Advertisement

ಕೋವಿಡ್‌ಗೆ ಸಡ್ಡು ಹೊಡೆಯಲಿರುವ ಯುಎಸ್‌ ಓಪನ್‌ ಗ್ರಾನ್‌ಸ್ಲಾಮ್‌

09:09 PM Aug 30, 2020 | sudhir |

ನ್ಯೂಯಾರ್ಕ್: ಕೋವಿಡ್‌-19 ಕಾಲದ ಮೊದಲ ಗ್ರಾನ್‌ಸ್ಲಾಮ್‌ ಎಂಬ ಹೆಗ್ಗಳಿಕೆಯೊಂದಿಗೆ ಪ್ರತಿಷ್ಠಿತ ಯುಎಸ್‌ ಓಪನ್‌ ಪಂದ್ಯಾವಳಿ ಸೋಮವಾರದಿಂದ ನ್ಯೂಯಾರ್ಕ್‌ನ “ಫ್ಲಶಿಂಗ್‌ ಮೀಡೋಸ್‌’ನಲ್ಲಿ ಆರಂಭವಾಗಲಿದೆ. ಕೋವಿಡ್ ಭೀತಿ, ಸ್ಟಾರ್‌ ಆಟಗಾರರ ಗೈರು, ಪ್ರೇಕ್ಷಕರ ನಿರ್ಬಂಧದಿಂದ ಕಳೆಗುಂದಲಿರುವ ಈ ಪಂದ್ಯಾವಳಿ ಜೈವಿಕ ಸುರಕ್ಷಾ ವಲಯದಲ್ಲಿ ಸಾಗಲಿದೆ.

Advertisement

ಕೋವಿಡ್‌-19 ಮಹಾಮಾರಿಗೆ ಸಡ್ಡು ಹೊಡೆಯುವ ಮೂಲಕ ಈ ಪಂದ್ಯಾವಳಿ ಯಶಸ್ವಿಯಾಗಿ ಸಾಗಲಿದೆ ಎಂಬುದು ಸಂಘಟಕರ ವಿಶ್ವಾಸ. ಶನಿವಾರವಷ್ಟೇ ಇಲ್ಲಿ ಮುಗಿದ “ಸದರ್ನ್ ಆ್ಯಂಡ್‌ ವೆಸ್ಟರ್ನ್’ ಪಂದ್ಯಾವಳಿಯ ಯಶಸ್ಸು ಯುಎಸ್‌ ಓಪನ್‌ಗೆ ಸ್ಫೂರ್ತಿಯಾಗಲಿದೆ ಎಂಬುದೊಂದು ಲೆಕ್ಕಾಚಾರ.

ಕೊರೊನಾದಿಂದ ಅತೀ ಹೆಚ್ಚು ಆಘಾತ ಹಾಗೂ ಜೀವಹಾನಿಗೊಳಗಾದ ಅಮೆರಿಕದಲ್ಲೇ ಗ್ರಾನ್‌ಸ್ಲಾಮ್‌ ಪಂದ್ಯಾವಳಿ ನಡೆಯುತ್ತಿರುವುದು ಕ್ರೀಡಾಜಗತ್ತಿಗೊಂದು ದಿಕ್ಸೂಚಿ ಆಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಸ್ಟಾರ್‌ ಆಟಗಾರರು ಪಾಲ್ಗೊಳ್ಳದಿರುವುದರಿಂದ ನಷ್ಟವೇನೂ ಇಲ್ಲ. ಯಾರೇ ಆಡಲಿ, ಬಿಡಲಿ… ಯಾರು ಬೇಕಾದರೂ ಚಾಂಪಿಯನ್‌ ಆಗಿ ಮೂಡಿಬರಲಿ… ಪಂದ್ಯಾವಳಿ ಯಶಸ್ಸು ಕಾಣಬೇಕಾದುದು ಮುಖ್ಯ ಎಂಬುದಷ್ಟೇ ಇಲ್ಲಿನ ಉದ್ದೇಶ ಹಾಗೂ ಗುರಿ. ಈ ಮೂಲಕ ಕ್ರೀಡಾಲೋಕ ಕೊರೊನಾ ಭೀತಿಯಿಂದ ಮುಕ್ತವಾಗಬೇಕಿದೆ.

ಸ್ಟಾರ್‌ಗಳಿಲ್ಲದ ಟೂರ್ನಿ
2019ರ ಚಾಂಪಿಯನ್‌ ರಫೆಲ್‌ ನಡಾಲ್‌, ಸ್ವಿಸ್‌ ಲೆಜೆಂಡ್‌ ರೋಜರ್‌ ಫೆಡರರ್‌, ನಿಕ್‌ ಕಿರ್ಗಿಯೋಸ್‌, ಕೀ ನಿಶಿಕೊರಿ, ಅಗ್ರ ರ್‍ಯಾಂಕಿಂಗ್‌ನ ಆ್ಯಶ್ಲಿ ಬಾರ್ಟಿ, ನಂ.2 ಆಟಗಾರ್ತಿ ಸಿಮೋನಾ ಹಾಲೆಪ್‌, ಎಲಿನಾ ಸ್ವಿಟೋಲಿನಾ, ಹಾಲಿ ಚಾಂಪಿಯನ್‌ ಬಿಯಾಂಕಾ ಆ್ಯಂಡ್ರಿಸ್ಕೂ, ಕಿಕಿ ಬರ್ಟೆನ್ಸ್‌ ಮೊದಲಾದವರೆಲ್ಲ ಈ ಕೂಟದಿಂದ ದೂರ ಉಳಿದಿದ್ದಾರೆ. ಹೀಗಾಗಿ ನೊವಾಕ್‌ ಜೊಕೋವಿಕ್‌ ಮತ್ತು ಸೆರೆನಾ ವಿಲಿಯಮ್ಸ್‌ ಪಾಲಿಗೆ ನೂತನ ಇತಿಹಾಸ ಬರೆಯಲು ಈ ಪಂದ್ಯಾವಳಿ ವೇದಿಕೆ ಆಗುವ ಸಾಧ್ಯತೆ ಇದೆ.

ಕಳೆದ 7 ಗ್ರಾನ್‌ಸ್ಲಾಮ್‌ ಕೂಟಗಳಲ್ಲಿ 5 ಸಲ ಚಾಂಪಿಯನ್‌ ಆಗಿ ಮೂಡಿಬಂದಿರುವ ಜೊಕೋವಿಕ್‌ ಪುರುಷರ ವಿಭಾಗದ ನೆಚ್ಚಿನ ಆಟಗಾರ. ಗೆದ್ದರೆ 4ನೇ ಯುಎಸ್‌ ಓಪನ್‌ ಒಲಿಯಲಿದೆ. ಆಗ ಇವರ ಗ್ರಾನ್‌ಸ್ಲಾಮ್‌ ಪ್ರಶಸ್ತಿಗಳ ಸಂಖ್ಯೆ 18ಕ್ಕೆ ಏರುತ್ತದೆ. ನಡಾಲ್‌ (19) ಮತ್ತು ಫೆಡರರ್‌ಗೆ (20) ಇನ್ನಷ್ಟು ಹತ್ತಿರವಾಗುತ್ತಾರೆ.

Advertisement

ಜೊಕೋವಿಕ್‌ ಸೆಮಿಫೈನಲ್‌ನಲ್ಲಿ ಸ್ಟೆಫ‌ನಸ್‌ ಸಿಸಿಪಸ್‌ ಅಥವಾ ಅಲೆಕ್ಸಾಂಡರ್‌ ಜ್ವೆರೇವ್‌ ಸವಾಲನ್ನು ಎದುರಿಸುವ ಸಾಧ್ಯತೆ ಇದೆ. ಫೈನಲ್‌ನಲ್ಲಿ ಡೊಮಿನಿಕ್‌ ಥೀಮ್‌ ಎದುರಾಗಬಹುದೆಂಬುದು ಟೆನಿಸ್‌ ಪಂಡಿತರ ಲೆಕ್ಕಾಚಾರ.

ಕೋರ್ಟ್‌ ದಾಖಲೆಯತ್ತ ಸೆರೆನಾ
ಕಳೆದ ವರ್ಷದ ತವರಿನ ಕೂಟದ ಫೈನಲ್‌ನಲ್ಲಿ ಎಡವಿದ್ದ ಸೆರೆನಾ ವಿಲಿಯಮ್ಸ್‌ಗೆ ಈ ಬಾರಿ ಅದೃಷ್ಟ ಒಲಿದೀತೇ ಎಂಬ ಕುತೂಹಲವಿದೆ. ಗೆದ್ದರೆ ಮಾರ್ಗರೇಟ್‌ ಕೋರ್ಟ್‌ ಅವರ 24 ಗ್ರಾನ್‌ಸ್ಲಾಮ್‌ ದಾಖಲೆಯನ್ನು ಸೆರೆನಾ ಸರಿದೂಗಿಸಲಿದ್ದಾರೆ.

ಸ್ಟಾರ್‌ ಆಟಗಾರರನೇಕರು ಗೈರಾಗಿದ್ದಾರೆ ಎಂಬ ಕಾರಣಕ್ಕಾಗಿ ಜೊಕೋವಿಕ್‌ ಮತ್ತು ಸೆರೆನಾ ಮೇಲೆ ಬೆಟ್‌ ಕಟ್ಟುವವರ ಸಂಖ್ಯೆ ಜಾಸ್ತಿ ಇರಬಹುದು, ಕೊನೆಯಲ್ಲಿ ದೊಡ್ಡ ಏರುಪೇರಿನ ಫ‌ಲಿತಾಂಶದೊಂದಿಗೆ ಕೂಟ ಮುಗಿಯುವ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ!

Advertisement

Udayavani is now on Telegram. Click here to join our channel and stay updated with the latest news.

Next