್ಣೆನಹಳ್ಳಿ ಗ್ರಾಮದ ಕೆರೆಯಲ್ಲಿ ಮುಖಂಡರೊಬ್ಬರು ಗೋಗುಂಟೆ ಕಾಮಗಾರಿ ಮಾಡಿಸಿದ್ದು, ಸದರಿ ಕಾಮಗಾರಿಯನ್ನು ಜಾಬ್‌ಕಾರ್ಡ್ ಹೊಂದಿರುವ ಜನರಿಗೆ ಕೆಲಸ ಕೊಟ್ಟು ಗ್ರಾಪಂ ಅಧಿಕಾರಿಗಳು ಖುದ್ದು ಸ್ಥಳದಲ್ಲಿದ್ದು ಕೆಲಸ ಮಾಡಿಸಬೇಕು. ಆದರೆ ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋಗುಂಟೆ ಕಾಮಗಾರಿಯನ್ನು ಜೆಸಿಬಿ ಯಂತ್ರದ ಮೂಲಕ ನಿರ್ವಹಿಸಿದ್ದು, ಮಾನವ ಕೂಲಿಗೆ ಕತ್ತರಿ ಹಾಕಿದಂತಾಗಿದೆ.
3 ಲಕ್ಷ ರೂ.ವೆಚ್ಚದ ಕಾಮಗಾರಿ ದುರುಪಯೋಗ: ತಾಲೂಕಿನ ನಂದಿಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಅಣ್ಣೆನಹಳ್ಳಿ ಗ್ರಾಮದಲ್ಲಿ ದ್ಯೋಗ ಖಾತ್ರಿ ಯೋಜನೆಯಡಿ ಮಾಡುತ್ತಿರುವ 3 ಲಕ್ಷ ಮೌಲ್ಯದ ಗೋಗುಂಟೆ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದ್ದು, ಕಾಮಗಾರಿ ಪರಿಶೀಲಿಸದೆ ಅನುದಾನ ದುರ್ಬಳಕೆಗೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಾನೂನು ಕ್ರಮ: ಈ ಕುರಿತು ಪ್ರತಿಕ್ರಿಯಿಸಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ, ಉದ್ಯೋಗ ಖಾತ್ರಿ ಯೋಜನೆಯಡಿಯ ಕಾಮಗಾರಿಗಳನ್ನು ಜೆಸಿಬಿ ಯಂತ್ರ ಬಳಕೆ ಮಾಡಿ ಕೆಲಸ ಮಾಡುವುದು ಕಾನೂನು ಬಾಹಿರ. ಆದ್ದರಿಂದ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದೇಶದಲ್ಲಿ ಗ್ರಾಮೀಣ ಭಾಗದ ಜನರು ಪ್ರತಿದಿನ ಕೂಲಿಗಾಗಿ ಪರಿತಪಿಸುವುದನ್ನು ತಡೆಯುವ ದೃಷ್ಟಿಯಿಂದ ವರ್ಷಕ್ಕೆ 150 ದಿನಗಳ ಕಾಲ ಬಡವರಿಗೆ ಕೂಲಿ ದೊರೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೆ ತಂದು ಪಂಚಾಯಿತಿ ವತಿಯಿಂದ ಹಲವು ರೀತಿಯ ಕಾಮಗಾರಿಗಳು ಮಾಡಲು ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಆದರೆ ತಾಪಂ ಅಧಿಕಾರಿಗಳ ನಿರ್ಲಕ್ಷದಿಂದ ಖಾತ್ರಿ ಯೋಜನೆಯನ್ನು ಕೆಲ ಮುಖಂಡರು ದುರುಪಯೋಗ ಪಡಿಸಿಕೊಂಡು ಬಡವರಿಗೆ ಅನ್ಯಾಯ ಮಾಡುತ್ತಿರುವುದು ತಾಲೂಕಿನ ಹಲವು ಗ್ರಾಪಂಗಳಲ್ಲಿ ಕಂಡುಬರುತ್ತಿರುವುದು ಖೇಧಕರ ಸಂಗತಿ.
ಮುಂದುವರಿದ ಕಾಮಗಾರಿ: ಗ್ರಾಮದಲ್ಲಿ ನರೇಗಾ ಯೋಜನೆ ದುರುಪಯೋಗದ ಬಗ್ಗೆ ಪಿಡಿಒ ಅಧಿಕಾರಿಗಳಿಗೆ ತಿಳಿಸಿದೆ. ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಮಗಾರಿ ಮಾತ್ರ ನಡೆಯುತ್ತಲೇ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.