Advertisement

ಯುಎಸ್‌ ಓಪನ್‌: ಮೊದಲ ಸುತ್ತಿನಲ್ಲೇ ಹಾಲೆಪ್‌-ಶರಪೋವಾ ಮುಖಾಮುಖೀ

07:20 AM Aug 27, 2017 | Harsha Rao |

ನ್ಯೂಯಾರ್ಕ್‌: ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿರುವ ಮರಿಯಾ ಶರಪೋವಾ ಯುಎಸ್‌ ಓಪನ್‌ ಟೆನಿಸ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ವಿಶ್ವದ ನಂ.2 ಆಟಗಾರ್ತಿ ಸಿಮೋನಾ ಹಾಲೆಪ್‌ ಅವರನ್ನು ಎದುರಿಸುವ ಮೂಲಕ ಗ್ರ್ಯಾನ್‌ಸ್ಲಾಮ್‌ ಅಭಿಯಾನವನ್ನು ಮರಳಿ ಆರಂಭಿಸಲಿದ್ದಾರೆ.15 ತಿಂಗಳ “ಉದ್ದೀಪನ ನಿಷೇಧ’ದಿಂದ ಮುಕ್ತರಾದ ಬಳಿಕ ಶರಪೋವಾ ಆಡುತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ ಇದಾಗಿದೆ. 

Advertisement

ಎಪ್ರಿಲ್‌ನಲ್ಲಿ ನಡೆದ “ಸ್ಟಟ್‌ಗಾರ್ಟ್‌’ ಪಂದ್ಯಾವಳಿ ಯಲ್ಲೂ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದ ಶರಪೋವಾ, ಅಲ್ಲಿ ಸೆಮಿಫೈನಲ್‌ ತನಕ ಸಾಗಿದ್ದರು. ಆದರೆ ಫ್ರೆಂಚ್‌ ಓಪನ್‌ ಸಂಘಟಕರು ಇವರಿಗೆ ವೈಲ್ಡ್‌ಕಾರ್ಡ್‌ ನಿರಾಕರಿಸಿದರು. ಗಾಯಾಳಾದ ಕಾರಣ ವಿಂಬಲ್ಡನ್‌ ಕೂಟದಲ್ಲಿ ಆಡಲಾಗಲಿಲ್ಲ. 

5 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ಶರಪೋವಾ 2006ರಷ್ಟು ಹಿಂದೆ “ನ್ಯೂಯಾರ್ಕ್‌ ರಾಣಿ’ಯಾಗಿ ಮೆರೆದಿದ್ದರು. ಆದರೆ ಕಳೆದ 4 ಯುಎಸ್‌ ಓಪನ್‌ ಪಂದ್ಯಾವಳಿಗಳಲ್ಲಿ ಮೂರರಲ್ಲಿ ಆಡಿರಲಿಲ್ಲ. ಕೊನೆಯ ಸಲ ಇಲ್ಲಿ ಕಾಣಿಸಿಕೊಂಡದ್ದು 2014ರಲ್ಲಿ. ಅಂದು 4ನೇ ಸುತ್ತಿನಲ್ಲಿ ಎಡವಿದ್ದರು.

ಮಾಜಿ ನಂ.1 ಆಟಗಾರ್ತಿಯಾಗಿರುವ ಶರಪೋವಾ ರೊಮೇನಿಯಾದ ಸಿಮೋನಾ ಹಾಲೆಪ್‌ ವಿರುದ್ಧ ಆಡಿದ ಎಲ್ಲ 6 ಪಂದ್ಯಗಳಲ್ಲೂ ಜಯ ಸಾಧಿಸಿ ಸ್ಪಷ್ಟ ಮೇಲುಗೈ ಸಾಧಿಸಿದ್ದಾರೆ. ಇತ್ತ ಹಾಲೆಪ್‌ ಕೆಲವು ದಿನಗಳ ಹಿಂದಷ್ಟೇ ಸಿನ್ಸಿನಾಟಿ ಫೈನಲ್‌ನಲ್ಲಿ ಗಾರ್ಬಿನ್‌ ಮುಗುರುಜಾ ವಿರುದ್ಧ ಸೋಲನುಭವಿಸಿ ಬಂದಿದ್ದಾರೆ. 3ನೇ ಸಲ ನಂ.1 ಎನಿಸಿಕೊಳ್ಳುವ ಅವಕಾಶದಿಂದ ಹಾಲೆಪ್‌ ವಂಚಿತ ರಾಗಿದ್ದರು. 

ಅಕಸ್ಮಾತ್‌ ಶರಪೋವಾ ಎದುರಿನ ಸೋಲಿನ ಸರಪಳಿ ಕಡಿದು ಹಾಲೆಪ್‌ ಗೆಲುವಿನ ಅಭಿಯಾನ ಮುಂದುವರಿಸಿದರೆ ಕ್ವಾರ್ಟರ್‌ ಫೈನಲ್‌ನಲ್ಲಿ ಬ್ರಿಟನ್ನಿನ ಜೊಹಾನ್ನಾ ಕೊಂಟಾ ಅವರನ್ನು ಎದುರಿಸುವ ಸಾಧ್ಯತೆ ಇದೆ.

Advertisement

– ಕೆರ್ಬರ್‌ ವರ್ಸಸ್‌ ಒಸಾಕಾ
ವಿಶ್ವದ ನಂ.1 ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ಪೋಲೆಂಡಿನ ಮಾಗಾx ಲಿನೆಟ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಕ್ವಾರ್ಟರ್‌ ಫೈನಲ್‌ ತನಕ ಮುಂದುವರಿದರೆ ರಶ್ಯದ ಸ್ವೆತ್ಲಾನಾ ಕುಜ್ನೆತ್ಸೋವಾ ಸವಾಲನ್ನು ಎದುರಿಸಬೇಕಾಗಬಹುದು.

ಹಾಲಿ ಚಾಂಪಿಯನ್‌ ಆ್ಯಂಜೆಲಿಕ್‌ ಕೆರ್ಬರ್‌ ಜಪಾನಿನ ನವೋಮಿ ಒಸಾಕಾ ವಿರುದ್ಧ ಪ್ರಥಮ ಸುತ್ತಿನ ಪಂದ್ಯ ಆಡುವರು. ಇವರಿಗೆ ಉಕ್ರೇನಿನ ಎಲಿನಾ ಸ್ವಿಟೋಲಿನಾ ಕ್ವಾರ್ಟರ್‌ ಫೈನಲ್‌ ಎದುರಾಳಿ ಆಗುವ ಸಾಧ್ಯತೆ ಇದೆ.
3ನೇ ಶ್ರೇಯಾಂಕದ ಗಾರ್ಬಿನ್‌ ಮುಗುರುಜಾ ಮತ್ತು ಡೆನ್ಮಾರ್ಕ್‌ನ ಕ್ಯಾರೋಲಿನಾ ವೋಜ್ನಿಯಾಕಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಾಡುವ ಸಂಭವವಿದೆ. ವೋಜ್ನಿಯಾಕಿ ಅಮೆರಿಕದ ವರ್ವರಾ ಲೆಪೆcಂಕೊ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡುವರು.

ಅಮೆರಿಕದ 37ರ ಹರೆಯದ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ಕೂಡ ಅರ್ಹತಾ ಆಟಗಾರ್ತಿಯನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದು, 4ನೇ ಸುತ್ತಿನಲ್ಲಿ ಕ್ಯಾರೋಲಿನ್‌ ವೋಜ್ನಿಯಾಕಿ ವಿರುದ್ಧ ಆಡುವ ಸಾಧ್ಯತೆಯೊಂದು ಗೋಚರಿಸುತ್ತಿದೆ. ಇವೆಲ್ಲವೂ ಆಟಗಾರರ ರ್‍ಯಾಂಕಿಂಗ್‌ ಆಧಾರಿತ ಲೆಕ್ಕಾಚಾರಗಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next