Advertisement

US ಓಪನ್‌ ಇಂದಿನಿಂದ: ನ್ಯೂಯಾರ್ಕ್‌ ಟೆನಿಸ್‌ ಗಾದಿಗೆ ಪೈಪೋಟಿ

01:02 AM Aug 26, 2024 | Team Udayavani |

ನ್ಯೂಯಾರ್ಕ್‌: ವಿಶ್ವದ ಅಗ್ರಮಾನ್ಯ ಟೆನಿಸಿಗರ ಅಖಾಡವಾಗಿರುವ ವರ್ಷಾಂತ್ಯದ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಪಂದ್ಯಾವಳಿ ಸೋಮವಾರ ನ್ಯೂಯಾ ರ್ಕ್‌ನಲ್ಲಿ ಆರಂಭವಾಗಲಿದೆ. ಮೊನ್ನೆ ಯಷ್ಟೇ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ ಹುರುಪಿನಲ್ಲಿರುವ ನೊವಾಕ್‌ ಜೊಕೋವಿಕ್‌ ಪ್ರಶಸ್ತಿ ಉಳಿಸಿಕೊಳ್ಳುವರೇ, ಫಾರ್ಮ್ ಇಲ್ಲದೇ ಪರದಾಡುತ್ತಿರುವ ವನಿತಾ ವಿಭಾಗದ ಚಾಂಪಿಯನ್‌ ಕೊಕೊ ಗಾಫ್ ಎಲ್ಲಿಯ ತನಕ ಓಟ ಬೆಳೆಸಿಯಾರು ಎಂಬುದು ಈ ಕೂಟದ ದೊಡ್ಡ ಕುತೂಹಲ.

Advertisement

ಕೂಟದ ಅಗ್ರ ಶ್ರೇಯಾಂಕ ಪಡೆದಿ ರುವ ಜಾನಿಕ್‌ ಸಿನ್ನರ್‌ ಮತ್ತು ಇಗಾ ಸ್ವಿಯಾಟೆಕ್‌, ಪ್ರಬಲ ಸ್ಪರ್ಧಿಯಾಗಿರುವ ಕಾರ್ಲೋಸ್‌ ಅಲ್ಕರಾಜ್‌ ಅವರೆಲ್ಲ ನೆಚ್ಚಿನ ಆಟಗಾರರಾಗಿದ್ದಾರೆ. ಅಲ್ಕ ರಾಜ್‌ ಅಭ್ಯಾಸದ ವೇಳೆ ಪಾದ ಉಳುಕಿಸಿ ಕೊಂಡರೂ ಇದೊಂದು ಗಂಭೀರ ಸಮಸ್ಯೆ ಅಲ್ಲ ಎಂದಿದ್ದಾರೆ. ಅವರು ಈ ವರ್ಷದ ಫ್ರೆಂಚ್‌ ಓಪನ್‌ ಹಾಗೂ ವಿಂಬಲ್ಡನ್‌ ಚಾಂಪಿಯನ್‌ ಎಂಬುದನ್ನು ಮರೆಯುವಂತಿಲ್ಲ. ವಿಂಬಲ್ಡನ್‌ ಫೈನಲ್‌ನಲ್ಲಿ ಅವರು ಜೊಕೋವಿಕ್‌ಗೆ
ಆಘಾತವಿಕ್ಕಿದ್ದರು. ಇದಕ್ಕೆ ಜೊಕೋ ಪ್ಯಾರಿಸ್‌ನಲ್ಲಿ ಒಂದು ಸುತ್ತಿನ ಸೇಡು ತೀರಿ ಸಿಕೊಂಡಿದ್ದಾರೆ, ಆದರೆ ನ್ಯೂಯಾರ್ಕ್‌ ನಲ್ಲಿ ಸ್ಪೇನಿಗನನ್ನು ಸೋಲಿಸಿದರಷ್ಟೇ ಅವರಿಗೆ ಸಮಾಧಾನ!

ಸಿನ್ನರ್‌ ಹಾಟ್‌ ಫಾರ್ಮ್
ಹಾಗೆಯೇ ಪ್ರಚಂಡ ಫಾರ್ಮ್ ನಲ್ಲಿರುವ ಇಟಲಿಯ ಜಾನಿಕ್‌ ಸಿನ್ನರ್‌ ಇತ್ತೀಚೆಗಷ್ಟೇ “ಪಾಸಿಟಿವ್‌’ ಸುಳಿಯಲ್ಲಿ ಸಿಲುಕಿದ್ದರು. ಆದರೆ ಇದು ಅರಿಯದೇ ಆದ ತಪ್ಪು ಎಂದು ಸ್ವತಂತ್ರ ಟ್ರಿಬ್ಯುನಲ್‌ ತೀರ್ಪು ನೀಡಿರುವುದು ಸಿನ್ನರ್‌ ಆತ್ಮ ವಿಶ್ವಾಸವನ್ನು ಸಹಜವಾಗಿಯೇ ಹೆಚ್ಚಿಸಿದೆ. ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿಯೊಂದಿಗೆ ಮೊದಲ ಗ್ರ್ಯಾನ್‌ಸ್ಲಾಮ್‌ ಗೆದ್ದ ಸಿನ್ನರ್‌, ಮೊನ್ನೆಯಷ್ಟೇ ಸಿನ್ಸಿನಾಟಿ ಮಾಸ್ಟರ್ ಚಾಂಪಿಯನ್‌ ಕೂಡ ಆಗಿದ್ದರು. ಇವರ ಮೊದಲ ಸುತ್ತಿನ ಎದುರಾಳಿ ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್‌. ಪುರುಷರ ಡ್ರಾದಲ್ಲಿ ಸಿನ್ನರ್‌ ಮತ್ತು ಜೊಕೋವಿಕ್‌ ವಿರುದ್ಧ ಗುಂಪಿನಲ್ಲಿದ್ದಾರೆ.

ವನಿತಾ ವಿಭಾಗದಲ್ಲಿ ಒಲಿಂಪಿಕ್‌ ಚಾಂಪಿಯನ್‌ ಜೆಂಗ್‌ ಕ್ವಿನ್ವೆನ್‌, ಅರಿನಾ ಸಬಲೆಂಕಾ ಪ್ರಬಲ ಸ್ಪರ್ಧಿಗಳಾಗಿದ್ದಾರೆ. ಇವರಿಬ್ಬರು ಕ್ವಾರ್ಟರ್‌ ಫೈನಲ್‌ನಲ್ಲಿ ಎದುರಾಗುವ ಸಾಧ್ಯತೆ ಇದೆ. ಆಗ ಇದು ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯ ರೀ ಮ್ಯಾಚ್‌ ಆಗಲಿದೆ. ಇಲ್ಲಿ ಸಬಲೆಂಕಾ ಜಯ ಸಾಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next