Advertisement
ತನ್ನ ಸಮರ ನೌಕೆಯೊಂದು ಈ ತಿಂಗಳಲ್ಲಿ ಎರಡನೇ ಬಾರಿಗೆ ತೈವಾನ್ ಜಲ ಸಂಧಿಯ ಮೂಲಕ ಪ್ರಯಾಣಿಸಿದೆ ಎಂದು ಅಮೆರಿಕದ ಸೇನೆ ಶುಕ್ರವಾರ ತಿಳಿಸಿದೆ. “ಕೋವಿಡ್-19 ಲಾಭ ಪಡೆದುಕೊಂಡು ದಕ್ಷಿಣ ಚೀನ ಸಮುದ್ರದಲ್ಲಿ ತನ್ನ ಆಧಿಪತ್ಯ ಸಾಧಿಸಲು ಚೀನ ಮುಂದಾಗುತ್ತಿದೆ. ಕಡಲಾಚೆಯ ತೈಲ ಮತ್ತು ಅನಿಲ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಕೂಡ ಯೋಜಿಸುತ್ತಿದೆ’ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪೆಯೋ ಆರೋಪಿಸಿದ ಕೆಲವೇ ತಾಸುಗಳ ಅನಂತರ ಅಮೆರಿಕ ಸೈನ್ಯದ ಈ ಹೇಳಿಕೆ ಹೊರಬಿದ್ದಿದೆ.
ದಕ್ಷಿಣ ಚೀನ ಸಮುದ್ರದ ಬಹುಭಾಗ ಮತ್ತು ಅಲ್ಲಿನ ದ್ವೀಪರಾಷ್ಟ್ರಗಳು ತನ್ನವು ಎಂದು ಚೀನ ಪ್ರತಿಪಾದಿಸುತ್ತಿದೆ. ಈ ತಿಂಗಳ ಆರಂಭದಲ್ಲಿ ಆಡಳಿತಾತ್ಮಕ ಅನುಕೂಲಕ್ಕಾಗಿ ಇಲ್ಲಿ ಎರಡು ಜಿಲ್ಲೆಗಳನ್ನು ಸ್ಥಾಪಿಸಿದ್ದಾಗಿ ಚೀನ ಘೋಷಿಸಿತ್ತು. ಕಳೆದ ವಾರ ತನ್ನ ನಿಯಂತ್ರಿತ ಪ್ರದೇಶಗಳ ವ್ಯಾಪ್ತಿಯೊಳಗೆ ಚೀನದ ಕರಾವಳಿ ಕಾವಲು ಪಡೆಯ ನಾಲ್ಕು ಹಡಗುಗಳು 90 ನಿಮಿಷಗಳ ಕಾಲ ಒಳನುಸುಳಿದ್ದಕ್ಕಾಗಿ ಜಪಾನ್ ಎಚ್ಚರಿಕೆ ನೀಡಿತ್ತು. ಎ.16ರಂದು ಚೀನದ ಕಣ್ಗಾವಲು ನೌಕೆಯೊಂದು ತನ್ನ ನಿಯಂತ್ರಿತ ಪ್ರದೇಶದೊಳಕ್ಕೆ ನುಸುಳಿದ್ದಕ್ಕಾಗಿ ವಿಯೆಟ್ನಾಂ ಪ್ರತಿಭಟಿಸಿತ್ತು. ಕೆಂಪು ದೇಶದ ಈ ದುಸ್ಸಾಹಸಗಳು ಭಾರತಕ್ಕೂ ಸಮಸ್ಯೆ ತಂದೊಡ್ಡಿವೆ. ಶೇ.55ರಷ್ಟು ಭಾರತೀಯ ಸರಕು ಸಾಗಣೆ ಹಡಗುಗಳು ಈ ಜಲಮಾರ್ಗದ ಮೂಲಕವೇ ಸಾಗುತ್ತವೆ. ಅಲ್ಲದೆ, ದೇಶದ ತೈಲ ಉತ್ಪಾದಕ ಒಎನ್‌ಜಿಸಿ ವಿದೇಶಿ ನಿಗಮವು ವಿಯೆಟ್ನಾಂ ಸಹಯೋಗದಲ್ಲಿ ಇಲ್ಲಿ ಅನಿಲ ಉತ್ಪಾದನ ಯೋಜನೆಯಲ್ಲಿ ತೊಡಗಿದೆ.
Related Articles
ಯುದ್ಧ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳ ಸುಲಭ ಸಾಗಣೆಗೆ ಅನುಕೂಲವಾಗುವಂತೆ ಎಲ್ಲ ಋತುಗಳಲ್ಲೂ ಸಂಚರಿಸ ಬಹುದಾದ, 40 ಟನ್‌ಗಳಷ್ಟು ಭಾರ ಹೊರುವ ಸಾಮರ್ಥ್ಯವುಳ್ಳ ಸೇತುವೆಯೊಂದನ್ನು ಅರುಣಾಚಲ ಪ್ರದೇಶದ ಡೋಕ್ಲಾಮ್ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಮುಕ್ತ ಗೊಳಿಸಲಾಗಿದೆ. ಇದು ಭಾರತ ಮತ್ತು ಚೀನ ನಡುವೆ ಮತ್ತೂಂದು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.
Advertisement
2017ರಲ್ಲಿ ಸುಮಾರು ಒಂದು ತಿಂಗಳ ಕಾಲ ಭಾರತ ಮತ್ತು ಚೀನ ಸೈನಿಕರ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದ ಡೋಕ್ಲಾಮ್ ವ್ಯಾಪ್ತಿಯಲ್ಲಿಯೇ ಈ ಸೇತುವೆ ಉದ್ಘಾಟನೆಗೊಂಡಿದೆ.