ನ್ಯೂಯಾರ್ಕ್: ಒಂದೆಡೆ ಅಗ್ರ ಶ್ರೇಯಾಂಕಿತ ಆಟಗಾರರು ಒಬ್ಬೊಬ್ಬರಾಗಿ ನಿರ್ಗಮಿಸುತ್ತಿದ್ದರೆ, ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಯುಎಸ್ ಓಪನ್ ಪಂದ್ಯಾವಳಿಯ 3ನೇ ಸುತ್ತಿಗೆ ಮುನ್ನಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ದಕ್ಷಿಣ ಆಫ್ರಿಕಾದ ಲಾಯ್ಡ ಹ್ಯಾರಿಸ್ ವಿರುದ್ಧ 6-3, 6-1, 7-6 (7 -4) ಅಂತರದಿಂದ ಗೆದ್ದು ಬಂದರು.
ಕಾರ್ಲೋಸ್ ಅಲ್ಕರಾಜ್ ಅವರಿನ್ನು ಬ್ರಿಟನ್‌ನ 26ನೇ ಶ್ರೇಯಾಂಕಿತ ಟೆನಿಸಿಗ ಡ್ಯಾನ್ ಇವಾನ್ಸ್ ವಿರುದ್ಧ ಸೆಣಸಲಿದ್ದಾರೆ. ಇವರೆದುರಿನ ಹಿಂದಿನೆರಡೂ ಪಂದ್ಯಗಳಲ್ಲಿ ಅಲ್ಕರಾಜ್ ಜಯ ಸಾಧಿಸಿದ್ದಾರೆ.
“ಬಾಟಮ್ ಹಾಫ್ ಡ್ರಾ’ದಲ್ಲಿದ್ದ 4ನೇ ಶ್ರೇಯಾಂಕದ ಹೋಲ್ಜರ್ ರುನೆ, 5ನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್, ನಂ. 7 ಆಟಗಾರ ಸ್ಟೆಫನಸ್ ಸಿಸಿಪಸ್ ಅವರೆಲ್ಲ ಈಗಾಗಲೇ ಕೂಟದಿಂದ ಹೊರಬಿದ್ದಿದ್ದಾರೆ. ಅಲ್ಕರಾಜ್ ಹೊರತುಪಡಿಸಿದರೆ ಟೇಲರ್ ಫ್ರಿಟ್ಜ್ ಮಾತ್ರ ಇಲ್ಲಿ ಉಳಿದಿರುವ ಅಗ್ರ ಹತ್ತರೊಳಗಿನ ಆಟಗಾರ. ಆದರೆ “ಟಾಪ್ ಹಾಫ್ ಡ್ರಾ’ದಲ್ಲಿ ಶ್ರೇಯಾಂಕಿತ ಆಟಗಾರರನೇಕರು ಉಳಿದುಕೊಂಡಿದ್ದಾರೆ. ಡ್ಯಾನಿಲ್ ಮೆಡ್ವೆಡೇವ್ (ನಂ. 3), ಜಾನಿನ್ ಸಿನ್ನರ್ (ನಂ. 6), ಆ್ಯಂಡ್ರೆ ರುಬ್ಲೇವ್ (ನಂ. 8), ಅಲೆಕ್ಸಾಂಡರ್ ಜ್ವೆರೇವ್ (ನಂ. 12) ಇಲ್ಲಿನ ಪ್ರಮುಖರು.
2012ರ ಚಾಂಪಿಯನ್ ಆ್ಯಂಡಿ ಮರ್ರೆ ಕೂಡ ಆಟ ಮುಗಿಸಿ ಮರಳಿದ್ದಾರೆ. ಅವರನ್ನು ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ 6-3, 6-4, 6-1ರಿಂದ ಸೋಲಿಸಿದರು.
ವನಿತಾ ಸಿಂಗಲ್ಸ್‌ನಲ್ಲಿ ಕಳೆದ ವರ್ಷದ ರನ್ನರ್ ಅಪ್ ಓನ್ಸ್ ಜೆಬ್ಯುರ್, ಜೆಸ್ಸಿಕಾ ಪೆಗುಲಾ, ಅರಿನಾ ಸಬಲೆಂಕಾ 3ನೇ ಸುತ್ತು ಪ್ರವೇಶಿಸಿದ್ದಾರೆ.