Advertisement

ಸರ್ಕಾರಿ ಸೌಲಭ್ಯ ಸದುಪಯೋಗಿಸಿಕೊಳ್ಳಿ: ಮಂಜುನಾಥ್‌

09:47 PM Mar 03, 2020 | Team Udayavani |

ಹುಣಸೂರು: ತಾಲೂಕಿನ ನಾಲ್ಕು ಸರಕಾರಿ ಪದವಿ ಕಾಲೇಜುಗಳ ಮೊದಲ ವರ್ಷದ 1,470 ವಿದ್ಯಾರ್ಥಿಗಳಿಗೆ ಜ್ಞಾನದೀಪ್ತಿ ಯೋಜನೆಯಡಿ ಶಾಸಕ ಎಚ್‌.ಪಿ.ಮಂಜುನಾಥ್‌ ಸರಕಾರದ ಉಚಿತ ಲ್ಯಾಪ್‌ಟಾಪ್‌ ವಿತರಿಸಿದರು.

Advertisement

ನಗರದ ಸರಕಾರಿ ಮಹಿಳಾ ಕಾಲೇಜು ಹಾಗೂ ಡಿ.ಡಿ.ಅರಸು ಕಾಲೇಜಿನಲ್ಲಿ ನಡೆದ ಪ್ರತ್ಯೇಕ ಸಮಾರಂಭದಲ್ಲಿ ನಗರ ಮತ್ತು ಹನಗೋಡು, ಬಿಳಿಕೆರೆ ಪದವಿಕಾಲೇಜಿನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಿ ಮಾತನಾಡಿದ ಅವರು, 2016-17ರಲ್ಲಿ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಲ್ಯಾಪ್‌ಟಾಪ್‌ ವಿತರಣೆ ಯೋಜನೆ ಜಾರಿಗೊಳಿಸಿದ್ದರು, ಆ ನಂತರದಲ್ಲಿ ಯೋಜನೆ ನಿಂತು ಹೋಗಿತ್ತು, ಇದೀಗ ಮತ್ತೆ ಜಾರಿಗೊಳಿಸಿದೆ. ಇದನ್ನು ಸದ್ಬಳಕೆ ಮಾಡಿಕೊಂಡು, ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಪೋಷಕರ ಕಾಳಜಿ ಮುಖ್ಯ: ಕಾಲೇಜು ವತಿಯಿಂದ ಕರೆಯುವ ಪೋಷಕರ ಸಭೆಗೆ ಸಾಕಷ್ಟು ಮಂದಿ ಬರುವುದಿಲ್ಲ, ಆದರೆ ಲ್ಯಾಪ್‌ಟಾಪ್‌ ಪಡೆಯುವ ಸಲುವಾಗಿ ಈಗ ಮಕ್ಕಳ ಜೊತೆ ಎಲ್ಲರೂ ಬಂದಿದ್ದೀರಾ, ನಿಮ್ಮ ಮಕ್ಕಳ ಕಲಿಕೆ ಹಾಗೂ ಪ್ರಗತಿಯ ಬಗ್ಗೆ ಆಗಾಗ್ಗೆ ಕಾಲೇಜಿಗೆ ಭೇಟಿ ನೀಡುತ್ತಿರಬೇಕು, ಇದರಿಂದ ನಿಮ್ಮ ಮಕ್ಕಳಲ್ಲಿ ಹೆಚ್ಚಿನ ಪ್ರಗತಿ ನಿರೀಕ್ಷಿಸಬಹುದಾಗಿದೆ. ವರ್ಷಕ್ಕೆರಡು ಬಾರಿ ನಡೆಯುವ ಪೋಷಕರ ಸಭೆಗೆ ಕಡ್ಡಾಯವಾಗಿ ಭಾಗವಹಿಸಿ ಎಂದು ಮನವಿ ಮಾಡಿದರು.

ಮಹಿಳಾ ಕಾಲೇಜು ಸಮಗ್ರ ಅಭಿವೃದ್ಧಿ: ಕಾಲೇಜಿಗೆ 4.98 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ. ಈ ರಜೆಯಲ್ಲಿ ಕಟ್ಟಡ ಕಾಮಗಾರಿ ನಡೆಯಲಿದೆ. ಅಲ್ಲದೆ ಕಾಲೇಜಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕಟಿಬದ್ಧನಾಗಿದ್ದೇನೆ ಎಂದು ಮಾಹಿತಿ ನೀಡಿದರು.

ಡಿ.ಡಿ.ಅರಸ್‌ ಕಾಲೇಜು ಅಭಿವೃದ್ಧಿಗೆ ಕ್ರಮ: ತಾವು ವ್ಯಾಸಂಗ ಮಾಡಿರುವ ಈ ಕಾಲೇಜಿನ ಅಭಿವೃದ್ಧಿ ನನ್ನ ಕನಸು, 2020-21ನೇ ಸಾಲಿನಲ್ಲಿ ಮಹಿಳಾ ಹಾಸ್ಟೆಲ್‌ ಆರಂಭಿಸಲಾಗುವುದು. ಒಳಾಂಗಣ ಕ್ರೀಡಾಂಗಣ, ಸ್ನೇಹ ಮಂಟಪ ಹಾಗೂ ಆವರಣವನ್ನು ಅಭಿವೃದ್ಧಿಗೊಳಿಸಲಾಗುವುದು. ಕ್ಯಾಂಟೀನ್‌ ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ತಾಲೂಕಿನ ಹನಗೋಡು, ಬಿಳಿಕೆರೆ ಕಾಲೇಜು ಸೇರಿದಂತೆ ನಾಲ್ಕು ಕಾಲೇಜುಗಳನ್ನು ಖಾಸಗಿ ಕಾಲೇಜುಗಳಿಗೆ ಮೀರಿಸುವಂತೆ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದರು.

Advertisement

ಸದನದಲ್ಲಿ ಪ್ರಶ್ನಿಸುವೆವು: ಲ್ಯಾಪ್‌ಟಾಪ್‌ ವಿತರಣೆಯಲ್ಲಿ ದ್ವಿತೀಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತಾರತಮ್ಯವಾಗಿರುವುದು ಬೇಸರ ತಂದಿದೆ. ಈ ಬಗ್ಗೆ ಶಾಸಕ ಮಿತ್ರರೊಂದಿಗೆ ಚರ್ಚಿಸಿದ್ದು, ಕನಿಷ್ಠ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾದರೂ ಲ್ಯಾಪ್‌ಟಾಪ್‌ ವಿತರಣೆ ಮಾಡಬೇಕೆಂದು ಸದನದಲ್ಲಿ ಸರಕಾರದ ಮೇಲೆ ಒತ್ತಡ ತರುತ್ತೇವೆಂದು ತಿಳಿಸಿದರು.

ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಡಾ.ಪುಷ್ಪಅಮರ್‌ನಾಥ್‌ ಮಾತನಾಡಿ, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಂದನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಸರಕಾರ ಅನೇಕ ಪ್ರೋತ್ಸಾಹ ನೀಡುತ್ತಿದೆ. ಇದನ್ನು ಬಳಸಿಕೊಂಡು ಪ್ರಗತಿ ಕಾಣಬೇಕೆಂದು ಹೇಳಿದರು.

ಜಿಪಂ ಉಪಾಧ್ಯಕ್ಷೆ ಗೌರಮ್ಮ, ತಾಪಂ ಅಧ್ಯಕ್ಷೆ ಪದ್ಮಮ್ಮ, ನಗರಸಭಾ ಸದಸ್ಯರಾದ ಶ್ರೀನಾಥ್‌, ಪ್ರಿಯಾಂಕತೋಮಸ್‌, ಗ್ರಾಪಂ ಅಧ್ಯಕ್ಷೆ ಸುಮಿತ್ರ, ಸಿಡಿಸಿ ಉಪಾಧ್ಯಕ್ಷ ಧರ್ಮನಾರಾಯಣ್‌, ಪ್ರಾಚಾರ್ಯರಾದ ಡಾ.ವೆಂಕಟೇಶಯ್ಯ, ಜ್ಞಾನಪ್ರಕಾಶ್‌, ಡಾ.ಹನುಮಂತರಾಯ, ಡಾ.ಲಿಂಗೇಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next