Advertisement

ಬೆಳೆಗಳಿಗೆ ರಾಸಾಯನಿಕ ಔಷಧ ಬಳಕೆ ಮಾರಕ

05:08 PM Apr 30, 2022 | Team Udayavani |

ಚಿಕ್ಕಮಗಳೂರು: ಆಧುನಿಕ ದಿನಗಳಲ್ಲಿ ಪ್ರತಿಯೊಂದು ಬೆಳೆಗಳಿಗೆ ರಾಸಾಯನಿಕ ಔಷಧಗಳನ್ನು ಬಳಸಲಾಗುತ್ತಿದ್ದು, ಇದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಮತ್ತು ಸಮಾಜದ ಸ್ವಾಸ್ಥ ಹಾಳು ಮಾಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್. ಭೋಜೇಗೌಡ ಹೇಳಿದರು.

Advertisement

ಶುಕ್ರವಾರ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ತಾಲೂಕು ಆಡಳಿತ, ತಾಪಂ ಹಾಗೂ ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಉಚಿತ ಆರೋಗ್ಯ ಮತ್ತು ಶಿಕ್ಷಣವನ್ನು ಸಾಧಿಸಲು ಸಾಧ್ಯವಾಗದಿರುವುದು ಬೇಸರ ಸಂಗತಿಯಾಗಿದೆ. ಶಿಕ್ಷಣ ಮತ್ತು ಆರೋಗ್ಯ ದುಬಾರಿಯಾಗಿದ್ದು ಇದು ಉಳ್ಳವರ ಪಾಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಸಿ.ಟಿ. ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ನಮ್ಮ ಜೀವನ ಪದ್ಧತಿಯಲ್ಲಿನ ಬದಲಾವಣೆ ಹಾಗೂ ಆಹಾರ ಪದ್ಧತಿಯಲ್ಲಿನ ದೋಷಗಳಿಂದಾಗಿ ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು.

ಉತ್ತಮ ಆರೋಗ್ಯ ಇಲ್ಲದೆ ಹೋದರೆ ಸಂಪತ್ತು ಐಶ್ವರ್ಯ ಇದ್ದು ಪ್ರಯೋಜನವಿಲ್ಲ ಎಂದ ಅವರು, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳಬೇಕು. ಉತ್ತಮ ಆರೋಗ್ಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

Advertisement

ಜಿಲ್ಲೆ ಹಾಗೂ ತಾಲೂಕು ಮಟ್ಟಗಳಲ್ಲಿ ಆರೋಗ್ಯ ಮೇಳಗಳನ್ನು ಆಯೋಜಿಸುವಾಗ ಪ್ರತೀ ಸಂದರ್ಭದಲ್ಲಿಯೂ ಹೆಚ್ಚು ನೋಂದಣಿಯಾಗುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ಕುರಿತು ಗಂಭೀರವಾಗಿ ಚಿಂತಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಸ್.ಎನ್. ಉಮೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ಜಿಲ್ಲಾಧಿಕಾರಿ ಕೆ.ಎನ್. ರಮೇಶ್‌, ಜಿಲ್ಲಾ ಸರ್ಜನ್‌ ಡಾ| ಮೋಹನ್‌ಕುಮಾರ್‌, ತಾಪಂ ಆಡಳಿತಾಧಿಕಾರಿ ವಿ.ನಾಗರಾಜ್, ಉಪ ವಿಭಾಗದ ಹಿರಿಯ ಉಪವಿಭಾಗಾಧಿಕಾರಿ ಡಾ| ಎಚ್‌.ಎಲ್‌. ನಾಗರಾಜ್‌, ತಾಲೂಕು ತಹಶೀಲ್ದಾರ್‌ ಡಾ| ಕೆ.ಜೆ. ಕಾಂತರಾಜ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್‌.ಕೆ. ತಾರಾನಾಥ, ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜು, ತಾಲೂಕು ಆರೋಗ್ಯಾಧಿಕಾರಿ ಡಾ|ಎಸ್‌. ಸೀಮಾ ಮತ್ತು ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಗೀತಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next